ದೇಶಾದ್ಯಂತ ತಂತ್ರಜ್ಞಾನ ವೇಗ ಪಡೆದಿದೆ. ಎಲ್ಲೆಡೆ ಡಿಜಿಟಲೀಕರಣವನ್ನು ಅಳವಡಿಸಿಕೊಳ್ಳಲಾಗಿದೆ. ಆದಾಗ್ಯೂ ಮದ್ದೂರು ಪುರಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ. ಸಾವಿರಾರು ಅರ್ಜಿಗಳು ಬಾಕಿಯಿದ್ದು, ಸಾರ್ವಜನಿಕರು ದಿನನಿತ್ಯ ಕಚೇರಿಗೆ ಅಲೆದಾಡುವ ದುಸ್ಥಿತಿ ಎದುರಾಗಿದೆ.
ಹೌದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಪುರಸಭೆ ಕಚೇರಿಯಲ್ಲಿ ಅವ್ಯವಸ್ಥೆ ಮನೆಮಾಡಿದೆ. ನಿತ್ಯ ನೂರಾರು ಜನ ಇ – ಆಸ್ತಿ, ಆಸ್ತಿ ವರ್ಗಾವಣೆ, ಖಾತೆ ಬದಲಾವಣೆ, ಜನನ ಮರಣ ಪ್ರಮಾಣಪತ್ರ ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ಪುರಸಭೆ ಕಚೇರಿಗೆ ಭೇಟಿ ನೀಡುತ್ತಾರೆ. ಆದರೆ ಸೂಕ್ತ ಕಾಲದಲ್ಲಿ ಮಾತ್ರ ಅರ್ಜಿಗಳ ವಿಲೇವಾರಿ ಆಗುತ್ತಿಲ್ಲ. ಕಚೇರಿ ಅಲೆದಾಟ ತಪ್ಪುತ್ತಿಲ್ಲ.

ಅಧಿಕಾರಿಗಳು ನಿಗಧಿತ ಅವಧಿಯಲ್ಲಿ ಅರ್ಜಿಗಳ ವಿಲೇವಾರಿ ಮಾಡದೆ, ಕಚೇರಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ನಿಯಮದ ಪ್ರಕಾರ ಅರ್ಜಿ ಪಡೆದ ಕೂಡಲೇ ಆನ್ ಲೈನ್ ಸ್ವೀಕೃತಿ ನೀಡಬೇಕು. ಆದರೆ, ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಅರ್ಜಿಗೆ ಸ್ವೀಕೃತಿಯನ್ನು ನೀಡುತ್ತಿಲ್ಲ. ಹಣ ಕೊಟ್ಟರೆ ಮಾತ್ರ ಶೀಘ್ರ ಅರ್ಜಿ ವಿಲೇವಾರಿ ಆಗುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಹಣ ಪಡೆಯುವ ವ್ಯವಸ್ಥಿತ ಯೋಜನೆ :
ಹಣ ನೀಡದಿದ್ದರೆ ಅರ್ಜಿಗಳನ್ನು ಬೇಕಂತಲೇ ವಿಳಂಬ ಮಾಡುತ್ತಿದ್ದಾರೆ. ಅರ್ಜಿ ವಿಳಂಬವಾದರೆ ಸಾರ್ವಜನಿಕರೇ ಹಣ ನೀಡುತ್ತಾರೆ ಎಂಬುದು ಮದ್ದೂರು ಪುರಸಭೆ ಅಧಿಕಾರಿಗಳ ವ್ಯವಸ್ಥಿತ ಯೋಚನೆ ಮತ್ತು ಯೋಜನೆ. ಹಣ ನೀಡದಿದ್ದರೆ ಅವರಿಗೆ ಬೇಕಾದಾಗ(ಅಂದರೆ 3-6 ತಿಂಗಳಾದರೂ ಅಚ್ಚರಿಯಿಲ್ಲ) ಅರ್ಜಿ ವಿಲೇವಾರಿ ಮಾಡುತ್ತಿದ್ದಾರೆ.
