ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಂಗಳವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ತಟ್ಟಿದ್ದು, ಶೋಧ ನಡೆಸುತ್ತಿದ್ದಾರೆ.
ಬೆಂಗಳೂರು, ಮಂಡ್ಯ, ರಾಮನಗರ, ಬಳ್ಳಾರಿ ಸೇರಿದಂತೆ ರಾಜ್ಯದ ಸುಮಾರು 30 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ10 ಕಡೆ, ಬಳ್ಳಾರಿಯಲ್ಲಿ 7 ಕಡೆ ಸೇರಿದಂತೆ ರಾಜ್ಯಾದ್ಯಂತ ಏಕಕಾಲಕ್ಕೆ 30 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಬಿಬಿಎಂಪಿ ಅಧಿಕಾರಿ ಅವರು ಮಂಜು ಸಂಬಂಧಿಗಳಿರುವ ಮಂಡ್ಯದ ಮನೆಗಳ ಮೇಲೆ ದಾಳಿ ನಡೆದಿದೆ. ಮಂಡ್ಯ ಜಿಲ್ಲೆಯ ಹಲಗೂರು ಗ್ರಾಮ ಪಂಚಾಯತಿ ಸದಸ್ಯ ಸುರೇಂದ್ರ ಎಂಬುವವರ ಮನೆಯಲ್ಲಿ ಶೋದ ನಡೆದಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಬೆಸ್ಕಾಂ ಜನರಲ್ ಮ್ಯಾನೇಜರ್ ಆಗಿರುವ ನಾಗರಾಜ್ ವಿರುದ್ಧ ಅಕ್ರಮ ಆಸ್ತಿ ಆರೋಪ ಕೇಳಿ ಬಂದಿದ್ದು, ಕೂಡ್ಲಿಗಿ ಮತ್ತು ಗುಡೇಕೋಟೆಯಲ್ಲಿರುವ ನಿವಾಸ, ಪೆಟ್ರೋಲ್ ಬಂಕ್ ಹಾಗೂ ಸಂಬಂಧಿಕರ ನಿವಾಸದ ಮೇಲೆ ಬಳ್ಳಾರಿ ಲೋಕಾಯುಕ್ತ ಎಸ್.ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ವಿಜಯನಗರ ಜಿಲ್ಲೆಯ ಕುಂದಣ ಪಿಡಿಒ ಪದ್ಮನಾಬ್ ಅವರಿಗೆ ಸೇರಿದ ಮೂರು ಮನೆ ಮೇಲೆ ದಾಳಿ ನಡೆದಿದೆ. ಅಲ್ಲದೆ, ದಾಬಸ್ಪೇಟೆ ಹಾಗೂ ತುಮಕೂರಿನಲ್ಲಿ ಸಹ ಪದ್ಮನಾಬ್ಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ.