ಜೀತ ವಿಮುಕ್ತರಿಗೆ ಸಮಗ್ರ ಪುನರ್ವಸತಿ ಕಲ್ಪಿಸಲು ಈ ಬಾರಿಯ ಬಜೆಟ್‌ನಲ್ಲಿ ಸುಮಾರು ₹500 ಕೋಟಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಜೀವಿಕ ಸಂಘಟನೆಯು ಮಧುಗಿರಿ ಪಟ್ಟಣದ ಬೀದಿಗಳಲ್ಲಿ ಪ್ರತಿಭಟನೆ ನಡೆಸಿತು. ಜತೆಗೆ ಸಂಘಟನೆಯ ಪದಾಧಿಕಾರಿಗಳು ನಿನ್ನೆ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಡಿ. ಟಿ. ಸಂಜೀವಮೂರ್ತಿ ಮಾತನಾಡಿ, “ಜೀತ ವಿಮುಕ್ತರ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. 2017ರಿಂದ ಅರ್ಜಿ ಸಲ್ಲಿಸಿರುವ ಎಲ್ಲಾ ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಬೇಕು. ಜೀತಮುಕ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಜಾಗೃತಿ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ಜೀವಿಕ ಸಂಘಟನೆಗೆ ಪುರಸಭೆ ವತಿಯಿಂದ ನಿವೇಶನ ಮಂಜೂರು ಮಾಡಬೇಕು. ಸಾಗುವಳಿ ಮಾಡುತ್ತಿರುವ ಜೀತದಾಳುಗಳಿಗೆ ಸಾಗುವಳಿ ಚೀಟಿ ನೀಡಿ ಖಾತೆ ಮತ್ತು ಪಹಣಿ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ಮಧುಗಿರಿ | ಬೀದಿ ನಾಯಿ ದಾಳಿ; 43 ಕುರಿ ಸಾವು
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಸಂಚಾಲಕ ಹನುಮಂತರಾಯಪ್ಪ, ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ, ಕದರಪ್ಪ, ಶ್ಯಾಮಣ್ಣ, ನರಸಿಂಹಪ್ಪ, ಪಾವಗಡ ತಾಲೂಕು ಸಂಚಾಲಕ ನರಸಿಂಹಮೂರ್ತಿ, ಟಿ. ಗಂಗಾಧರಪ್ಪ, ಹನುಮಂತರಾಯ, ಸತೀಶ್ ಹಾಗೂ ಗಂಗಣ್ಣ ಇದ್ದರು.
