ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಮೇಲೆ ಕರ್ನಾಟಕದ ಹಲವೆಡೆ ಸರ್ಕಾರದ ನಾನಾ ಇಲಾಖೆಗಳ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಅಕ್ಟೋಬರ್ 30 ರಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ಸರ್ಕಾರದ 17 ನಾನಾ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ 90 ಕಡೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಚಿತ್ರದುರ್ಗದಲ್ಲಿ ಭ್ರಷ್ಟರ ಬೇಟೆಗೆ ಮುಂದಾದ ಲೋಕಾಯುಕ್ತ ಅಧಿಕಾರಿಗಳು
ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಚಿತ್ರದುರ್ಗದ ಹಿರಿಯೂರಿನಲ್ಲಿ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣಮೂರ್ತಿ ಮನೆ ಮೇಲೆ ಲೋಕಾಯುಕ್ತರು ದಾಳಿ ಅ.30 ರಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಇಬ್ಬರು ಅಧಿಕಾರಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಹಿರಿಯೂರು ಪಟ್ಟಣದ ಚಂದ್ರಾ ಲೇಔಟ್ ನಲ್ಲಿರುವ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಅವರ ಮನೆಗೆ ಒಂದು ತಂಡ ಮತ್ತು ತವಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್‌ಗೆ ಎರಡನೇ ತಂಡ ತೆರಳಿ ಪರಿಶೀಲನೆ ನಡೆಸಿದ್ದಾರೆ. ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಹಾಗೂ ನಗದು ಪತ್ತೆಯಾಗಿದೆ. ಸುಮಾರು 400 ಗ್ರಾಂ ಚಿನ್ನ, ಬೆಳ್ಳಿ ಆಭರಣಗಳು ಸೇರಿದಂತೆ ಒಂದೂವರೆ ಲಕ್ಷ ನಗದು ಹಣ ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತರು ಪರಿಶೀಲನೆ ಮುಂದುವರೆಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣಮೂರ್ತಿ ಅವರ ಹಿರಿಯೂರು ಪಟ್ಟಣದ ಕುವೆಂಪು ನಗರದ ಮನೆಯ ಮೇಲೆ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ.
ಹಾಸನದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ
ಲೋಕಾಯುಕ್ತ ಎಸ್‌ಪಿ ಮಲ್ಲಿಕ್, ಡಿವೈಎಸ್‌ಪಿ ತಿರುಮಲ್ಲೇಶ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದಲ್ಲಿ ಹಾಸನದಲ್ಲಿ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಎಚ್.ಇ.ನಾರಾಯಣ ಎಂಬುವವರ ನಗರದ ಹೊರವಲಯದ ಬೊಮ್ಮನಾಯಕನಹಳ್ಳಿರುವ ಅವರ ಮನೆ ಹಾಗೂ ಗೊರೂರಿನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಹಾವೇರಿಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು
ಹಾವೇರಿ ಆರ್‌ಎಫ್‌ಒ ಪರಮೇಶಪ್ಪ ಪೇರಲನವರ್ ಹಾಗೂ ನ್ಯಾಮತಿ ಆರ್‌ಎಫ್‌ಒ ಮಾಲತೇಶ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಏಕಕಾಲಕ್ಕೆ 9 ಕಡೆಗಳಲ್ಲಿ ದಾಳಿ ಮಾಡಿದ್ದಾರೆ.
ಶಿವಾಜಿನಗರ, ದಾನೇಶ್ವರಿ ಪಾರ್ಕ್, ದಾನಮ್ಮ ದೇವಿ ದೇವಸ್ಥಾನ ಬಳಿ ಇರುವ ಮನೆಗಳಲ್ಲಿ ಶೋಧ ನಡೆಸಿದ್ದಾರೆ.
ಆರ್‌ಎಫ್‌ಒ ಪರಮೇಶಪ್ಪ ಮೂವರು ಪತ್ನಿಯರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಹಾವೇರಿಯ ವರದಾನೇಶ್ವರಿ ಪಾರ್ಕ್ ಬಳಿಯ ಎರಡು ಮನೆಗಳು, ಶಿವಾಜಿನಗರದ ಮನೆ, ಕುರುಬಗೊಂಡದ ಮನೆ ಮತ್ತು ಹೆಡಿಗೊಂಡ ಗ್ರಾಮದ ಬಳಿ ಇರುವ ಫಾರ್ಮ್ಹೌಸ್ ಮೇಲೂ ದಾಳಿ ಮಾಡಲಾಗಿದೆ.
ಬೆಳಗಾವಿಯಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ
ಬೆಳಗಾವಿಯಲ್ಲಿ ಪಂಚಾಯತ್ ರಾಜ್ ಇಲಾಖೆ ಎಇಇ ಎಮ್.ಎಸ್.ಬಿರಾದಾರ ಮನೆ ಮೇಲೆ ದಾಳಿ ನಡೆದಿದೆ. ವಿಶ್ವೇಶ್ವರಯ್ಯ ನಗರದ ಶ್ರದ್ಧಾ ಅಪಾರ್ಟಮೆಂಟ್ ನಲ್ಲಿ ಇರುವ ನಿವಾಸದ ಮೇಲೆ ದಾಳಿ ಮಾಡಿದ್ದು, ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.
ಕಲಬುರಗಿಯಲ್ಲಿ ದಾಳಿ
ಬೀದರ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಮತ್ತು ದೇವದುರ್ಗದ ಕೆಬಿಜೆಎನ್ ಎಲ್ ಇಇ ತಿಪ್ಪಣ್ಣ ಅನ್ನದಾನಿ ಮನೆಗಳ ಮೇಲೆ ದಾಳಿಯಾಗಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆಯ ಆರೋಪ ಹಿನ್ನಲೆ ಲೋಕಾಯುಕ್ತ ಎಸ್ಪಿ ಎಸ್.ಎಸ್.ಕರ್ನೂಲ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಬಳ್ಳಾರಿ ಕಂದಾಯ ನಿರೀಕ್ಷಕ ಮಂಜುನಾಥ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿ ತಾಲೂಕು ಕಚೇರಿಯಲ್ಲಿ ಹಾಗೂ ಗುಗ್ಗರ ಹಟ್ಟಿಯ ನಿವಾಸದ ಮೇಲೆ ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ, ಹೊಸಪೇಟೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸ್‌ಪಿ ಎಂ.ಎನ್. ಶಶಿಧರ್ ಮತ್ತು ಹೊಸಪೇಟೆ ಸಿಪಿಐ ಸುರೇಶ್ ಬಾಬು ನೇತೃತ್ವದಲ್ಲಿ ದಾಖಲೆ ಪರಿಶೀಲನೆ ಮುಂದುವರಿದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದುಬಾರಿ ಫೋನ್ ಕದಿಯೋದಕ್ಕೆ ತಂಡವನ್ನೇ ಕಟ್ಟಿದ್ದ ಕಳ್ಳ; ಮೊಬೈಲ್ ಬೆಲೆ ಆಧರಿಸಿ ಕಮಿಷನ್ ನೀಡುತ್ತಿದ್ದ!
ಬೆಂಗಳೂರು: ಬೆಳ್ಳಂಬೆಳಗ್ಗೆ ಲೋಕಾಯುಕ್ತರ ಶಾಕ್
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಮಾಹಿತಿ ಹಿನ್ನೆಲೆ, ಬೆಂಗಳೂರಿನ ಕೆ.ಆರ್.ಪುರಂ ಎಆರ್ಒಗೆ ಸೇರಿದ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರಿನ ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 8 ಲಕ್ಷ ನಗದು, 200 ಗ್ರಾಂ ಚಿನ್ನಾಭರಣ ಪತ್ತೆ ಆಗಿದೆ. ಸತ್ತೇಗಾಲ ಬಳಿ 7 ಎಕರೆ ಫಾರ್ಮ್ಹೌಸ್ ಹೊಂದಿರುವ ಶ್ರೀನಿವಾಸ್, ಟ್ರ್ಯಾಕ್ಟರ್, ಕ್ವಾಲೀಸ್ ಕಾರು ಕೂಡ ಪತ್ತೆ ಆಗಿದೆ.
ಶಿರಾ ಆರ್ ಡಿಪಿಆರ್ ಸಹಾಯಕ ಇಂಜಿನಿಯರ್ ಮೆನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
ತುಮಕೂರಿನ ಶಿರಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಹಾಯ ಎಂಜಿನಿಯರ್ ನಾಗೇಂದ್ರ ಅವರ ಮನೆ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಪಿಗಳಾದ ಮಂಜುನಾಥ್, ಹರೀಶ್ ನೇತೃತ್ವದ ಅಧಿಕಾರಿಗಳ ತಂಡ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ನಗರದ ಮಿರ್ಜಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆ ಮತ್ತು ಶಿರಾ ಪಟ್ಟಣದಲ್ಲಿರುವ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.