ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ʼಬಡವರಿಗೆ ಭೂಮಿ, ನಿವೇಶನʼ ನೀಡುವಂತೆ ಆಗ್ರಹಿಸಿ ಭೂ ಗುತ್ತಿಗೆ ಹೋರಾಟ ಸಮಿತಿಯಿಂದ ಜನವರಿ 17ರಂದು ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಲ್ಲಿದ್ದು, ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಆಯೋಜಿಸಲಾಗಿದೆ ಎಂದು ಸಂಘಟನಾಕಾರರು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಪ್ರಕಟಣೆಗೆ ತಿಳಿಸಿರುವ ಪ್ರತಿಭಟನಾಕಾರರು, “ಇರುವ ಭೂಮಿಯನ್ನೆಲ್ಲ ಹಣ ಕಟ್ಟಿ ಗುತ್ತಿಗೆ ಪಡೆದುಕೊಂಡರೆ ನಿವೇಶನ ರಹಿತರು, ಭೂ ರಹಿತರಿಗೆ ಜಾಗವೇ ಇರುವುದಿಲ್ಲ. ಎಲ್ಲವೂ ಭೂ ಮಾಲೀಕರ ಕೈ ಸೇರಲಿದ್ದು, ಕೊಡಗಿನಲ್ಲಿ ಬಡವರ ಬದುಕಿನ ಕರಾಳ ಅಧ್ಯಾಯಕ್ಕೆ ಮುನ್ನುಡಿಯಾಗಲಿದೆ. ಕೊಡಗಿನಲ್ಲಿ ಅಪಾಯಕಾರಿ ಭೂ ಗುತ್ತಿಗೆ ಆದೇಶ ಜಾರಿಯಾಗಿ ಉಳ್ಳವರಿಗೆ ಭೂಮಿಯನ್ನು ಗುತ್ತಿಗೆ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದು ಕೊಡಗಿನ ಆದಿವಾಸಿ, ಶೋಷಿತ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಬದುಕಿಗೆ ಉರುಳಾಗಲಿದೆ” ಎಂದು ಸಂಘಟನಾಕಾರರು ಆರೋಪ ಮಾಡಿದ್ದಾರೆ.
ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನಿರ್ವಾಣಪ್ಪ ಈ ದಿನ ಡಾಟ್ ಕಾಮ್ ಜತೆಗೆ ಮಾತನಾಡಿ, “ನಮ್ಮ ಹೋರಾಟ ನಿವೇಶನಕ್ಕಾಗಿ, ನಮ್ಮ ಹಕ್ಕಿಗಾಗಿ ಭೂ ಗುತ್ತಿಗೆ ಆದೇಶದಿಂದ ಕೊಡಗಿನಲ್ಲಾಗುವ ಅನಾಹುತ ಅರಿತು ಹೋರಾಟಕ್ಕೆ ಮುಂದಾಗಿದ್ದೇವೆ. ಕೊಡಗಿನಲ್ಲಿ ಈಗಾಗಲೇ ನೂರಾರು ಎಕರೆ ಭೂಮಿ ಇರುವ ಭೂ ಮಾಲೀಕರಿಗೆ ಭೂಮಿ ಗುತ್ತಿಗೆ ನೀಡುವುದಾದರೆ ಬಡವರಿಗೂ ನೀಡಬೇಕು. ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಿ, ಜಾಗ ಕೊಡಲು ಆಗದ ಸರ್ಕಾರ ಉಳ್ಳವರ ಪರ ಗುತ್ತಿಗೆ ನೀಡುವ ಆದೇಶ ಮಾಡಿ ಬಡವರ ಜೀವನದ ಜತೆ ಚೆಲ್ಲಾಟವಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಕೆ ಮೊನ್ನಪ್ಪ ಮಾತನಾಡಿ, “ಕೊಡಗಿನಲ್ಲಿ ಈವರೆಗೆ ದಲಿತರು, ಆದಿವಾಸಿಗಳು, ಬಡ ಜನರು ಹೋರಾಟ ಮಾಡುತ್ತಿರುವುದು ಕೇವಲ ತುಂಡು ಭೂಮಿಗಾಗಿ, ಒಂದೇ ಒಂದು ಸೂರಿಗಾಗಿ. ನಮ್ಮನ್ನು ಆಳುವ ಸರ್ಕಾರಗಳು ಜನಹಿತ ಯೋಚಿಸದೆ ಕೇವಲ ಉಳ್ಳವರ ಪರವಾಗಿ ಓಲೈಸುವ ನಿಟ್ಟಿನಲ್ಲಿ ಬಡಜನರ ಶೋಷಣೆ ಮಾಡುತ್ತಿದೆ. ಇಲ್ಲಿನ ಜನಪ್ರತಿನಿಧಿಗಳಿಗೆ ಬಹುಸಂಖ್ಯಾತರಾದ ಹಿಂದುಳಿದ ವರ್ಗಗಳ, ದಲಿತ, ಆದಿವಾಸಿ ಜನಗಳ ಮತ ಬೇಕು. ಆದರೆ ಅವರ ಹಿತ ಬೇಕಿಲ್ಲ. ಸರ್ಕಾರ ಕೂಡಲೇ ಇದನ್ನೆಲ್ಲ ಮನಗಂಡು ಭೂಮಿಯನ್ನು ಹಂಚಿಕೆ ಮಾಡಬೇಕು. ಬಡ ಜನರಿಗೆ ಭೂಮಿ ಕಾಯ್ದಿರಿಸಿ ನಿವೇಶನ ನೀಡಬೇಕು, ಬಡ ಜನರ ಬದುಕಿಗೆ ನೆರವಾಗಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ಕರ್ನಾಟಕದ ಕಾಶ್ಮೀರ ಎನಿಸಿಕೊಂಡಿರುವ ಕೊಡಗಿನ ‘ಮಡಿಕೇರಿ’ಗೆ ಪರಿಶುದ್ಧ ಗಾಳಿ ಪಟ್ಟಿಯಲ್ಲಿ ಅಗ್ರಸ್ಥಾನ
“ಸರ್ಕಾರದ ಅನ್ಯಾಯ ಧೋರಣೆಯನ್ನು ಖಂಡಿಸಿ ಕೊಡಗಿನ ಎಲ್ಲ ಪ್ರಗತಿಪರ ಸಂಘಟನೆಗಳು ಸೇರಿ, ಸರ್ಕಾರದ ಭೂ ಗುತ್ತಿಗೆ ಆದೇಶ ರದ್ದುಪಡಿಸುವಂತೆ ಆಗ್ರಹಿಸಿ ನಾಳೆ ಹೋರಾಟಕ್ಕಿಳಿಯಲಿವೆ. ನಾಳೆ ಸುದರ್ಶನ ವೃತ್ತದಿಂದ ಆರಂಭವಾಗುವ ಜಾಥಾ ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ಜಮಾವಣೆ ಆಗಿ ಧರಣಿ ನಡೆಸಲಿವೆ” ಎಂದು ಸಮಿತಿ ತಿಳಿಸಿದೆ.