ಸಾವಿರಾರು ಅರ್ಜಿಗಳು ಬಾಕಿ :
ಮದ್ದೂರು ಪುರಸಭೆಗೆ ಕೂಲಿ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಬೇರೆ ಬೇರೆ ವರ್ಗದ ಜನರು ತಮ್ಮ ಕೆಲಸ, ಕಾರ್ಯ ಬಿಟ್ಟು ಬರುತ್ತಾರೆ. ಸಾರ್ವಜನಿಕರನ್ನು ತಿಂಗಳುಗಟ್ಟಲೆ ಅಲೆಡಾಡಿಸುತ್ತಾರೆ. ಇದರಿಂದ ಜನರಿಗೆ ತೊಡಕುಂಟಾಗಿದೆ. ಸಾವಿರಾರು ಅರ್ಜಿಗಳನ್ನು ಬಾಕಿ ಉಳಿದುಕೊಂಡಿದ್ದು, ಇದು ಪುರಸಭೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ನೂತನ ಆಡಳಿತ ಮಂಡಳಿಗೆ ಸವಾಲು :
ಸಿಬ್ಬಂದಿ ಕೊರತೆ ಇತ್ಯಾದಿ ಸಮಸ್ಯೆಗಳಿದಂದ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ ಎಂಬುದು ಅಧಿಕಾರಿಗಳ ಸಮರ್ಥನೆ. ಇದುವರೆಗೆ ಪುರಸಭೆ ಆಡಳಿತ ಆಡಳಿತಾಧಿಕಾರಿಗಳ ಕೈಯಲ್ಲಿತ್ತು. ಇದೀಗ ಚುನಾವಣೆ ನಡೆದು ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ನೂತನ ಆಡಳಿತ ಮಂಡಳಿ ಪುರಸಭೆ ಅಧಿಕಾರಿಗಳ ಕಳ್ಳಾಟಕ್ಕೆ ಯಾವ ರೀತಿ ಚುರುಕು ಮುಟ್ಟಿಸುತ್ತಾರೆ ಎಂಬುದು ದೊಡ್ಡ ಸವಾಲಾಗಿದೆ.
ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ನಾಮಫಲಕ ಹಾಕಿಲ್ಲ. 41ಎ ಮತ್ತು 41ಬಿ ಮಾಹಿತಿಯನ್ನೂ ಪ್ರಕಟಿಸಿಲ್ಲ. ಪುರಸಭೆಗೆ ಬರುವ ಸಾರ್ವಜನಿಕರಿಗೆ ಅರ್ಜಿಯೊಂದಿಗೆ ಯಾವ ಯಾವ ದಾಖಲಾತಿಗಳನ್ನು ಸಲ್ಲಿಸಬೇಕು ಎಂದುದರ ಕುರಿತೂ ಮಾಹಿತಿ ಇಲ್ಲ ಎಂಬುದು ಸಾಮಾಜಿಕ ಹೋರಾಟಗಾರ ಪ್ರಸನ್ನ ಅವರ ಆರೋಪ.
ಮದ್ದೂರು ಪುರಸಭಾ ಅಧ್ಯಕ್ಷ ಕೋಕಿಲ ಅರುಣ್ ಕುಮಾರ್ ಈದಿನ.ಕಾಮ್ ಜತೆಗೆ ಮಾತನಾಡಿ, ಈ ಹಿಂದೆ ಆಡಳಿತಾಧಿಕಾರಿಗಳು ಆಡಳಿತ ನಡೆಸುತ್ತಿದ್ದರು. ನಾನು ಅಧಿಕಾರ ವಹಿಸಿಕೊಂಡು ತಿಂಗಳಾಗಿದೆ. ಈಗಾಗಲೇ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸಿಕೊಂಡು ಹೋಗಲಾಗುವುದು ಎಂದರು.
