ಪ್ರೌಢಶಾಲೆಯಲ್ಲಿ ತಯಾರಿಸುವ ಮಧ್ಯಾಹ್ನದ ಬಿಸಿಯೂಟಕ್ಕಾಗಿ ದಿನನಿತ್ಯ 2 ಕಿ.ಮೀ ನಡೆಯಬೇಕಾದ ಪರಿಸ್ಥಿತಿಯನ್ನು ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳ ಎದುರಿಸುತ್ತಿದ್ದಾರೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರ ಚಿತ್ತಾಪುರದ ಲಾಡ್ಲಾಪುರ ಸರ್ಕಾರಿ ಶಾಲೆಯ ಮಕ್ಕಳು ಇಂತಹ ಕಷ್ಟವನ್ನು ಅನುಭವಿಸುತ್ತಿದ್ದಾರೆ.
ಲಾಡ್ಲಾಪುರದಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳು ಬೇರೆ ಬೇರೆ ಕಡೆಗಳಲ್ಲಿವೆ. ಆದರೆ, ಎರಡೂ ಶಾಲೆಗಳಿಗೂ ಇರುವುದು ಒಂದೇ ಅಡುಗೆ ಕೊಠಡಿ. ಅದು ಪ್ರೌಢಶಾಲೆಯಲ್ಲಿದೆ. ಎರಡು ಶಾಲೆಗಳ ನಡುವೆ 1 ಕಿ.ಮೀ ಅಂತರವಿದೆ.
ಹೀಗಾಗಿ, ಮಧ್ಯಾಹ್ನದ ಬಿಸಿಯೂಟ ಪ್ರೌಢಶಾಲೆಯಲ್ಲಿ ತಯಾರಾಗುತ್ತದೆ. ಅದನ್ನು ಸೇವಿಸಲು ಪ್ರಾಥಮಿಕ ಶಾಲೆಯ ಮಕ್ಕಳು ಹೋಗಿ-ಬರಲು ಎರಡು ಕಿ.ಮೀ ನಡೆಯಬೇಕಾಗಿದೆ. ಅದೂ, ರಾಜ್ಯ ಹೆದ್ದಾರಿ ಮತ್ತು ಕೆರೆ ಏರಿಯನ್ನು ಹತ್ತಿ-ಇಳಿದು ಹೋಗಬೇಕು. ಇದರಿಂದಾಗಿ ಮಕ್ಕಳು ನಿತ್ಯವೂ ಯಾತನೆ ಅನುಭವಿಸುವಂತಾಗಿದೆ.
ಈ ಹಿಂದೆ, ಪ್ರೌಢಶಾಲೆಯಲ್ಲಿ ತಯಾರಾದ ಆಹಾರವನ್ನು ಅಡುಗೆ ಸಿಬ್ಬಂದಿಗಳು ಕೊಂಡೊಯ್ದು ಬಡಿಸಿ ಬರುತ್ತಿದ್ದರು. ಆದರೆ, ಈಗ ಅಡುಗೆ ಸಿಬ್ಬಂದಿಗಳ ಕೊರತೆ ಇದೆ. ಪ್ರಾಥಮಿಕ ಶಾಲೆಯಲ್ಲಿ 150 ಮತ್ತು ಪ್ರೌಢಶಾಲೆಯಲ್ಲಿ 450 ಮಕ್ಕಳು – ಒಟ್ಟು 600 ವಿದ್ಯಾರ್ಥಿಗಳಿದ್ದಾರೆ. ಇಷ್ಟು ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅಡುಗೆ ಮಾಡುವವರು ಕೇವಲ 4 ಮಂದಿ ಮಾತ್ರ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಡುಗೆ ಸಿಬ್ಬಂದಿಗಳೂ ಇಲ್ಲ. ಹೀಗಾಗಿ, ಪ್ರಾಥಮಿಕ ಶಾಲೆ ಮಕ್ಕಳನ್ನೇ ಊಟಕ್ಕೆ ಪ್ರೌಢಶಾಲೆಗೆ ಕರೆಸಲಾಗುತ್ತಿದೆ ಎಂದು ವರದಿಯಾಗಿದೆ.
ಅಗತ್ಯವಿರುವಷ್ಟು ಅಡುಗೆ ಸಿಬ್ಬಂದಿಗಳನ್ನು ನೇಮಿಸಬೇಕು. ಮೊದಲಿನಂತೆ ಶಾಲೆಗೆ ಅಡುಗೆ ಸಿಬ್ಬಂದಿಯೇ ಊಟವನ್ನು ಕೊಂಡೊಯ್ಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.