ಕಾರ್ಕಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ (ರಿ) ಹಾಗೂ ಮಡಿವಾಳ ಯುವ ಘಟಕ, ಮಡಿವಾಳ ಮಹಿಳಾ ಘಟಕದ ಆತಿಥ್ಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಪುರುಷರ ಪ್ರೊ ಕಬಡ್ಡಿ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟ ಮಡಿವಾಳ ಮಾಚಿದೇವ ಟ್ರೋಫಿ-2025 ಯನ್ನು ಫೆ. 23 ರಂದು ಕಾರ್ಕಳ ಕಾಬೆಟ್ಟು ಸಮುದಾಯ ಭವನದ ಅಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಘಟಕ ಅಧ್ಯಕ್ಷ ಸಂಪತ್ ಕುಮಾರ್ ಕಣಂಜಾರು ತಿಳಿಸಿದ್ದಾರೆ.
ಅವರು ಗುರುವಾರ ನಗರ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ಮಡಿವಾಳ ಮಾಚಿದೇವ ಟ್ರೋಫಿ ಉದ್ಘಾಟನೆ ನಡೆಯಲಿದ್ದು, ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಕಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಮಡಿವಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಪ್ರವರ್ತಕ ಉದಯ ಶೆಟ್ಟಿ ಮುನಿಯಾಲು, ಮಾಚಿದೇವ ನಿಗಮದ ನಿಕಟಪೂರ್ವ ಅಧ್ಯಕ್ಷ ರಾಜು ಎಂ. ತಲ್ಲೂರು ಸಹಿತ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಸಮಾರೋಪ – ಅಂದು ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಸಭಾಭವನ ಕಟ್ಟಡ ಸಮಿತಿ ಅಧ್ಯಕ್ಷ ಉದಯ್ ಸಾಲ್ಯಾನ್ ಅಜ್ಜಾಡಿ, ಸಮಾಜ ಸೇವಕ ಬೋಳ ಪ್ರಶಾಂತ್ ಕಾಮತ್, ಡಾ. ರವೀಂದ್ರ ಶೆಟ್ಟಿ ಬಜಗೋಳಿ ಕಾರ್ಕಳ, ಹಿಂದೂ ಮುಖಂಡ ರತ್ನಾಕರ ಅಮೀನ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಉದ್ಯಮಿ ಸಂಜೀವ ಮಡಿವಾಳ ಕಾಬೆಟ್ಟು ಸಹಿತ ಅನೇಕರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಮಡಿವಾಳ ಸಮಾಜ ಬಾಂಧವರನ್ನು ಸಂಘಟಿಸುವ ಮತ್ತು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿಸುವ ನಿಟ್ಟಿನಲ್ಲಿ ಮಡಿವಾಳ ಮಾಚಿದೇವ ಟ್ರೋಫಿ-2025 ಯನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಈ ಬಾರಿ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಪುರುಷರ ಪ್ರೊ ಕಬಡ್ಡಿ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟವನ್ನು ಹಮ್ಮಿಕೊಂಡಿದ್ದೇವೆ. ಈಗಾಗಲೇ ಮುಂಬೈ, ರಾಯಚೂರು, ಗದಗ ಸಹಿತ ನಾನಾ ಕಡೆಗಳಿಂದ 15 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿದೆ ಎಂದರು.
ಪಂದ್ಯಾಟದಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಮಾದರಿಯಲ್ಲಿ ಶಾಶ್ವತ ಫಲಕ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮಡಿವಾಳ ಸಮಾಜದ ಬಂಧುಗಳಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗುವುದು.
ಪಂದ್ಯಾಟದಲ್ಲಿ ಭಾಗವಹಿಸುವವರಿಗೆ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿ ಕಡ್ಡಾಯ. ಕಬಡ್ಡಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 8197850756, 9110642960, 7022428208 ಹಾಗೂ ತ್ರೋಬಾಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9483154168, 9902843839 ಸಂಪರ್ಕಿಸಬಹುದಾಗಿದೆ. ಪಂದ್ಯಾಟಕ್ಕೆ ಉಚಿತ ಪ್ರವೇಶವಿದೆ.
