ಅಂಗನವಾಡಿ ಅವ್ಯವಸ್ಥೆ | ಮದ್ದೂರು : ಕಾಂಪೌಂಡ್‌ ಇದೆ ಗೇಟಿಲ್ಲ, ಶೌಚಾಲಯ ಇದೆ ನೀರೇ ಇಲ್ಲ!

Date:

Advertisements

ರಾಜ್ಯದಲ್ಲಿರುವ ಅಂಗನವಾಡಿಗಳ ಸ್ಥಿತಿಗತಿಗಳ ಬಗ್ಗೆ ಈ ದಿನ.ಕಾಮ್ ಪ್ರಕಟಿಸುತ್ತಿರುವ ಸರಣಿ ವರದಿಯ ಭಾಗ-2

‘ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಲ್ಲಿ 1,682 ಸ್ನಾತಕೋತ್ತರ ಪದವಿ, 6,365 ಪದವಿ, 15,217 ಪಿಯುಸಿ, 32,612 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ್ದಾರೆ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ-ಯುಕೆಜಿ ಆರಂಭಿಸಬೇಕು’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದರು. ಈ ಹೋರಾಟಕ್ಕೆ ಮಣಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ ಹಾಗೂ ಯುಕೆಜಿ ಶುರು ಮಾಡಲು ಒಪ್ಪಿಗೆ ಸೂಚಿಸಿದೆ.

ಆದರೆ, ಎಲ್‌ಕೆಜಿ ಶುರು ಮಾಡಲು ಒಂದು ಹೆಚ್ಚುವರಿ ಕೊಠಡಿ ಬೇಕು. ಮುಂದಿನ ವರ್ಷ ಆ ಮಕ್ಕಳು ಯುಕೆಜಿಗೆ ಬರುವಾಗ ಇನ್ನೂ ಒಂದು ಕೊಠಡಿ ಬೇಕು. ಅಷ್ಟೇ ಅಲ್ಲ, ಶೌಚಾಲಯ, ನೀರಿನ ವ್ಯವಸ್ಥೆ ಸೇರಿದಂತೆ ಆ ಮಕ್ಕಳ ಕಲಿಕೆಗೆ ಪೂರಕವಾಗಿರುವ ಶೈಕ್ಷಣಿಕ ಪರಿಕರಗಳೂ ಕೂಡ ಬೇಕು. ಇದಕ್ಕೆ ನಮ್ಮ ಅಂಗನವಾಡಿಗಳು ಯೋಗ್ಯವಾಗಿವೆಯೇ ಎಂದು ನೋಡಿದರೆ ಖಂಡಿತಾ ನಿರಾಸೆಯಾಗುತ್ತದೆ.

Advertisements

anganawadi

ಮಂಡ್ಯ ಜಿಲ್ಲೆಯಲ್ಲಿ 2,558 ಅಂಗನವಾಡಿಗಳಿದ್ದು, ಅದರಲ್ಲಿ1769 ಸ್ವಂತ ಕಟ್ಟಡದಲ್ಲಿವೆ. ಪಂಚಾಯಿತಿ ಕಟ್ಟಡ 31, ಸಮುದಾಯ ಕಟ್ಟಡ 66, ಬಾಡಿಗೆ ಕಟ್ಟಡ 222, ಶಾಲಾ ಕಟ್ಟಡ 311, ಬಾಡಿಗೆ ರಹಿತ ಕಟ್ಟಡಗಳು 151. ಹೀಗೆ ಒಟ್ಟು 2,558 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದೆ.

“ಸರ್ಕಾರ ಪ್ರಸ್ತುತ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಕಾರ್ಯಕರ್ತೆಯರ ಮಾಹಿತಿ ಹಾಗೂ ಭದ್ರವಾಗಿರುವ ಕಟ್ಟಡಗಳ ಮಾಹಿತಿಯನ್ನು ಪಡೆದಿದೆ. ಎಲ್‌ಕೆಜಿ, ಯುಕೆಜಿ ಶುರು ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದರು.

