12ನೇ ಶತಮಾನದ ವಚನಕಾರ, ಕಾಯಕಜೀವಿ ಮಡಿವಾಳ ಮಾಚಿದೇವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಬೀದರ ತಾಲೂಕು ತಹಶೀಲ್ದಾರ್ ದಿಲಶಾದ ಮಹತ್ ಹೇಳಿದರು.
ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಜಗತ್ತಿನಲ್ಲಿ ಅಧರ್ಮ ತಾಂಡವವಾಡುವಾಗ ಮಾಹಾನ್ ಪುರುಷರು ಜನಿಸುತ್ತಾರೆ. ಮಡಿವಾಳ ಮಾಚಿದೇವರ ಎಲ್ಲಾ ವಚನಗಳನ್ನು ಓದಲು ಆಗದಿದ್ದರು ಅವರ ನಾಲ್ಕು ವಚನಗಳನ್ನಾದರೂ ಓದಿ ಅರ್ಥೈಸಿಕೊಂಡರೆ ಅವರ ಜಯಂತಿ ಆಚರಿಸಿದ್ದು ಸಾರ್ಥಕವಾಗುತ್ತದೆ” ಎಂದು ಹೇಳಿದರು.
ಬೀದರ್ ಅಕ್ಕಮಹಾದೇವಿ ಮಹಾವಿದ್ಯಾಲಯದ ಉಪನ್ಯಾಸಕ ಶಿವಶರಣಪ್ಪಾ ಹುಗ್ಗಿ ಪಾಟೀಲ ಅವರು ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡಿ, “ಮಡಿವಾಳ ಮಾಚಿದೇವರು 12ನೇ ಶತಮಾನದ ಮಾಹಾನ್ ಶರಣ, ತ್ಯಾಗಮಯಿ ಹಾಗೂ ಮಾನವೀಯತೆಯ ಸಂದೇಶ ಸಾರಿದ್ದರು” ಎಂದರು.
ಸತ್ಯ ಸಂಕಲ್ಪ ಶಕ್ತಿಯಾಗಿದ್ದ ಮಾಚಿದೇವರು ದೇವರ ಹಿಪ್ಪರಗಿಯಲ್ಲಿ ಜನಿಸಿದ್ದ, ಅವರು ಬಸವಕಲ್ಯಾಣದಲ್ಲಿ ಬಸವಣ್ಣನವರು ಎಲ್ಲಾ ಶರಣರಿಗೆ ಕಾಯಕದ ಮೂಲಕ ಜಾತಿ ರಹಿತ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿದು ಬಸವಕಲ್ಯಾಣಕ್ಕೆ ಬಂದು ಕಾಯಕ ಚಳವಳಿಯಲ್ಲಿ ಭಾಗಿಯಾಗಿದ್ದರು. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ್ದರು. ಮಾನವರು ಎಲ್ಲರೂ ಒಂದೇ ಎಂದು ಅಂದಿನ ಶರಣರು ತಮ್ಮ ವಚನಗಳ ಮೂಲಕ ಸಾರಿ ಸಾಮಾಜಿಕ ಸಮಾನತೆಗಾಗಿ ಕಲ್ಯಾಣದಲ್ಲಿ ಕ್ರಾಂತಿಯನ್ನೆ ಮಾಡಿದ್ದರು” ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಚಾಲನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ʼಗೋದಿ ಮೀಡಿಯಾʼ ಅಂದ್ರೇನು? ಇಲ್ಲಿದೆ ನೋಡಿ
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ್ ಮಡಿವಾಳ, ಗೌರವ ಅಧ್ಯಕ್ಷ ಬಾಬುರಾವ್ ಮಡಿವಾಳ, ಕಲಬುರಗಿ ವಿಭಾಗದ ಕಾರ್ಯಾಧ್ಯಕ್ಷ ದಿಗಂಬರ ಮಡಿವಾಳ, ಮಹೇಶ ಮಡಿವಾಳ, ಸೇರಿದಂತೆ ಮಡಿವಾಳ ಸಮಾಜವರು ಉಪಸ್ಥಿತರಿದ್ದರು. ಶಿವಕುಮಾರ ಪಾಂಚಾಳ ತಂಡದಿಂದ ಮಡಿವಾಳ ಮಾಚಿದೇವರ ವಚನ ಗೀತೆ ನಡೆಯಿತು. ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು.