ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಮತ್ತೊಮ್ಮೆ ಅನಾಮದೇಯ ಕೊಲೆ ಬೆದರಿಕೆ ಪತ್ರ ಬಂದಿದೆ. ಆಗಸ್ಟ್ 8ರಂದೇ ಜೀವ ಬೆದರಿಕೆ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಿತ್ತೂರು ಪೊಲೀಸರಿಗೆ ಸ್ವಾಮೀಜಿ ದೂರು ನೀಡಿದ್ದಾರೆ. ‘ಸ್ವಾಮೀಜಿ ಅವರೊಂದಿಗೆ ನಾವಿದ್ದೇವೆ. ಇಂತಹ ಬೆದರಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದು ನಾನಾ ಸಮುದಾಯಗಳ ಮುಖಂಡರು ಮತ್ತು ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸ್ವಾಮೀಜಿ ಅವರಿಗೆ ಬಂದಿರುವ ಬೆದರಿಕೆ ಪತ್ರದಲ್ಲಿ, “2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು, 2023ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಕೊಡ ತುಂಬಿದೆ, ಬೇಗ ನಿನ್ನ ತಿಥಿ ಬಗ್ಗೆ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನ್ನ ಘೋರ ಹತ್ಯೆ ಆಗುತ್ತೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ. ಇನ್ನು ದಿನಗಳನ್ನು ಎಣಿಸು” ಎಂದು ಪೋಸ್ಟ್ ಮೂಲಕ ಜೀವ ಬೆದರಿಕೆ ಪತ್ರ ಮಠಕ್ಕೆ ಬಂದಿದೆ.
2020ರಲ್ಲಿಯೂ ಹತ್ಯೆ ಮಾಡುವುದಾಗಿ ಸ್ವಾಮೀಜಿಗೆ ಜೀವ ಬೆದರಿಕೆ ಪತ್ರವೊಂದು ಬಂದಿತ್ತು. ಇದೀಗ ಮತ್ತೆ ಜೀವ ಬೆದರಿಕೆ ಪತ್ರ ಬಂದಿದ್ದು, ಈವರೆಗೂ 5ಕ್ಕೂ ಹೆಚ್ಚು ಬಾರಿ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬರೆದಿದ್ದಾರೆ.
ತಮ್ಮ ನಿಷ್ಠುರ ಮಾತುಗಳಿಂದಲೇ ರಾಜ್ಯದಲ್ಲಿ ಬಸವ ತತ್ವದ ಪ್ರಚಾರಕರಾಗಿ ಖ್ಯಾತಿ ಗಳಿಸಿರುವ ನಿಜಗುಣಾನಂದ ಸ್ವಾಮೀಜಿ, ಪ್ರಮುಖ ಲಿಂಗಾಯತ ಸ್ವಾಮೀಜಿಗಳಲ್ಲಿ ಒಬ್ಬರು. ಮೂರ್ತಿ ಪೂಜೆ, ಮೌಢ್ಯ ವಿರೋಧಿ ವಿಚಾರಗಳನ್ನು ಅವರು ತಮ್ಮ ಪ್ರವಚನದಲ್ಲಿ ನೀಡುತ್ತಲೇ ಬಂದಿದ್ದಾರೆ.
ಪತ್ರದ ಬಗ್ಗೆ ಮಾತನಾಡಿರುವ ನಿಜಗುಣಾನಂದ ಸ್ವಾಮೀಜಿ, “ಕಳೆದ 15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ. ಒಂದೇ ತರಹ ಬರಹದ ಪತ್ರಗಳು ಬೇರೆ ಬೇರೆ ಭಾಗಗಳಿಂದ ಬರುತ್ತಿವೆ. ಈಗಾಗಲೇ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಕಳೆದ ಐದು ವರ್ಷಗಳಿಂದ ಸತತವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿವೆ. ಪತ್ರ ಬರೆಯುವವರ ಹಾಗೂ ನನ್ನ ಮಧ್ಯೆ ಯಾವುದೇ ದ್ವೇಷ ಇಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಇಂತಹ ಕೊಲೆ ಬೆದರಿಕೆ ಪತ್ರಗಳನ್ನು ನಾನು ‘ಪ್ರೇಮಪತ್ರ’ಗಳೆಂದು ಭಾವಿಸಿದ್ದೇನೆ. ನನಗೆ ಸಾವಿನ ಬಗ್ಗೆ ಭಯವಿಲ್ಲ, ಸೇವೆ ಮಾಡುವುದು ನಿಲ್ಲುತ್ತದೆ ಎನ್ನುವ ಕೊರಗಷ್ಟೇ. ನಾನು ಸಮಾಜದ ಮಗ. ಈ ರೀತಿಯ ಪತ್ರಗಳಿಂದ ಭಕ್ತರಲ್ಲಿ ಆತಂಕ ಸಹಜ. ಪೊಲೀಸರು, ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ತಿಳಿಸಿದ್ದಾರೆ.

ಜೀವ ಬೆದರಿಕೆ ಪತ್ರವನ್ನು ಖಂಡಿಸಿ ಈದಿನ.ಕಾಮ್ ಜೊತೆ ಸಾಹಿತಿ ರಂಜಾನ್ ದರ್ಗಾ, “ನಿಜಗುಣಾನಂದರಿಗೆ ಬಂದಿರುವ ಕೊಲೆ ಬೆದರಿಕೆ ಖಂಡನೀಯ. ನಿಜಗುಣಾನಂದರು ಸತ್ಯವನ್ನು ಹೇಳುತ್ತಿದ್ದಾರೆ. 12ನೇ ಶತಮಾನದಲ್ಲಿ ಶರಣರು ಹೇಳಿದ್ದ ಮಾನವತಾವಾದವನ್ನು ಅವರು ಇಂದು ಪ್ರಚಾರ ಮಾಡುತ್ತಿದ್ದಾರೆ. ಅವರು ಮಾತನಾಡುತ್ತಿರುವುದು ಶರಣರ ಮಾತುಗಳನ್ನು. ಆಗ ಶರಣರ ಮೇಲೂ ದಾಳಿಗಳು ನಡೆದಿದ್ದವು. ಶರಣರ ಕೊಲೆಗಳಾಗಿದ್ದವು. ವಚನಗಳನ್ನು ಸುಟ್ಟುಹಾಕಲಾಗಿತ್ತು. ಶರಣರ ತತ್ವವನ್ನು ಪ್ರಚಾರ ಮಾಡುತ್ತಿರುವ ನಿಜಗುಣಾನಂದರಿಗೆ ಈಗ ಬೆದರಿಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಲಿಂಗಾಯತ ಸಮುದಾಯ, ಕನ್ನಡಿಗರು ಅವರೊಂದಿಗೆ ನಿಲ್ಲಬೇಕು. ಆದರೆ, ಲಿಂಗಾಯತ ಸಮುದಾಯ ಮತ್ತು ಆ ಸಮುದಾಯದ ಯುವಜನರು ನಿಜಗುಣಾನಂದರ ಪರವಾಗಿ ಗಟ್ಟಿಯಾದ ದನಿ ಎತ್ತುತ್ತಿಲ್ಲ. ಆ ಸಮುದಾಯ ಹಾಗೂ ಕನ್ನಡಿಗರು ಒಗ್ಗಟ್ಟಾಗಿ ನಿಜಗುಣಾನಂದರ ಬೆನ್ನಿಗೆ ನಿಲ್ಲಬೇಕು” ಎಂದು ಹೇಳಿದ್ದಾರೆ.
“ನಿಜಗುಣಾನಂದರು ಬ್ರಾಹ್ಮಣರನ್ನು ವಿರೋಧಿಸುತ್ತಿಲ್ಲ. ಬ್ರಾಹ್ಮಣ್ಯ ಮತ್ತು ಪುರೋಹಿತಶಾಹಿ ವಾದವನ್ನು ವಿರೋಧಿಸುತ್ತಿದ್ದಾರೆ. ಬಸವಣ್ಣನವರೂ ಬ್ರಾಹ್ಮಣ್ಯ ಮತ್ತು ಪುರೋಹಿತಶಾಹಿಯನ್ನು ವಿರೋಧಿಸಿದ್ದರು, ಬ್ರಾಹ್ಮಣರನ್ನಲ್ಲ. ಈ ಪುರೋಹಿತಶಾಹಿ ಮನುವಾದವನ್ನು ಪ್ರತಿಪಾದಿಸುತ್ತದೆ. ಮನುವಾದದ ವಿರುದ್ಧ ಮಾನವತಾವಾದವನ್ನು ನಿಜಗುಣಾನಂದರು ಬಿತ್ತುತ್ತಿದ್ದಾರೆ. ಅವರ ಪರವಾಗಿ ಗಟ್ಟಿದನಿ ಸಮಾಜದಿಂದ ಬರಬೇಕು” ಎಂದು ಅವರು ತಿಳಿಸಿದ್ದಾರೆ.
ನಿಜಗುಣಾನಂದರಿಗೆ ಬೆದರಿಕೆ ಪತ್ರ ಬರೆದಿರುವರರನ್ನು ಬಂಧಿಸಬೇಕು ಎಂದು ಒತ್ತಾಯಿಸಿರುವ ಲಿಂಗಾಯತ ಮಹಾಸಭಾದ ಶಿವಾನಂದ ಜಾಮ್ದಾರ್ ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದು, “ಲಿಂಗಾಯತ ಸಮಾಜದಲ್ಲಿ ಪ್ರಖ್ಯಾತರಾಗಿರುವ, ಬಸವ ತತ್ವವನ್ನು ಪ್ರಚಾರ ಮಾಡುತ್ತಿರುವ ನಿಜಗುಣಾನಂದರಿಗೆ ಕೊಲೆ ಬೆದರಿಕೆ ಬಂದಿರುವುದು ಮೊದಲೇನಲ್ಲ. ಇದು ಮೂರನೇ ಬಾರಿ. ಆದರೆ, ಈ ಬಾರಿಯ ಪತ್ರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಹಿಂದೆ ಅವರಿಗೆ ಭದ್ರತೆಯನ್ನು ಸರ್ಕಾರ ನೀಡಿತ್ತು. ಈಗ ಮತ್ತಷ್ಟು ಭದ್ರತೆಯನ್ನು ಸರ್ಕಾರ ನೀಡಬೇಕು. ಈಗಾಗಲೇ ನಾವು ಎಂ.ಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನ ಕಳೆದುಕೊಂಡಿದ್ದೇವೆ. ದಾಬೋಲ್ಕರ್, ಪನ್ಸಾರೆ ಅವರೂ ಮಾನವಪರವಾಗಿ ಕೆಲಸ ಮಾಡಿದ್ದಕ್ಕೆ ಕೊಲೆಯಾದರು. ಅವರೆಲ್ಲರ ಸಾವಿನ ಹಿಂದಿರುವವರನ್ನು ಇನ್ನೂ ಬಂಧಿಸಲಾಗಿಲ್ಲ, ಶಿಕ್ಷ ವಿಧಿಸಲಾಗಿಲ್ಲ. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಕೋಮುವಾದಿ ಶಕ್ತಿಗಳು ಇಂತಹ ಕೃತ್ಯಗಳಿಗೆ ಕೈಹಾಕುತ್ತಿವೆ. ಹೀಗಾಗಿ, ನಿಜಗುಣಾನಂದರಿಗೆ ಸರ್ಕಾರ ಭದ್ರತೆ ನೀಡಬೇಕು. ಕೋಮುವಾದಿ ಶಕ್ತಿಗಳು ಮತ್ತು ಸಂಘಟನೆಗಳಿಗೆ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದ್ದಾರೆ.
