ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಟೋಲ್ ಗೇಟ್‌ನಲ್ಲಿ ಸ್ಥಳೀಯ ಪ್ರಯಾಣಿಕರಿಗೆ ಮತ್ತೆ ಕಿರುಕುಳ ಆರಂಭಗೊಂಡಿದ್ದು, ಈ ಬಗ್ಗೆ ಪ್ರಯಾಣಿಕರು ಪ್ರಶ್ನಿಸಿದರೆ ಗೂಂಡಾಗಿರಿ ಪ್ರದರ್ಶಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಮೊದಲು 5 ಕಿಲೋ ಮೀಟರ್ ವ್ಯಾಪ್ತಿಯ ಗಡಿ ಪ್ರದೇಶದ ಜನತೆಗೆ ಟೋಲ್ ಗೇಟ್‌ನಲ್ಲಿ ಉಚಿತ ಪ್ರಯಾಣವನ್ನು ಅನುಮತಿಸಲಾಗಿತ್ತು. ಆದರೆ ಬಳಿಕ ಕೇರಳದವರನ್ನು ಕಡೆಗಣಿಸಿ ಕರ್ನಾಟಕದ ತಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವವರಿಗೆ ಮಾತ್ರ ಉಚಿತ ಸೌಕರ್ಯವನ್ನು ನೀಡಲಾಗಿತ್ತು. ಈಗಲೂ ಅದೇ ಮುಂದುವರಿಯುತ್ತಿದೆ.
ಕೇರಳದ ಗಡಿ ಭಾಗದವರಿಗೆ ಒಂದು ನ್ಯಾಯ ಅದೇ ರೀತಿ ಕರ್ನಾಟಕದ ಗಡಿಯಲ್ಲಿರುವವರಿಗೆ ಇನ್ನೊಂದು ನ್ಯಾಯ. ಇದನ್ನು ಪ್ರಶ್ನಿಸುವಾಗಲೂ ಟೋಲ್ ಗೇಟ್ ಗೂಂಡಾ ಪಡೆಯನ್ನು ಮುಂದಿಟ್ಟು ಅಧಿಕಾರಿಗಳು ಗಡಿಭಾಗದ ಮಂಜೇಶ್ವರದವರಿಗೆ ಫಾಸ್ಟ್ ಟ್ಯಾಗ್ ಮಾಡಬೇಕು, ಇಲ್ಲವಾದರೆ ಲೋಕಲ್ ಪಾಸ್ ಮಾಡಬೇಕೆಂದು ಕಡ್ಡಾಯಗೊಳಿಸಿದ್ದರು.
₹340 ಪಾವತಿಸಿ ಲೋಕಲ್ ಪಾಸ್ ಮಾಡಿಸಿಕೊಂಡವರೂ ಕೂಡಾ ಟೋಲ್ ಗೇಟ್‌ನಲ್ಲಿ ಹಣ ಪಾವತಿಸಬೇಕಾದ ದುಃಸ್ಥಿತಿ ಎದುರಾಗಿದೆ. ಕೆಲ ದಿನಗಳ ಹಿಂದೆ ಈ ವಿಷಯವನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರಲು ಮುಂದಾಗಿ ವಾಹನಗಳನ್ನು ತಾಸುಗಟ್ಟಲೆ ಟೋಲ್ ಗೇಟ್‌ನಲ್ಲೇ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ಬಳಿಕ ಎಚ್ಚೆತ್ತ ಅಧಿಕಾರಿಗಳು ಇನ್ನು ಮುಂದಕ್ಕೆ ಈ ರೀತಿ ಸಂಭವಿಸುವುದಿಲ್ಲವೆಂದು ವಾಗ್ದಾನ ನೀಡಿದಾಗ ಸ್ಥಳೀಯರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿದ್ದರು. ಈಗ ಪುನಃ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಡೆಂಘೀ ನಿಯಂತ್ರಣಕ್ಕೆ ಜನಸಾಮಾನ್ಯರೂ ಸಹಕರಿಸಬೇಕು: ಸಚಿವ ಶರಣಪ್ರಕಾಶ್ ಪಾಟೀಲ್
“ಹಣ ಪಾವತಿಸಿ ಲೋಕಲ್ ಪಾಸ್ ಪಡೆದವರಿಂದಲೂ ಫಾಸ್ಟ್ ಟ್ಯಾಗ್ ಖಾತೆಯಿಂದ ಹಣ ಕಟ್ ಆಗುತ್ತಿದೆ. ಊರಿನ ಜನತೆಗೆ ಶಾಪವಾಗಿರುವ ಈ ಟೋಲ್ ಗೇಟ್‌ನಲ್ಲಿ ಪ್ರಯಾಣಿಕರಿಗೆ ನಿರಂತರ ಕಿರುಕುಳ ನೀಡುತ್ತಿರುವ ಇಲ್ಲಿಯ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.