ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಪಕ್ಷಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಬೆಂಬಲಿಸಬೇಕು ಎಂದು ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಹೇಳಿದರು.
ಬೀದರ್‌ನ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಸಮಿತಿ ರಚಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರಕ್ಕೆ ಲಿಂಗಾಯತರು ಮತ ಚಲಾಯಿಸುವ ಮೂಲಕ ಕೋಮುವಾದಿ ಸರ್ಕಾರವನ್ನು ಸೋಲಿಸಬೇಕು ಎಂದು” ಮನವಿ ಮಾಡಿದರು.
“2017ರಲ್ಲಿ ಬೀದರ್‌ನಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಸಾಂವಿಧಾನಿಕ ಮಾನ್ಯತೆಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಂಸದ ಭಗವಂತ ಖೂಬಾರವರನ್ನುಆಹ್ವಾನಿಸಿದರೆ, ಲಿಂಗಾಯತ ಹೋರಾಟದಲ್ಲಿ ಭಾಗವಹಿಸಬಾರದೆಂದು ಸಂಘ ಪರಿವಾರದ ಆದೇಶವಿದೆʼ ಎಂದು ಉತ್ತರಿಸಿದರು. ದೆಹಲಿಯಲ್ಲಿ ಲಿಂಗಾಯತ ಹೋರಾಟ ನಡೆದ ವೇಳೆ ಪೊಲೀಸರು ಸಾವಿರಾರು ಲಿಂಗಾಯತರ ಮೇಲೆ ಲಾಟಿ ಪ್ರಹಾರ ನಡೆಸಿ ಬಂಧಿಸಿದರು. ಆದರೆ ಅಲ್ಲೇ ಇದ್ದ ಭಗವಂತ ಖೂಬಾ ನಮಗೆ ಸ್ಪಂದಿಸಲಿಲ್ಲ. ಇಂತಹ ಲಿಂಗಾಯತ ವಿರೋಧಿ ಸಂಸದರಿಗೆ ಲಿಂಗಾಯತರು ಯಾಕೆ ಮತ ಹಾಕಬೇಕು” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಅಭಿವೃದ್ಧಿ ಪ್ರಚಾರದಿಂದ ಕೋಮು ಧೃವೀಕರಣಕ್ಕೆ ಮೋದಿ ಬದಲಾಗಿದ್ದೇಕೆ? ಗೆಲ್ಲುವುದಾ ದ್ವೇಷ ಭಾಷಣ?
ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆಂದು ಸ್ವಪಕ್ಷೀಯರೇ ಭಗವಂತ ಖೂಬಾ ಅವರನ್ನು ವಿರೋಧಿಸಿ ಟಿಕೆಟ್ ಕೊಡಬೇಡಿ ಎಂದು ಹೈಕಮಾಂಡ್‌ಗೆ ಎಚ್ಚರಿಸಿದರು. ಆದರೆ ಸನಾತನ ಧರ್ಮಕ್ಕೆ ಗೊಂಬೆಯಂತೆ ಕುಣಿಯುವ ವ್ಯಕ್ತಿ ಭಗವಂತ ಖೂಬಾಗೆ ಮತ್ತೆ ಬಿಜೆಪಿ ಟಿಕೆಟ್ ನೀಡಿದೆ. ವೈದಿಕ ಸಿದ್ಧಾಂತ ಒಪ್ಪುವ ಭಗವಂತ ಖೂಬಾರನ್ನು ಸೋಲಿಸುವ ಮೂಲಕ ಲಿಂಗಾಯತರು ಕಲ್ಯಾಣ ನಾಡಿನಲ್ಲಿ ಬಸವತತ್ವ ಸಿದ್ಧಾಂತ ಒಪ್ಪುವ ಸರ್ಕಾರವನ್ನು ಬೆಂಬಲಿಸಬೇಕು” ಎಂದರು.