ಪ್ರಜಾವಾಣಿ ಬಳಗದ ಸುಧಾ, ಮಯೂರ ಪತ್ರಿಕೆಗಳ ಓದುಗರು ತಮಗೆ ತಿಳಿದೋ, ತಿಳಿಯದೆಯೋ ಸಮಾಜ ಒಗ್ಗೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹಿರಿಯ ಲೇಖಕ ಜಿ. ವಿ. ಆನಂದಮೂರ್ತಿ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸುಧಾ ವಾರಪತ್ರಿಕೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುಧಾ-60 ವಜ್ರ ಮಹೋತ್ಸವ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಧಾ ವಾರ ಪತ್ರಿಕೆಯ ನಿಮ್ಮೊಡನೆ ಎಂಬ ಸಂಪಾದಕೀಯದ ಮೊದಲ ಪುಟದಿಂದ ಹಿಡಿದು ಸೆಲೆಬ್ರಿಟಿ ಎಂಬ ಸಾಧಕರ ಪರಿಚಯದ ಕೊನೆಪುಟದವರೆಗೂ ನೋಡಿದರೆ ಸಮಾಜವನ್ನು ಬೆಸೆಯುವ ಬರಹಗಳೇ ಇರುತ್ತವೆ ಎಂದು ಹೇಳಿದರು.
ಸದಾ ಪ್ರಯೋಗಶೀಲತೆಯನ್ನೇ ತನ್ನ ಅಂತಸತ್ವವಾಗಿಸಿಕೊಂಡಿರುವ ಸುಧಾ ಪತ್ರಿಕೆ ಗುಣಮಟ್ಟದಲ್ಲಿ, ಅಕಾರದಲ್ಲಿ ಎಂದು ರಾಜಿ ಮಾಡಿಕೊಂಡಿಲ್ಲ. ಹಾಗಾಗಿ 60 ವರ್ಷಗಳಿಂದ ಕನ್ನಡಿಗರು ತಮ್ಮ ಕುಟುಂಬದಲ್ಲಿ ಇಟ್ಟುಕೊಂಡು ಪೊರೆದಿದ್ದಾರೆ. ಕನ್ನಡದ ಶ್ರೇಷ್ಠ ಲೇಖಕರ ಬರಹ, ಜನಪ್ರಿಯ ಲೇಖಕರ ಬರಹಗಳನ್ನು ಸಂಕರಗೊಳಿಸಿ ಓದುಗರ ಮುಂದಿಟ್ಟಿದೆ. ಇದು ಸುಧಾ ಪತ್ರಿಕೆಯ ವಿಶಿಷ್ಟ ಶೈಲಿಯಾಗಿದೆ. ಏಕಕಾಲಕ್ಕೆ ಕನ್ನಡಿಗರ ಕನ್ನಡತನ, ಕನ್ನಡಿಗರ ಆಸ್ಮಿತೆಯನ್ನು ಎತ್ತಿ ಹಿಡಿಯುತ್ತಾ ಕನ್ನಡಿಗರ ಬುದ್ದಿ, ಭಾವಗಳನ್ನು ತಣಿಸುತ್ತಾ ಬಂದಿದೆ. ಕನ್ನಡ ಜಗತ್ತಿನೊಳಗೆ ಹೊರಜಗತ್ತಿನ ಸಂಗತಿಗಳನ್ನು ಅನಾವರಣ ಮಾಡಿ ಓದುಗರ ಅರಿವನ್ನು ಹೆಚ್ಚಿಸಿದೆ ಎಂದರು.ಮೂರು ತಲೆಮಾರುಗಳನ್ನು ಗಾಢವಾಗಿ ಪ್ರಭಾವಿಸಿದ ಸುಧಾ ಪತ್ರಿಕೆಯೂ ಎಂದು ಅಗ್ಗದ ಜನಪ್ರಿಯತೆಯ ದಾರಿ ಹಿಡಿದಿಲ್ಲ. ಬದಲಾಗಿ ಜನರ ಅರಿವನ್ನು ಹೆಚ್ಚಿಸುವ ಕನ್ನಡತನ ಉಳಿಸುತ್ತಾ ಹೊರಲೋಕದ ವಿಚಾರವನ್ನು ಕನ್ನಡಿಗರ ಮುಂದೆ ತೆರೆದಿಡುವ ಕೆಲಸದಲ್ಲಿ ಎಂದು ರಾಜಿಯಾಗಿಲ್ಲ ಎಂದರು.

60 ವರ್ಷಗಳಿಂದ ಓದುಗರು ಸುಧಾವನ್ನು ತಮ್ಮ ಕುಟುಂಬದಲ್ಲಿ ಇಟ್ಟುಕೊಂಡು ಬಂದಿದ್ದಾರೆ. ನಾನು ಐದು ರೂಪಾಯಿ ಬೆಲೆ ಇದ್ದಾಗಿನಿಂದ ಸುಧಾ ಓದಿಕೊಂಡು ಬಂದಿದ್ದೇನೆ. ಸುಧಾ ಪ್ರಭಾವ ಎಂತಹದು ಎಂದರೆ ನನ್ನ ತಂಗಿ ಮಗಳಿಗೆ ನಾನೇ ಸುಧಾ ಎಂದು ಹೆಸರಿಟ್ಟಿದ್ದೇನೆ ಎಂದು ಸುಧಾ ಪತ್ರಿಕೆಯ ಪ್ರಭಾವದ ಬಗ್ಗೆ ನೆನಪಿಸಿಕೊಂಡರು.ಪ್ರಜಾವಾಣಿ ಮತ್ತು ಸುಧಾ ದೀರ್ಘಕಾಲದಿಂದ ಬರಹಗಾರರು, ಓದುರನ್ನು ಬೆಳೆಸಿ ಜನರನ್ನು ಚಿಂತನಶೀಲರನ್ನಾಗಿ ಮಾಡುತ್ತಿವೆ. ಕನ್ನಡ ನಾಡು, ನುಡಿ, ಜನರ ಸಂಸ್ಕೃತಿಯನ್ನು ನಿರಂತರವಾಗಿ ಕಾಪಾಡುವ ಸಾಕ್ಷಿಪ್ರಜ್ಞೆಯಂತೆ ಕೆಲಸ ಮಾಡುತ್ತಿವೆ ಎಂದರು.
ಸುಧಾ ವಾರ ಪತ್ರಿಕೆಯ ಕಾರ್ಯನಿರ್ವಹಕ ಸಂಪಾದಕ ಚ. ಹ ರಘುನಾಥ ಮಾತನಾಡಿ ಯುದ್ದಗಳಿಗಿಂತ ಮೊಬೈಲ್ ನಮ್ಮನ್ನು ಇಂದು ಹೆಚ್ಚು ಆತಂಕಕ್ಕೆ ಈಡುಮಾಡಿದೆ. ಆಧುನಿಕ ಕನ್ನಡ ಸಾಹಿತ್ಯವನ್ನು ಗಮನಿಸಿದರೆ ಒಂದು ಓದುವ ಕ್ರಮವನ್ನು ಗಮನಿಸಬಹುದು. ಅಲ್ಲಿ ಓದುವ ಕ್ರಮದ ವಿನ್ಯಾಸ ಇದೆ. ಜನಪ್ರೀಯ ಬರಹಗಾರರ ಕಥೆ, ಕಾದಂಬರಿಗಳನ್ನು ಓದುವ ಮುಖಾಂತರ ವಿಕಾಸಹೊಂದುತ್ತ ಜನಪರತೆಯ ಸಾಹಿತ್ಯ ಓದುವ ಪ್ರವೃತ್ತಿಗೆ ಒಂದು ವಿಕಾಸದ ಕ್ರಮ ಇದೆ. ಜನಪ್ರಿಯತೆಯಿಂದ ಜನಪರತೆಯತ್ತ, ಮನೋರಂಜನೆಯಿಂದ ಮನೋವಿಕಾಸದತ್ತ, ಸಾಗುವುದು ಒಂದು ಓದುವ ಕ್ರಮ. ಆದರೆ ಇಂದು ಈ ಓದುವ ಕ್ರಮ, ಓದುವ ವಿಕಾಸ ನಡೆಯುತ್ತಿಲ್ಲ ಎನ್ನುವುದು ಸಾಹಿತ್ಯದ ಬಗ್ಗೆ, ಸಮಾಜದ ಆರೋಗ್ಯದ ಬಗ್ಗೆ ಕಾಳಜಿಯುಳ್ಳ ಎಲ್ಲರೂ ಆತಂಕ ಪಡುವ ಸಂಗತಿಯಾಗಿದೆ ಎಂದರು.

ಪ್ರಸ್ತುತ ಯುವಜನರು ಸಾಮಾಜಿಕ ಜಾಲತಾಣದಲ್ಲಿ ಓದನ್ನು ಆರಂಭಿಸಿ, ಅಲ್ಲೆ ಕೊನೆಗೊಳ್ಳುತ್ತಿದ್ದಾರೆ. ಏನು ನಮ್ಮ ಹಿಂದಿನ ಓದಿನ ಕ್ರಮ ಇತ್ತು, ಆದು ಇಂದು ಸಾಧ್ಯವಾಗುತ್ತಿಲ್ಲ. ನಮ್ಮ ಓದು ಮನೋ ವಿಕಾಸಕ್ಕೆ, ಜನಪರತೆಗೆ ಕಾರಣ ಆಗಬೇಕಾಗಿತ್ತು ಆದು ಸಾಮಾಜಿಕ ಜಾಲತಾಣದ ಓದಿನಿಂದ ಆಗುತ್ತಿಲ್ಲ. ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ಅಂದರೆ ಪೀತ ಪತ್ರಿಕೋದ್ಯಮ ಎಂದು ನೋಡಲಾಗುತ್ತಿತ್ತು. ಹೀಗ ಟ್ಯಾಬ್ಲಾಯಿಡ್ ಪತ್ರಿಕೆಗಳ ರೂಪದಲ್ಲಿ ಸಮಾಜಿಕ ಜಾಲತಾಣಗಳು ಅಸ್ತಿತ್ವದಲ್ಲಿವೆ ಎಂದರು.