ಪತ್ರದ ಕಿಡಿಕಾರಿರುವ ಲಿಂಗಾಯತ ಸಮುದಾಯದ ಮುಖಂಡ ಸಿದ್ದಪ್ಪ ಮೂಲಗೆ, “ಅಂದು ಬಸವಾದಿಗಳನ್ನ, ಮೊನ್ನೆ ಎಂ ಎಂ ಕಲಬುರ್ಗಿಯವರನ್ನ ಬರ್ಬರವಾಗಿ ಹತ್ಯಾಕಾಂಡ ಮಾಡಿದ ಮನಸ್ಥಿತಿಗಳೆ ಇಂದು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರಿಗೆ ಜೀವ ಬೆದರಿಕೆ ಹಾಕುತ್ತಿವೆ. ಇದು ನಿಸ್ಸಂಶಯವಾಗಿ ವಿಚಾರಗಳನ್ನು ಎದುರಿಸಲಾಗದ ಹೇಡಿಗಳ ಹೀನ ಕೃತ್ಯ. ನಾವೆಲ್ಲರೂ ಒಕ್ಕೊರಲಿನಿಂದ ಇದನ್ನು ಖಂಡಿಸಬೇಕಿದೆ ಮತ್ತು ಅವರ ಪರ ನಿಲ್ಲಬೇಕಿದೆ. ನಾನಂತೂ ಇದ್ದದ್ದು ಇದ್ದಂತೆ ಮಾತನಾಡುವ, ವಚನ ಚಳವಳಿಯ ಮೂಲ ಆಶಯಗಳನ್ನು ಜನಮಾನಸಕ್ಕೆ ತಲುಪಿಸುತ್ತಿರುವ ಶ್ರೀಗಳ ಪರ ಇದ್ದೇನೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರಾಜಸ್ಥಾನ : ಮೀಸಲಿಟ್ಟ ನೀರು ಕುಡಿದ ದಲಿತ ವಿದ್ಯಾರ್ಥಿಯ ಮೇಲೆ ಶಿಕ್ಷಕ ಹಲ್ಲೆ
ನಿಜಗುಣಾನಂದರೊಂದಿಗೆ ನಾವಿದ್ದೇವೆ ಎಂದಿರುವ ಜಾಗೃತ ಕರ್ನಾಟಕ ಸಂಘಟನೆಯ ಡಾ. ವಾಸು ಎಚ್.ವಿ ಈದಿನ.ಕಾಮ್ ಜೊತೆ ಮಾತನಾಡಿ, “ನಿಜಗುಣಾನಂದರು ಕನ್ನಡ ನೆಲದ ನಿಜ ಧರ್ಮದ ಪರಂಪರೆಯ ವಕ್ತಾರರು. ಹಾಗಾಗಿ ಹುಸಿ ಧಾರ್ಮಿಕ ವ್ಯಕ್ತಿಗಳಿಗೆ, ದೇವರನ್ನು ಓಟಿಗಾಗಿ ಬಳಸುವವರಿಗೆ ಅವರನ್ನು ಕಂಡರೆ ವಿರೋಧ. ವಿರೋಧ ಮಾಡಲು ಯಾರ ಅಡ್ಡಿಯೂ ಇಲ್ಲ. ಆದರೆ ಕೊಲೆ ಬೆದರಿಕೆ ಹಾಕುವ ಮನುಷ್ಯ ವಿರೋಧಿಗಳನ್ನು ಕರ್ನಾಟಕ ಸಹಿಸುವುದಿಲ್ಲ. ನಾವೆಲ್ಲರೂ ನಿಜಗುಣಾನಂದರ ಜೊತೆಗಿದ್ದೇವೆ” ಎಂದು ಹೇಳಿದ್ದಾರೆ.
ಜೀವ ಬೆದರಿಕೆ ಪತ್ರವನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್, “ಕಲ್ಯಾಣ ಕ್ರಾಂತಿ ಸಮಯದಲ್ಲಿ ಕೂಡ ಬಸವಣ್ಣರಿಗೂ ಹೀಗೆ ಕಿರುಕುಳ ನೀಡಲಾಗಿತ್ತು. ಮೂಢನಂಬಿಕೆ, ವೈಚಾರಿಕತೆ ಬಗ್ಗೆ ಮಾತನಾಡುವ ನಿಜಗುಣಾನಂದ ಸ್ವಾಮೀಜಿಗೂ ಬೆದರಿಕೆ ಬರುತ್ತಿವೆ. ನಾನು ಕೂಡ ಮುಖ್ಯಮಂತ್ರಿ, ಗೃಹಸಚಿವರ ಜೊತೆಗೆ ಮಾತನಾಡುತ್ತೇನೆ. ಆರೋಪಿಗಳ ಬಂಧನದ ಜೊತೆಗೆ ಸ್ವಾಮೀಜಿಯವರಿಗೆ ಭದ್ರತೆ ಒದಗಿಸುವಂತೆ ಕೋರುತ್ತೇನೆ” ಎಂದು ತಿಳಿಸಿದ್ದಾರೆ.