ಪ್ರೊ ಕಬ್ಬಡಿ ವಿಜೇತರಿಗೆ ಪ್ರಥಮ 11111 ರೂ. ಹಾಗೂ ಟ್ರೋಫಿ, ದ್ವಿತೀಯ 7777 ಹಾಗೂ ಟ್ರೋಫಿ, ತೃತೀಯ 3333 ಹಾಗೂ ಟ್ರೋಫಿ, ಚತುರ್ಥ 2222 ರೂ ಹಾಗೂ ಟ್ರೋಫಿ, ಉತ್ತಮ ಹಿಡಿತಗಾರ ಟ್ರೋಫಿ, ಉತ್ತಮ ದಾಳಿಗಾರ ಟ್ರೋಫಿ, ಉತ್ತಮ ಸವ್ಯಸಾಚಿ ಟ್ರೋಫಿ ನೀಡಲಾಗುತ್ತದೆ.
ತ್ರೋಬಾಲ್‌ನಲ್ಲಿ ಪ್ರಥಮ 5555 ರೂ. ಟ್ರೋಫಿ, ದ್ವಿತೀಯ 3333 ರೂ. ಹಾಗೂ ಟ್ರೋಫಿ, ಉತ್ತಮ ಸವ್ಯಸಾಚಿ ವಿಭಾಗದಲ್ಲಿ ಟ್ರೋಫಿ ನೀಡಲಾಗುತ್ತದೆ.
ಪಂದ್ಯಾಟದ ನಿಬಂಧನೆಗಳು
- ಮಡಿವಾಳ ಸಮಾಜದ ಬಂಧುಗಳಿಗೆ ಮಾತ್ರ ಅವಕಾಶ
- ಆಹ್ವಾನಿತ ತಂಡಗಳಿಗೆ ಮಾತ್ರ ಅವಕಾಶ
- ಆಹ್ವಾನಿತ ತಂಡಗಳು ಆಯ ಸಂಘದ ಅಧ್ಯಕ್ಷ/ಕಾರ್ಯದರ್ಶಿ ಅವರಿಂದ ತಂಡದ ಸದಸ್ಯರ ಹೆಸರುಗಳನ್ನು ದೃಢೀಕರಿಸುವ ಪತ್ರದೊಂದಿಗೆ ಬರಬೇಕು.
- ಬೆಳಗ್ಗೆ 9 ಗಂಟೆಗೆ ಪಂದ್ಯಾಟದ ಲಾಡ್ಸ್ಗಳನ್ನು ಹಾಕಲಾಗುವುದು. ಲಾಡ್ಸ್ ಹಾಕುವ ಸಂದರ್ಭದಲ್ಲಿ ಆಯಾ ತಂಡದ ನಾಯಕರು ಸದಸ್ಯರೊಂದಿಗೆ ಕಡ್ಡಾಯವಾಗಿ ಹಾಜರಿರಬೇಕು.
- ಕಾರ್ಯಕ್ರಮ ನಡೆಸುವ ಸಂಘ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ.
- ಪ್ರತಿ ನೋಂದಾಯಿತ ಸಂಘದಿಂದ ಎರಡು ತಂಡಗಳಿಗೆ ಮಾತ್ರವೇ ಅವಕಾಶ
- ಪ್ರತಿಯೊಬ್ಬ ಆಟಗಾರರಿಗೆ ಗುರುತಿನ ಚೀಟಿ ಕಡ್ಡಾಯ.
- ಕಬ್ಬಡಿ ಆಟಗಾರರು ಶೂ ಹಾಕಿದರೆ ಉತ್ತಮ
- ಮಹಿಳಾ ತ್ರೋಬಾಲ್ ಆಟಕ್ಕೆ ಒಂದು ತಂಡದಲ್ಲಿ ಏಳು ಮಂದಿಗೆ ಮಾತ್ರ ಅವಕಾಶ
- ಮಧ್ಯಾಹ್ನದ ಸಹಭೋಜನ ವ್ಯವಸ್ಥೆ ಇರುತ್ತದೆ.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಮಾಜ ಬಾಂಧವರಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಸಾದ್ ಕುಮಾರ್ ಐಸಿರ ಕುಕ್ಕುಂದೂರು, ಸದಾನಂದ್ ಸಾಲ್ಯಾನ್ ಕೆರ್ವಾಶೆ, ಸುಮಾ ಜಯಕರ ಮಡಿವಾಳ ನಕ್ರೆ, ಸವಿತಾ ಸುಧಾಕರ ಅಜೆಕಾರ್ ಉಪಸ್ಥಿತರಿದ್ದರು.