ಪ್ರಜಾವಾಣಿ, ಸುಧಾ, ಹಾಗೂ ಮಯೂರ ಪತ್ರಿಕೆಗಳು ಕನ್ನಡ ನಾಡು ಕಟ್ಟುವ ಕೆಲಸ ಮಾಡುತ್ತಿವೆ. ಸುಧಾ 60 ವರ್ಷಗಳನ್ನು ಪೂರೈಯಿಸಿ, ಕುಟುಂಬದವರು ಒಟ್ಟಿಗೆ ಓದಬಹುದಾದ ಆರೋಗ್ಯಕರ ಕಥೆ, ಸಾಹಿತ್ಯವನ್ನು ಕೊಡುವುದರಲ್ಲಿ ಯಶಸ್ಸು ಗಳಿಸಿದೆ ಎಂದರು.ಓದುಗರ ನಿರಂತರ ಪ್ರೋತ್ಸಾಹವೇ ಸುಧಾ ಪತ್ರಿಕೆಯ ರಕ್ಷೆ. ಜೀವನ ಮೌಲ್ಯಗಳನ್ನು ಮನವರಿಕೆ ಮಾಡಿಕೊಡುತ್ತಾ, ಉತ್ತಮ ಸಮಾಜ ರೂಪಿಸಲು ಕಾರಣವಾಗಿದೆ. ಪತ್ರಿಕೆಯಲ್ಲಿ ಬಂದ ಅಂಕಣಗಳು ಕೆಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೂ ಮಾನ್ಯವಾಗಿವೆ ಎಂದರು.
ಸುಧಾ ಓದುಗರನ್ನು ಮತ್ತು ಲೇಖಕರ ಬಳಗವನ್ನು ಏಕಕಾಲಕ್ಕೆ ಸೃಷ್ಟಿಮಾಡಿದೆ. ಇಂದು ಕೆಲವರು ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಅವರು ಏನನ್ನು ಓದಬೇಕೋ, ಅದನ್ನು ಓದುತ್ತಿಲ್ಲ ಬದಲಾಗಿ ಬೇರೆ ಏನನ್ನೋ ಓದುತ್ತಿರುವುದು ಆತಂಕಕಾರಿಯಾಗಿದೆ. ಸುಧಾ ಪತ್ರಿಕೆ ತಲೆ ಮಾರುಗಳಿಂದ ತಲೆಮಾರುಗಳಿಗೆ ಸಾಂಸ್ಕೃತಿಕ ಬಳುವಳಿಯ ರೀತಿಯಲ್ಲಿ ಸಾಗುತ್ತಿದೆ. ತಂದೆ -ತಾಯಿಯವರಿಂದ ಅವರ ಮಕ್ಕಳು ಆ ಓದನ್ನು ಮುಂದುವರೆಸುತ್ತಿದ್ದಾರೆ. ಸುಧಾದ ಓದುಗ ಬಳಗ ಸಂಸ್ಕೃತಿಯ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎನಿಸುತ್ತದೆ ಎಂದು ಅಭಿಪ್ರಾಪಟ್ಟರು

ನಿವೃತ್ತ ಪ್ರಾಂಶುಪಾಲ ಮುನೀಂದ್ರಕುಮಾರ್ ಮಾತನಾಡಿ ಯುವಜನರಲ್ಲಿ ಓದುವ ಅಭಿರುಚಿ ಬೆಳಸಿದ ಸುಧಾ ವಾರ ಪತ್ರಿಕೆಯೂ ಕನ್ನಡ ನಾಡು, ನುಡಿ, ಜಲದ ಬಗ್ಗೆ ಅರಿವು ಮೂಡಿಸಿ ರಕ್ಷಣೆ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಮಲನ ಮೂರ್ತಿ, ಮಧುಗಿರಿ ಉಪವಿಭಾಗಧಿಕಾರಿ ಗೋಟೂರು ಶಿವಪ್ಪ, ನಿವೃತ್ತ ಪ್ರಾಂಶುಪಾಲ ಪ್ರೋ. ಸಿ. ಕೃಷ್ಣಪ್ಪ, ಕಸಾಪ ಜಿಲ್ಲಾಧ್ಯಕ್ಷ ಕೆ. ಎಸ್. ಸಿದ್ದಲಿಂಗಪ್ಪ, ಬಿಇಒ ಹನುಮಂತರಾಯಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಶಂಕರನಾರಯಣ ಶೆಟ್ಟಿ, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಕಾರ್ಯದರ್ಶಿ ರಂಗಧಾಮಯ್ಯ, ಅಧ್ಯಾಪಕ ಡಾ. ಎಂ. ಗೋವಿಂದರಾಯ ಇನ್ನಿತರರು ಇದ್ದರು.
