ಒಳ ಮೀಸಲಾತಿ ವರ್ಗೀಕರಣದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಕಕ್ಕೇರಾ ಗ್ರಾಮದಲ್ಲಿ ಮಾದಿಗ ಸಮುದಾಯದ ಮುಖಂಡರು ಸಂಭ್ರಮಾಚರಣೆ ನಡೆಸಿದರು.
ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ ವೃತ್ತದಲ್ಲಿ ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡಲಾಯಿತು.
ವಿಜಯೋತ್ಸವ ಆಚರಿಸಿದ ಮುಖಂಡರು, ಮೂರು ದಶಕಗಳ ಮಾದಿಗ ಮತ್ತು ಒಳ ಮೀಸಲಾತಿ ಪರ ಹೋರಾಟಕ್ಕೆ ಸಂದ ಜಯ ಎಂದರು.
ಈ ವೇಳೆ ಭೀಮಣ್ಣ ಮ್ಯಾಗೇರಿ ಮಾತನಾಡಿ, ಮಾದಿಗ ದಂಡೋರ ರಾಷ್ಟ್ರೀಯ ನಾಯಕರಾದ ಮಂದಕೃಷ್ಣ ಅವರ 30 ವರ್ಷದ ಹೋರಾಟದ ಫಲ ಎಂದು ಅಭಿಪ್ರಾಯಪಟ್ಟರು.

“ಇದೊಂದು ಐತಿಹಾಸಿಕ ತೀರ್ಪು, ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿದ್ದ ಒಳಮೀಸಲಾತಿ ಜಾರಿ ಕುರಿತಂತೆ ಇದ್ದ ಕೇಸಿಗೆ ಏಳು ನ್ಯಾಯಾಮೂರ್ತಿಗಳು ಗುರುವಾರ ತೀರ್ಪು ನೀಡಿದ್ದು, ಒಳಮೀಸಲಾತಿ ವರ್ಗೀಕರಣ ಆಯಾ ರಾಜ್ಯಗಳು ಮಾಡಲು ಒಪ್ಪಿಗೆ ನೀಡಿದೆ” ಎಂದರು.
ನಿರಂತರ ಹೋರಾಟದ ಫಲವಾಗಿ ಈ ತೀರ್ಪು ನೀಡಿದೆ. ಒಳಮೀಸಲಾತಿ ಜಾರಿಗೆ ಕಲಂ 341 ತಿದ್ದುಪಡಿ ಅಗತ್ಯವಿಲ್ಲ. ರಾಜ್ಯ ಸರ್ಕಾರಗಳೇ ಜಾರಿಗೆ ತರಬಹುದು ಎಂದು ತೀರ್ಪು ನೀಡಿದೆ. ಈ ತೀರ್ಪಿಗಾಗಿ ಹೋರಾಟ ನಡೆಸಿದ ಎಲ್ಲರಿಗೂ ಜಯ ಸಲ್ಲಬೇಕು ಎಂದರು.
ರಾಜ್ಯಾಧ್ಯಕ್ಷ ಬಿ. ನರಸಪ್ಪ, ರಾಜ್ಯ ಉಪಾಧ್ಯಕ್ಷ ಗಣೇಶ್ ದುಪಲ್ಲಿ ಹಾಗೂ ಜಿಲ್ಲಾಧ್ಯಕ್ಷ ಕಾಶೆಪ್ಪ ಹೇಗಣ್ಣಗೇರಾ, ಹೋಬಳಿ ಶಾಖೆ ಅಧ್ಯಕ್ಷ ಭೀಮಣ್ಣ ಮ್ಯಾಗೇರಿ ಸೇರಿದಂತೆ ಸರ್ವ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
