ಪ್ರಿಯತಮೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಆಗಿದ್ದಕ್ಕೆ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನಡೆದಿದೆ.
ವರುಣ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ನಗರದ ಜನತಾ ಕಾಲೋನಿ ನಿವಾಸಿ ಎಂದು ಗುರುತಿಸಲಾಗಿದೆ.
ವರುಣ್ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿದೆ. ಈ ಕಾರಣಕ್ಕೆ ತೀವ್ರ ಬೇಸರಗೊಂಡು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ವರುಣ್‌ಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನಿವಾಸಿ ದೇವಿಕಾ ಎಂಬ ಯುವತಿಯ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿತ್ತು. ಕೆಲವು ದಿನಗಳ ನಂತರ ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ದೇವಿಕಾ ರಾಯಚೂರಿನಲ್ಲಿ 3 ವರ್ಷಗಳ ಕಾಲ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಕಳೆದ ನಾಲ್ಕೈದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ದೇವಿಕಾ ವರುಣ್‌ನನ್ನು ದೂರ ಮಾಡಿದ್ದಳು ಎನ್ನಲಾಗಿದೆ.
ಆತ್ಮಹತ್ಯೆ ಮುಂಚೆ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿರುವುದಾಗಿ ತಿಳಿದು ಬಂದಿದೆ. ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
