ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆಗಳು, ಚರ್ಚೆಗಳು ಹಾಗೂ ಸಭೆಗಳು ನಡೆಯುತ್ತಿವೆ. ನಾನಾ ಕ್ಷೇತ್ರಗಳಲ್ಲಿ ಹಲವಾರು ಆಕಾಂಕ್ಷಿಗಳ ಹೆಸರು ಮುನ್ನೆಲೆಯಲ್ಲಿದೆ. ಸದ್ಯಕ್ಕೆ ಚಿಕ್ಕೋಡಿ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಗಾಗಿ ಸಚಿವ ಸತೀಶ್ ಜಾರಕಿಹೊಳಿ ಸಭೆ ನಡೆಸಿದ್ದು, ಕ್ಷೇತ್ರಕ್ಕೆ ಪ್ರಿಯಾಂಕಾ ಜಾರಕಿಹೊಳಿ ಮತ್ತು ಲಕ್ಷ್ಮಣರಾವ್ ಚಿಂಗಳೆ ಹೆಸರುಗಳು ಕೇಳಿಬಂದಿವೆ.
ಬೆಂಗಳೂರಿನ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮಂಗಳವಾರ ರಾತ್ರಿ ಸಭೆ ನಡೆದಿದೆ. ಸಭೆಯಲ್ಲಿ ಸತೀಶ್ ಅವರು ಪುತ್ರಿ ಪ್ರಿಯಾಂಕಾ ಮತ್ತು ಕಾಂಗ್ರೆಸ್ ಚಿಕ್ಕೋಡಿ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳಿ ಹೆಸರುಗಳು ಪ್ರಸ್ತಾಪವಾಗಿವೆ. ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮುಂದೆ ಪ್ರಸ್ತಾಪಿತ ಪಟ್ಟಿ ಇಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಹೆಚ್ಚಿನ ಪ್ರಾಬಲ್ಯ ಹೊಂದಿದ್ದಾರೆ. ಅವರು ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೇರಿದ್ದು, ಅವರ ಪುತ್ರಿಗೆ ಟಿಕೆಟ್ ನೀಡದರೆ, ಗೆಲುವು ಸುಲಭ ಎಂಬ ಮಾತುಗಳಿವೆ. ಅಲ್ಲದೆ, ಕುರುಬ ಸಮುದಾಯದ ಮುಖಂಡರಾದ ಲಕ್ಷ್ಮಣರಾವ್ ಚಿಂಗಳೆ ಅವರಿಗೆ ಟಿಕೆಟ್ ನೀಡಿದರೂ, ಮತದಾರರನ್ನು ಸೆಳೆಯಬಹುದು ಎನ್ನಲಾಗುತ್ತಿದೆ.
ಕಣಕ್ಕಿಳಿಯುವ ಅಭ್ಯರ್ಥಿಗಳು ಎಲ್ಲ ಸಮುದಾಯದ ಮತದಾರರು ಒಪ್ಪುವಂತವರಾಗಿರಬೇಕು. ಅಭ್ಯರ್ಥಿಗಳಿಗೆ ಶಾಸಕರಿಂದ ವಿರೋಧ ಬರಬಾರದು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಚಿಕ್ಕೋಡಿ ಟಿಕೆಟ್‌ಗಾಗಿ ಆರು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ, ಪ್ರಿಯಾಂಕಾ ಮತ್ತು ಚಿಂಗಳೆ ಅವರನ್ನು ಅಂತಿಮ ಪ್ರಸ್ತಾವನೆ ಪಟ್ಟಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ಶಾಸಕ ಲಕ್ಷ್ಮಣ ಸವದಿ, ವಿಶ್ವಾಸ ವೈದ್ಯ, ರಾಜು ಕಾಗೆ, ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳಕರ, ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಅರ್ಜುನ ನಾಯಕವಾಡಿ, ಮುಖಂಡರಾದ ಎಚ್.ಬಿ ಘಾಟಗೆ, ಮಾರುತಿ ಮೋಹಿತೆ ಸೇರಿದಮತೆ ಬೆಳಗಾವಿಯ ಹಲವಾರು ಮುಖಂಡರು ಇದ್ದರು.