ಮಣ್ಣಿನ ಆರೊಗ್ಯ ಹಾಗೂ ರೈತರ ಕಲ್ಯಾಣಕ್ಕಾಗಿ ಶ್ರಮಿಸಬೇಕಾದ ಸರ್ಕಾರ ರೈತರ ಹಿತ ಮತ್ತು ಮಣ್ಣಿನ ಆರೊಗ್ಯವನ್ನು ಕಡೆಗಣಿಸಿದೆ ಎಂದು ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್ ಗೌಡ ವಿಷಾದಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೊಂಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಮಣ್ಣು ಉಳಿಸಿ ಅಭಿಯಾನ ಮತ್ತು ಸಂಘದ ಉದ್ಘಾಟನೆ ನೆರವೆರಿಸಿ ಮಾತನಾಡಿದರು.
“ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಲಾಭದ ದುರಾಸೆಯಿಂದಾಗಿ ಕೀಟನಾಶಕ, ಕಳೆನಾಶಕಗಳನ್ನು ಮಣ್ಣಿಗೆ ಸುರಿಯಲು ಅಧಿಕ ಇಳುವರಿಯ ನೆಪದಲ್ಲಿ ರೈತರನ್ನು ಪ್ರಚೋದಿಸುತ್ತಿವೆ. ಇಂತಹ ಸಮಯದಲ್ಲಿ ರೈತರ ಪರವಾಗಿ ಕಾರ್ಯನಿರ್ವಹಿಸಿ ರೈತರನ್ನು ಜಾಗೃತಗೊಳಿಸಬೇಕಾದ ಸರ್ಕಾರಗಳು ರೈತರ ಹಿತ ಮರೆತಿವೆ” ಎಂದರು.

“ದಿನ ಕಳೆದಂತೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಭೂಮಿ ಹೆಚ್ಚಾಗಲು ಸಾಧ್ಯವಿಲ್ಲ. ಬದಲಾಗಿ ಫಲವತ್ತತೆಯ ಭೂಮಿಗಳು ದಿನೇ ದಿನೆ ನಿವೇಶನಗಳಾಗಿ ಪರಿವರ್ತನೆಯಾಗುತ್ತಿವೆ. ಪರಿಸ್ಥಿತಿ ಹೀಗೆಯೆ ಮುಂದುವರೆದರೆ ಆಹಾರ ಸಮಸ್ಯೆ ಉಲ್ಬಣಿಸುವ ಸಮಯ ಸಮೀಪಿಸುತ್ತದೆ” ಎಂದರು.
“ಸರ್ಕಾರಗಳು ರೈತರ ಕಲ್ಯಾಣ ಮರೆತು ಉದ್ಯಮಿಗಳ ಹಿತ ರಕ್ಷಿಸುತ್ತಿರುವ ಈ ಹೊತ್ತಿನಲ್ಲಿ ರೈತರು ವೈಯಕ್ತಿಕವಾಗಿ ತಮ್ಮ ಜಮೀನುಗಳಲ್ಲಿ ರಸಾಯನಿಕ ಬಳಕೆ ಮಾಡದಿರುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಿ ತಮ್ಮ ಭೂಮಿಯ ಫಲವತ್ತತೆಯ ಹೆಚ್ಚಳ ಮಾಡಿ ಮುಂದಿನ ಪೀಳಿಗೆಗೆ ಆರೊಗ್ಯಕರ ಮಣ್ಣು ವರ್ಗಾಯಿಸಿ ಸುಸ್ಥಿರ ಕೃಷಿಗೆ ಶ್ರಮಿಸಬೇಕು. ಇದಕ್ಕೆ ಬೇಕಾದ ಮಾರ್ಗದರ್ಶನ ಮಾಡುವಲ್ಲಿ ಕಲ್ಯಾಣ ರೈತಸಂಘ ಜೊತೆಗಿರಲಿದೆ” ಎಂದು ಚಂದನ್‌ಗೌಡ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಕೆಆರ್‌ಪೇಟೆ | ವಾಟ್ಸಾಪ್ ಯುನಿವರ್ಸಿಟಿ ತಿರುಚಿದ ಇತಿಹಾಸ ಹೇಳುತ್ತಿದೆ: ಪ್ರೊ ಎಸ್ ಜಿ ಸಿದ್ದರಾಮಯ್ಯ
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಉಷಾಜಯಶೀಲ್ ಮಾತನಾಡಿ, ಮಣ್ಣಿನ ಆರೊಗ್ಯ ಹಾಗೂ ರೈತರ ಕಲ್ಯಾಣ ನಮ್ಮ ಸಂಘದ ಧ್ಯೇಯಾವಾಗಿದೆ. ಅದಕ್ಕಾಗಿ ರೈತರ ಸಂಘಟನೆ, ರೈತರ ಜಾಗೃತಿ ಮತ್ತು ಮಾಹಿತಿ ನೀಡುವುದು ನಮ್ಮ ಸಂಘದ ಕಾರ್ಯಸೂಚಿಯಾಗಿದ್ದು, ರಾಜ್ಯದ್ಯಾಂತ ರೈತರನ್ನು ಸಂಘಟಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಸೊಂಪುರ ಗ್ರಾಮದಲ್ಲಿನ ಸಭೆ ಪ್ರಥಮವಾದುದ್ದಾಗಿದೆ” ಎಂದರು.
ನಗರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ್ ಮಾತನಾಡಿ, “ಮಣ್ಣಿನ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತ ರೈತ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ರೈತ ಕಲ್ಯಾಣ ಸಂಘಟನೆ ಮಾರ್ಗದರ್ಶನದಲ್ಲಿ ಮಣ್ಣಿನ ಸ್ವಾಸ್ಥ್ಯ ಕಾಯುವಲ್ಲಿ ಮುಂದಾಗೋಣ” ಎಂದರು.
ಮಂಡ್ಯ ಜಿಲ್ಲಾಧ್ಯಕ್ಷ ದೇವು ಸೇರಿದಂತೆ ಹಲವು ಮುಖಂಡರು ಇದ್ದರು.