ಮಂಡ್ಯ ಜಿಲ್ಲೆ, ಮದ್ದೂರು ತಾಲೂಕು, ನಗರಕೆರೆ ತಾಲೂಕು ಪಂಚಾಯಿತಿ ವ್ಯಾಪ್ತಿಯ ಉಪ್ಪಿನಕೆರೆಯು 1300ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮ. ಇಲ್ಲಿ ಎರಡು ಅಂಗನವಾಡಿ ಕೇಂದ್ರಗಳು ಇದ್ದವು. ಪ್ರಸ್ತುತ ಒಂದು ಅಂಗನವಾಡಿ ಕೇಂದ್ರ ಹನ್ನೊಂದು ಮಕ್ಕಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೊಂದು ಬಾಗಿಲು ಮುಚ್ಚಿದೆ. ಅಲ್ಲಿದ್ದ ಮಕ್ಕಳನ್ನು ಪಕ್ಕದ ಅಂಗನವಾಡಿಗೆ ಸ್ಥಳಾಂತರಿಸಲಾಗಿದೆ. ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರವು ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ್ದ ಕಟ್ಟಡದಲ್ಲಿದೆ. ಈ ಕಟ್ಟಡದ ಕಳಪೆ ಕಾಮಗಾರಿಯಿಂದಾಗಿ ಸೀಲಿಂಗ್ ಪದರಗಳು ಬಿದ್ದು ಹೋಗಿದ್ದು, ಶಿಥಿಲಗೊಂಡಿದೆ.

ಕಳಪೆ ಕಾಮಗಾರಿಯಿಂದಾಗಿಬಿದ್ದು ಹೋಗಿರುವ ಸೀಲಿಂಗ್ ಪದರಗಳು
ಕಳಪೆ ಕಾಮಗಾರಿಯಿಂದಾಗಿ ಬಿದ್ದು ಹೋಗಿರುವ ಸೀಲಿಂಗ್ ಪದರಗಳು

ಉಪ್ಪಿನಕೆರೆ ಅಂಗನವಾಡಿ ಕಟ್ಟಡ ಅಭಿವೃದ್ಧಿ ಕಾಮಗಾರಿ ಕ್ರಿಯಾಯೋಜನೆಯಡಿ ಮೂರು ಲಕ್ಷ ರೂ.ಗಳ ಅನುದಾನದಲ್ಲಿ ಎರಡು ತಿಂಗಳ ಹಿಂದೆ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಆದರೆ ಕಾಂಪೌಂಡಿಗೆ ಗೇಟ್ ಹಾಕಿಲ್ಲ. ಮಕ್ಕಳು ಅಂಗನವಾಡಿ ಮುಂದೆ ಇರುವ ಚರಂಡಿ ದಾಟಲು ಸೂಕ್ತ ವ್ಯವಸ್ಥೆ ಇನ್ನೂ ಸಂಬಂಧಪಟ್ಟವರು ಮಾಡಿಲ್ಲ. ಹೀಗಾಗಿ, ಅಂಗನವಾಡಿಯವರೇ ಹಳೆಯ ಕಲ್ಲು ಚಪ್ಪಡಿಗಳನ್ನು ಹಾಕಿಕೊಂಡಿದ್ದಾರೆ.

“ಗೇಟ್ ಇಲ್ಲ. ಹೀಗಾಗಿ ಅಂಗನವಾಡಿಯ ಆವರಣದೊಳಗೆ ದನ ಕರುಗಳೆಲ್ಲ ನುಗ್ಗುತ್ತವೆ” ಎನ್ನುವ ಗ್ರಾಮಸ್ಥರು, “ಕಾಂಪೌಂಡ್ ಮಾಡಿ ಪ್ರಯೋಜನ ಏನು?” ಎಂದು ಕೇಳುತ್ತಾರೆ.

“ಮಕ್ಕಳು ಚರಂಡಿ ದಾಟುವಾಗ ನಮಗೆ ಆತಂಕವಾಗುತ್ತದೆ. ಎಲ್ಲಿ ಕಾಲು ಜಾರಿ ಚರಂಡಿಗೆ ಬಿದ್ದು ಬಿಟ್ಟಾರು” ಅಂತ ಅಂಗನವಾಡಿ ಕಾರ್ಯಕರ್ತೆ ತಮ್ಮ ಆಳಲನ್ನು ತೋಡಿಕೊಂಡರು.

ಮನೆಯ ಪಡಸಾಲೆಯಲ್ಲಿ ಅಂಗನವಾಡಿ

ಮದ್ದೂರು ತಾಲೂಕು ಚಿಕ್ಕರಸಿನಕೆರೆ ಹೋಬಳಿ ಮೆಣಸಗೆರೆ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಬೊಪ್ಪಸಮುದ್ರ. ಈ ಗ್ರಾಮದಲ್ಲಿ 1426 ಜನ ಸಂಖ್ಯೆ ಇದ್ದು, ಎರಡು ಅಂಗನವಾಡಿ ಕೇಂದ್ರಗಳಿದ್ದು, ಮೊದಲ ಅಂಗನವಾಡಿ ಕೇಂದ್ರಕ್ಕೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಶ್ರೀಕಂಠ ಎಂಬುವವರು 20×3೦ ಅಳತೆಯ ನಿವೇಶನ ದಾನ ಕೊಟ್ಟಿದ್ದರು. ಇದೇ ಜಾಗವನ್ನು ಬಳಸಿಕೊಂಡು 2017ರಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಒಂಭತ್ತು ಮಕ್ಕಳಿರುವ ಎರಡನೇ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲ. ಹೀಗಾಗಿ, ಅಲ್ಲಿನ ಅಂಗನವಾಡಿ ಸಹಾಯಕಿಯ ಮನೆಯ ಪಡಸಾಲೆಯೇ ಸದ್ಯ ಅಂಗನವಾಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಅಂಗನವಾಡಿ ಕೇಂದ್ರ 3
ಬೊಪ್ಪಸಮುದ್ರ: ಮನೆಯ ಪಡಸಾಲೆಯಲ್ಲಿ ನಡೆಯುತ್ತಿರುವ ಅಂಗನವಾಡಿ

ಅದೇ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಗ್ರಾಮವಾಗಿರುವ ಮೆಣಸಗೆರೆಯಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳಿದೆ. ಈ ಪೈಕಿ ಎರಡು ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿದ್ದರೆ, ಉಳಿದ ಎರಡು ಅಂಗನವಾಡಿ ಕೇಂದ್ರದ ಪೈಕಿ ಒಂದಕ್ಕೆ ಸ್ವಂತ ಕಟ್ಟಡವಿಲ್ಲ. ಹೀಗಾಗಿ, ಗ್ರಾಮ ಸೇವಕರ ಸರಕಾರಿ ಕಟ್ಟಡದಲ್ಲಿ ನಡೆಯುತ್ತಿದೆ.

ಊರ ಹೊರಗೆ 150 ಜನರು ವಾಸಿಸುವ ಜನತಾ ಕಾಲೊನಿಯಲ್ಲಿ ಇರುವ ನಾಲ್ಕನೆಯ ಅಂಗನವಾಡಿ ಕೇಂದ್ರವು 7 ಮಕ್ಕಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸ್ವಂತ ಕಟ್ಟಡವಿಲ್ಲ, ಸಹಾಯಕಿಯೂ ಇಲ್ಲ. ಒಂದು ಆಡು ಕುರಿ ಕಟ್ಟುವ ಕೊಟ್ಟಿಗೆಯಲ್ಲಿ ಕೇಂದ್ರ ನಡೆಯುತ್ತಿದೆ.

ಮಳವಳ್ಳಿ ಪಟ್ಟಣದಲ್ಲಿ 32 ಅಂಗನವಾಡಿ ಕೇಂದ್ರಗಳಿದ್ದು, ಯಾವುದಕ್ಕೂ ಸ್ವಂತ ಕಟ್ಟಡ ಇಲ್ಲ. ಹತ್ತು ನಿವೇಶನಗಳಿದ್ದು, ಹೊಸ ಕಟ್ಟಡ ನಿರ್ಮಿಸಲು ಮಂಡ್ಯ ಉಪ ನಿರ್ದೇಶಕರ ಕಚೇರಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಮಳವಳ್ಳಿಯ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮದುವೆ ಹಾಲ್‌ನಲ್ಲಿ ನಡೆಯುತ್ತಿದೆ ಅಂಗನವಾಡಿ ಕೇಂದ್ರ!

ಮಳವಳ್ಳಿಯಲ್ಲೊಂದು ಅಂಗನವಾಡಿ ಕೇಂದ್ರವಿದೆ. ಅದು ನಡೆಯುತ್ತಿರುವುದು ಮಾತ್ರ ಕೇಂದ್ರ ಈದ್ಗಾ ಮೊಹಲ್ಲಾದ ಒಂದು ಶಾದಿ ಮಹಲ್‌(ಮದುವೆ ಹಾಲ್‌)ನಲ್ಲಿ. ಸದ್ಯ ಈ ಕೇಂದ್ರದಲ್ಲಿ 14 ಮಕ್ಕಳಿದ್ದಾರೆ. ಈ ಮದುವೆ ಹಾಲ್‌ನಲ್ಲಿ ಮದುವೆ ಸಮಾರಂಭ ನಡೆಯುವಾಗ, ಪಕ್ಕದಲ್ಲೇ ಇರುವ ಒಂದು ಚಿಕ್ಕ ಕೊಠಡಿಗೆ ಅಂಗನವಾಡಿ ಸಹಾಯಕಿ ಮಕ್ಕಳನ್ನು ಸ್ಥಳಾಂತರಿಸಿಕೊಳ್ಳಬೇಕಾಗುತ್ತದೆ. ಈ ಸಮಸ್ಯೆಯು ಅಂಗನವಾಡಿಯ ಜವಾಬ್ದಾರಿ ಹೊತ್ತವರಿಗೆ ದೊಡ್ಡ ಸಮಸ್ಯೆ ಅಂದರೆ ತಪ್ಪಾಗದು.

ಅಂಗನವಾಡಿ ಕೇಂದ್ರ 2
ಮಳವಳ್ಳಿ ಈದ್ಗಾ ಮೊಹಲ್ಲಾದ ಅಂಗನವಾಡಿ ಕೇಂದ್ರ

“ನಮ್ಮ ಅಂಗನವಾಡಿಗೆ ಒಂದು ಸ್ವಂತ ಕಟ್ಟಡವಿದ್ದಿದ್ದರೆ ಈ ಸಮಸ್ಯೆಯೇ ನಮಗೆ ಉಂಟಾಗುತ್ತಿರಲಿಲ್ಲ ಅನ್ನೋದು” ಅಲ್ಲಿನ ಅಂಗನವಾಡಿ ಸಹಾಯಕಿಯರ ನೋವು.

ಮಳವಳ್ಳಿ ಪಟ್ಟಣದ ಕೋಟೆ ಬೀದಿಯಲ್ಲೊಂದು ಅಂಗನವಾಡಿ ಕೇಂದ್ರವಿದೆ. ಒಂದು ಪುಟ್ಟ ಕೊಠಡಿಯಲ್ಲಿ 15 ಮಕ್ಕಳಿದ್ದಾರೆ. ಆದರೆ, ಈ ಕೇಂದ್ರದಲ್ಲಿ ಕಾರ್ಯಕರ್ತೆ ಇಲ್ಲ. ಅವರು ಕಳೆದ ಏಪ್ರಿಲ್‌ನಲ್ಲಿ ನಿವೃತ್ತಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 2558 ಅಂಗನವಾಡಿಗಳಿದ್ದು, ಅದರಲ್ಲಿ 1769 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡದಲ್ಲಿವೆ. ಕೆಲವೊಂದು ಕೇಂದ್ರಗಳಲ್ಲಿ ಶೌಚಾಲಯಗಳಿವೆ, ಆದರೆ ನೀರಿನ ವ್ಯವಸ್ಥೆಯೇ ಇಲ್ಲ. ಜಿಲ್ಲೆಯಲ್ಲಿರುವ ಉಳಿದ 789 ಅಂಗನವಾಡಿ ಕೇಂದ್ರಗಳಿಗೆ ವಿಶೇಷ ಯೋಜನೆ ರೂಪಿಸಿ ಈ ವರ್ಷದಲ್ಲಿ ಎಲ್ಲದಕ್ಕೂ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕಾದ ಅವಶ್ಯಕತೆ ಇದೆ. ಖಾಲಿ ಉಳಿದಿರುವ ಕಾರ್ಯಕರ್ತರು ಹಾಗೂ ಸಹಾಯಕರ ಹುದ್ದೆಯನ್ನು ತುಂಬಬೇಕಿದೆ. ಕನಿಷ್ಠ ಇದಾಗದ ಹೊರತು ಎಲ್‌ಕೆಜಿ ಹಾಗೂ ಯುಕೆಜಿಗಳನ್ನು ಯಶಸ್ವಿಗೊಳಿಸುವುದು ಅಸಾಧ್ಯ.

ಇದನ್ನು ಓದಿದ್ದೀರಾ? ಸಿಂಧಗಿ : ಬಾಡಿಗೆ ಕಟ್ಟಡದಿಂದ ಮುಕ್ತಿ ಪಡೆಯಬಹುದೇ ತಾಲೂಕಿನ 66 ಅಂಗನವಾಡಿ ಕೇಂದ್ರಗಳು?

ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಕಾಂಗ್ರೆಸ್ ಶಾಸಕರೇ ಗೆದ್ದಿದ್ದಾರೆ. ಇವರ ಮೇಲೆ ಹೊಣೆಗಾರಿಕೆ ಹೆಚ್ಚಿದೆ. ಇವರುಗಳು ವಿಶೇಷ ಕಾಳಜಿ ವಹಿಸಿ ಸರ್ಕಾರದ ಮೇಲೆ ಒತ್ತಡ ಹೇರಿ, ತಮ್ಮ ಕ್ಷೇತ್ರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಎಲ್ಲ ಅಂಗನವಾಡಿಗಳಿಗೆ ಮುಕ್ತಿ ನೀಡಲು ಶ್ರಮಿಸಬೇಕಿದೆ.

ಸರಕಾರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಶುರು ಮಾಡಲು ತೀರ್ಮಾನಿಸಿರುವುದು ಒಳ್ಳೆಯ ಬೆಳವಣಿಗೆ. ಕೇವಲ ತೀರ್ಮಾನದಿಂದಷ್ಟೇ ಒಂದು ಯೋಜನೆ ಯಶಸ್ವಿಯಾಗಲ್ಲ. ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಸರ್ಕಾರ ಮಾಡಿಕೊಡಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಸದ್ಯ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳಲ್ಲೇ ಇದನ್ನು ಆರಂಭಿಸಿದರೆ, ಅದು ಅಷ್ಟಕ್ಕಷ್ಟೇ. ಯಾಕೆಂದರೆ, ಸರ್ಕಾರಗಳು ಬದಲಾದರೂ ಅಂಗನವಾಡಿಗಳ ಸ್ಥಿತಿಗತಿ ಬದಲಾಗಿಲ್ಲ ಅನ್ನೋದು ಅಷ್ಟೇ ವಾಸ್ತವ.

Untitled 24
ನಗರಕೆರೆ ಜಗದೀಶ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X