ಅಂಬಾನಿ, ಅದಾನಿ ಮನೆಯಲ್ಲಿ ಜಗಳ ಆದರೆ, ಬಿಡಿಸಲು ಪ್ರಧಾನಿ ಮೋದಿ ಹೋಗುತ್ತಾರೆ. ಅದರೆ, ಅವರಿಗೆ ರೈತರ, ಕಾರ್ಮಿಕರ, ದಲಿತರ, ಯುವಜನರ ಸಂಕಷ್ಟಗಳನ್ನು ಕೇಳಲು ಸಮಯವಿಲ್ಲ. ಅವರು ಉಳ್ಳವರಿಗಾಗಿ ನೀತಿಗಳನ್ನು ರೂಪಿಸುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ನಡೆಯುತ್ತಿರುವ ಮಹಾಧರಣಿಯಲ್ಲಿ ಮಾತನಾಡಿದ ಅವರು, “ಕಾರ್ಖಾನೆಗಳಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಹೆಚ್ಚಾಗಿ ಸರಕುಗಳ ಉತ್ಪಾನೆ ಮಾಡುತ್ತಿದ್ದಾರೆ. ಕಾರ್ಖಾನೆಗಳಲ್ಲಿ ಉತ್ಪನ್ನಗಳು ಹೆಚ್ಚಿತ್ತಿವೆ. ಅದೇ ವೇಳೆ, ಕಾರ್ಮಿಕರ ಸಂಬಳ ಕಡಿಮೆಯಾಗುತ್ತಿದೆ. ಕಾರ್ಮಿಕರ ವೇತನ ಹೆಚ್ಚಿಸಿ ಎಂದರೆ, ‘ನಷ್ಟವಾಗುತ್ತದೆ’ ಎಂದು ಕಂಪನಿಗಳು ಹೇಳುತ್ತಿವೆ. ಕಾರ್ಮಿಕರ ದುಡಿಮೆಗೆ ತಕ್ಕಷ್ಟು ವೇತನವನ್ನೂ ನೀಡುತ್ತಿಲ್ಲ. ಕಾರ್ಮಿಕರ ಶ್ರಮದ ಲೂಟಿ ನಡೆಯುತ್ತಿದೆ” ಎಂದು ಕಿರಿಕಾರಿದರು.
“ಕೃಷಿಯಲ್ಲಿ ಜೀವನವಿಲ್ಲ ಎಂದು ನಾವೆಲ್ಲ ಭಾವಿಸಿದ್ದೇವೆ. ನಮ್ಮ ಮಕ್ಕಳು ಚೆನ್ನಾಗಿ ಓದಬೇಕು. ಒಳ್ಳೆಯ ಜೀವನ ನಡೆಸಬೇಕೆಂದು ನಾವೆಲ್ಲ ಕನಸು ಕಾಣುತ್ತೇವೆ. ಆದರೆ, ನಮ್ಮ ಕೃಷಿ ಭೂಮಿಯನ್ನೂ ಕಸಿಕೊಳ್ಳಲಾಗುತ್ತಿದೆ. ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣದಲ್ಲಿ ಕೆಐಎಡಿಬಿ ರೈತರ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಅಲ್ಲಿ ನ ರೈತರು ಸುಮಾರು 500ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಮಾತನ್ನು ಸರ್ಕಾರಗಳು ಕೇಳಿಸಿಕೊಳ್ಳುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ನಡೆದಿದೆ. ಆದರೆ, ಸಮೀಕ್ಷೆ ನಡೆಸಿದ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ನೀಡಲಾಗಿಲ್ಲ. ಅಲ್ಲದೆ, ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಬಾರದು. ಬಹಿರಂಗ ಮಾಡಬಾರದು ಅಂತ ಕೇಂದ್ರ ಸರ್ಕಾರ ಹೇಳಿದೆ. ಆದ್ರೂ, ಕೆಲವೊಂದಷ್ಟು ಅಂಕಿಅಂಶಗಳು ಬಹಿರಂಗವಾಗಿವೆ. ಅದರಲ್ಲಿ, 12 ವರ್ಷಕ್ಕಿಂತ ಒಳಗಿನ ಹೆಚ್ಚು ಮಕ್ಕಳಲ್ಲಿ ಅಪೌಷ್ಠಿಕತೆ ಕಾಡುತ್ತಿದೆ. ಅದನ್ನು ಮುಚ್ಚಿಟ್ಟುಕೊಳ್ಳುವ ಹುನ್ನಾರವನ್ನ ಸರ್ಕಾರ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
“ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಕೂಲಿ ಕಾರ್ಮಿಕರಿಗೆ ಸರಿಯಾದ ಕೂಲಿ ದೊರೆಯಬೇಕು. ಕೂಲಿ ನೀಡುವ ಸಾಮರ್ಥ್ಯ ರೈತರಿಗೆ ಬರಬೇಕು. ಜನರು ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಅದರೆ, ಗ್ರಾಮೀಣ ಭಾಗದಲ್ಲಿ ಕೊಳ್ಳುವ ಶಕ್ತಿ 75%ರಷ್ಟು ಕುಸಿದಿದೆ. ಬಂಡವಾಳಿಗರ ಜೊತೆ ಸೇರಿ, ದೇಶವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂತಹ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು” ಎಂದು ಕರೆಕೊಟ್ಟಿದ್ದಾರೆ.