ಯುವತಿಯೋರ್ವಳು ಅನ್ಯ ಯುವಕನೊಂದಿಗೆ ಪ್ರೀತಿಯಲ್ಲಿದ್ದ ವಿಷಯ ತಿಳಿದ ವರ ತಾಳಿ ಕಟ್ಟುವ ವೇಳೆ ಹಸೆಮಣೆಯಿಂದ ಎದ್ದು ಹೊರನಡೆದಿರುವ ಘಟನೆ ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಾಲೇಪುರದಲ್ಲಿ ಬುಧವಾರ ನಡೆದಿದೆ.
ಮಂಗಳವಾರ ಖುಷಿಯಿಂದ ಆರತಕ್ಷತೆ ಮುಗಿಸಿಕೊಂಡಿದ್ದ ವರ ತಾಳಿ ಕಟ್ಟುವ ಸಮಯದಲ್ಲಿ ಹೊರನಡೆದಿದ್ದಾನೆ. ವರನ ದಿಢೀರ್ ವರ್ತನೆ ಕಂಡು ಕುಟುಂಬಸ್ಥರು ಬೆರಗಾಗಿದ್ದಾರೆ.
ಯುವತಿಯ ಪ್ರೀತಿಯ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರೀತಿಯ ವಿಚಾರ ಮೊದಲೇ ತಿಳಿಸಲಾಗಿತ್ತು. ಆದರೂ ಈ ರೀತಿ ಮಾಡಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಯುವತಿ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜೀವನಪರ್ಯಂತ ಕೂಡಿ ಬಾಳಬೇಕಿರುವ ಜೋಡಿಗಳು ಮದುವೆ ವಿಚಾರದಲ್ಲಿ ಎಡವುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಮದುವೆ ವಿಚಾರದಲ್ಲಿ ದೃಢ ನಿರ್ಧಾರ, ಪರಸ್ಪರ ಖಚಿತತೆಯಿಂದ ಮಾತ್ರವೇ ಇಂತಹ ಎಡವಟ್ಟುಗಳಿಗೆ ಸೂಕ್ತ ಪರಿಹಾರ ದೊರೆಯಲಿದ್ದು, ಎಲ್ಲರೂ ಪಾಲಿಸಬೇಕಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕಿದ್ದರೆ ಜಾತಿವಿನಾಶ ಆಗಲೇಬೇಕು
ಒಟ್ಟಾರೆಯಾಗಿ, ಗಂಡಾಳಿಕೆಯ ನಮ್ಮ ಸಮಾಜದಲ್ಲಿ ಗಂಡಿಗೊಂದು ನಿಯಮ, ಹೆಣ್ಣಿಗೊಂದು ನಿಯಮ ಪಾಲಿಸಲಾಗುತ್ತಿದೆ. ಗಂಡು ಹೆಣ್ಣು ಸಮಾನ ಎಂದೇಳುವ ಬಹುತೇಕರು ಗಂಡು ಹೆಚ್ಚು ಸಮಾನ ಎಂದೇ ಬಗೆಯುತ್ತಾರೆ ಮತ್ತು ಅದನ್ನೇ ಆಚರಿಸುತ್ತಾರೆ. ತನ್ನ ಪ್ರೀತಿ ಪ್ರಕರಣಗಳು ಎಷ್ಟೇ ಇದ್ದರೂ ಅದು ಸಹಜ ಸ್ವಾಭಾವಿಕ. ತಾನು ಕೈಹಿಡಿಯುವ ಹೆಣ್ಣಿಗೆ ಪ್ರೀತಿ ಪ್ರೇಮದ ಗತ ಇರಕೂಡದು ಮತ್ತು ಅಂತಹ ಹುಡುಗಿಯನ್ನು ಮದುವೆಯಾಗುವುದು ತನ್ನ ಹಕ್ಕು ಎಂದು ಗಂಡು ಭಾವಿಸುತ್ತಾನೆ. ಹೆಣ್ಣು ಮಕ್ಕಳೂ ಈ ತತ್ವವನ್ನು ಪಾಲಿಸಲು ಆರಂಭಿಸಿದರೆ, ಗಂಡಸಿಗೆ ಮದುವೆ ಮರೀಚಿಕೆ ಆದೀತು.