ಪುರಸಭಾ ಮುಖ್ಯ ಅಧಿಕಾರಿ ಮೀನಾಕ್ಷಿ ಈದಿನ.ಕಾಮ್ ಜತೆಗೆ ಮಾತನಾಡಿ, ಸಾವಿರಾರು ಅರ್ಜಿಗಳು ಬಾಕಿ ಇವೆ. ಹಳೆಯ ಅರ್ಜಿಗಳನ್ನು ವಿಲೇವಾರಿ ಮಾಡುವುದಾ, ಇಲ್ಲವೇ ಹೊಸ ಅರ್ಜಿಗಳನ್ನ ಆದ್ಯತೆಯ ಮೇರೆಗೆ ತೆಗೆದುಕೊಳ್ಳುವುದಾ ಎಂಬುದನ್ನು ಅಧ್ಯಕ್ಷರು ತೀರ್ಮಾನಿಸಬೇಕಿದೆ. ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಹಳೆಯ ಅರ್ಜಿಗಳನ್ನು ಮೊದಲು ತೆಗೆದುಕೊಳ್ಳುತ್ತೇವೆ. ಹೊಸದಾಗಿ ಬಂದ ಅರ್ಜಿಗಳನ್ನು ನಂತರದಲ್ಲಿ ತೆಗೆದುಕೊಳ್ಳುತ್ತೇವೆ. ನಮ್ಮ ಸಿಬ್ಬಂದಿಗಳಿಗೆ ಸಾಧ್ಯವಾದಷ್ಟು ಬೇಗ ಕೆಲಸ ಮುಗಿಸಿ, ಜನರ ಅಲೆದಾಟ ತಪ್ಪಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಮಾಹಿತಿ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಅಧಿಕಾರಿ ಮಾಹಿತಿ ತೋರುವ ಫಲಕ ಹಳೆಯದಾಗಿದ್ದರಿಂದ ತೆಗೆದು ಹಾಕಲಾಗಿದೆ. ಹೊಸ ಫಲಕವನ್ನು ಶೀಘ್ರದಲ್ಲೇ ಅಳವಡಿಸಲಾಗುವುದು. ನೂತನ ಜಾಲತಾಣದ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ಆದ್ದರಿಂದ 41ಎ ಹಾಗೂ 41ಬಿ ಮಾಹಿತಿ ಅಪ್ಡೇಟ್ ಆಗಿಲ್ಲ. ಜನನ-ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷದ ಒಳಗೆ ನೊಂದಣಿಯಾದವುಗಳಿಗೆ ಅದೇ ದಿನ, ನಾಲ್ಕು ವರ್ಷದ ಹಿಂದೆ ಆನ್ಲೈನಲ್ಲಿ ಅಪ್ಡೇಟ್ ಆಗದ ನೋಂದಣಿಗಳನ್ನು ಮೂರು ದಿನಗಳ ಒಳಗೆ ಆನ್ಲೈನ್‌ನಲ್ಲಿ ಅಪ್ಡೇಟ್ ಮಾಡಿ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಜಮ್ಮು- ಕಾಶ್ಮೀರ ; ಚುನಾಯಿತ ಸರ್ಕಾರ ಬಂದರೂ ಉಪರಾಜ್ಯಪಾಲರೇ ಸರ್ವಾಧಿಕಾರಿ!
ಒಟ್ಟಾರೆಯಾಗಿ, ಹಣದಾಸೆ, ನಿರ್ಲಕ್ಷ್ಯದಿಂದ ಜಿಡ್ಡಿಡಿದಿರುವ ಮದ್ದೂರು ಪುರಸಭೆಗೆ ಹೊಸ ಆಡಳಿತ ಮಂಡಳಿ ತಕ್ಕ ಪಾಠ ಕಲಿಸಬೇಕಿದ್ದು, ನಿತ್ಯ ಜನರ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗಕ್ಕೆ ಚುರುಕು ಮುಟ್ಟಿಸಬೇಕಿದೆ. ಈಗಲಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರ ಎಂಬುದನ್ನು ಕಾದುನೋಡಬೇಕಿದೆ.
