ಪ್ರಸ್ತುತ ಭಾರತದ ಅಘೋಷಿತ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ, ಎಲ್ಲಿ ನೋಡಿದರಲ್ಲಿ ಹಿಂಸಾತ್ಮಕ ದೃಶ್ಯಾವಳಿಗಳನ್ನು ನೋಡುತ್ತಾ ಯುವಜನತೆಯನ್ನು ಒಕ್ಕಲೆಬ್ಬಿಸುತ್ತಿರುವ ಪ್ರಸ್ತುತ ಭಾರತದ ಹಲವು ದುಷ್ಟಶಕ್ತಿಗಳನ್ನು ನಿರ್ನಾಮಮಾಡಿ, ಅಹಿಂಸಾತ್ಮಕ ಸದ್ಭಾವನೆಗಳನ್ನು ಮೂಡಿಸಿಕೊಳ್ಳುವಲ್ಲಿ “ಗಾಂಧಿ ಭಾರತ”ದ ಕಾರ್ಯಕ್ರಮದ ಅತ್ಯಗತ್ಯವಾಗಿತ್ತು.
1924 ಡಿಸೆಂಬರ್ 26 ಮಹಾತ್ಮ ಗಾಂಧಿಯವರು ಅಧ್ಯಕ್ಷರಾಗಿದ್ದ ಸಮಯದಲ್ಲಿ, ರಾಷ್ಟ್ರೀಯ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಿದ್ದಕ್ಕೆ ಇಂದಿಗೆ ನೂರು ವರ್ಷ ಪೂರೈಸುತ್ತಿವೆ. ಇದೊಂದು ಅಭೂತಪೂರ್ವ ಭಾಗ್ಯ ಕರ್ನಾಟಕದಾಗಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಿಯವರೆಗೂ ಮುಂಬೈ -ಕಲ್ಕತ್ತಾ -ದೆಹಲಿ ಪ್ರಾಂತ್ಯಗಳಲ್ಲಿ ಬಹಳ ದಕ್ಷತೆಯಿಂದ ರಾಜಕಾರಣದಲ್ಲಿ ಕಾಂಗ್ರೆಸ್ ನೆಲೆಯೂರಿದ್ದರೂ, ಅದು ದೇಶಾದ್ಯಂತ ವ್ಯಾಪಿಸಲು ಈ ಬೆಳಗಾವಿ ಅಧಿವೇಶನ ಹೊಸ ದಿಕ್ಸೂಚಿಯನ್ನು ನೀಡಿತು ಎಂದರೆ ತಪ್ಪಾಗಲಾರದು.
ಮಹಾತ್ಮ ಗಾಂಧಿಯವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅವರೊಬ್ಬ ಸಮಾಜ ಸುಧಾರಕರೂ ಆಗಿದ್ದರು. ಹಾಗಾಗಿ ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕಾಂಗ್ರೆಸ್ಸನ್ನು ಕೇವಲ ರಾಜಕೀಯ ಪಕ್ಷವಾಗಿ ನೋಡದೆ, ಸಮಾಜ ಸುಧಾರಣೆಯ ಅಂಶಗಳನ್ನು ಅಳವಡಿಸಿ, ದೇಶದ ಪ್ರತಿ ಮನೆಮನೆಗೂ ಕಾಂಗ್ರೆಸ್ ಪಕ್ಷವನ್ನು ತಲುಪಿಸುವಲ್ಲಿ ಈ ಅಧಿವೇಶನ ಬಹುಮುಖ್ಯ ಪಾತ್ರವಹಿಸಿತು. ಅಂದಿನಿಂದ ಕಾಶ್ಮೀರದಿಂದ ಕನ್ಯಾಕುಮಾರಿಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮನ್ನು ತಾವು ಸ್ವಾತಂತ್ರ್ಯ ಚಳುವಳಿಗೆ ಸಮರ್ಪಿಸಿಕೊಂಡರು.

ಇಡೀ ಅಖಂಡ ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ ಗಾಂಧಿಯವರು,18 ಬಾರಿ ಪ್ರವಾಸ ಮಾಡಿ, 122 ದಿನ ಕರ್ನಾಟಕದ ನೆಲದಲ್ಲಿ ಓಡಾಡಿದರು. ದೇಶದ ವಿವಿಧ ಜಾತಿ- ಧರ್ಮ- ಸಂಸ್ಕೃತಿ ಹಾಗೂ ಜನರ ಸಾಮಾಜಿಕ ಜೀವನವನ್ನು ಅಭ್ಯಾಸ ಮಾಡಿದ ಅವರು, “ಸ್ವಾತಂತ್ರ್ಯ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾವಾರು ಪ್ರಾಂತ್ಯಗಳಾಗಬೇಕೆಂದು” ಘೋಷಣೆ ಮಾಡುವುದರ ಮೂಲಕ ಅಂದೇ ಬಹುತ್ವ ಭಾರತಕ್ಕೆ ನಾಂದಿ ಹಾಡಿದರು.. ಇದಲ್ಲದೇ ಅಸ್ಪಶ್ಯತೆ ನಿವಾರಣೆ, ಹಿಂದೂ- ಮುಸ್ಲಿಂ ಭಾತೃತ್ವ, ಸ್ವದೇಶಿ ಖಾದಿ ಬಳಕೆ ಹೀಗೆ ಹತ್ತು ಹಲವಾರು ನಿರ್ಣಯಗಳನ್ನು ಜಾರಿಗೆ ತಂದರು.
ಇಂದು ಕಾಂಗ್ರೆಸ್ಸಿನ ರಾಷ್ರ್ಟೀಯ ಅಧಿವೇಶನ ನೂರು ವರ್ಷ ಹಿಂದೆ ನಡೆದ ಸ್ಥಳದಲ್ಲಿ ನಡೆಯುತ್ತಿರುವುದು ಕೂಡ ಒಂದು ಐತಿಹಾಸಿಕ. ಇಂದು ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಿರುವುದು ಕೂಡ ಮತ್ತೊಂದು ಮೈಲಿಗಲ್ಲು. ಕಾರಣ ನೂರು ವರ್ಷದ ಹಿಂದೆ ನೆಡೆದ ಸಭೆಯಲ್ಲಿ ದಲಿತರನ್ನು ಮುಖ್ಯವಾಹಿನಿಗೆ ತರಬೇಕೆಂದು ಅಂದಿನ ಸರ್ವಸಮ್ಮತದ ನಿರ್ಧಾರವಾಗಿತ್ತು.

ನೂರನೇ ವರ್ಷದ ಈ ದಿನದ ಅಧಿವೇಶನದಲ್ಲಿ ದಲಿತರೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದದ್ದು ಕೂಡ ಅಭೂತಪೂರ್ವ ಕ್ಷಣವೆಂದರೆ ಅತಿಶಯೋಕ್ತಿ ಅಲ್ಲ. ಹಾಗೆ ದೇಶದ ಆದರ್ಶ ಮಹಿಳೆಯಾಗಿ ಗುರುತಿಸಿಕೊಂಡಿರುವ ಸೋನಿಯಾಗಾಂಧಿ, ಬಹುತ್ವ ಭಾರತದ ಭರವಸೆಯ ಜನನಾಯಕ ರಾಹುಲ್ ಗಾಂಧಿಯವರು, ಸಿಡಬ್ಲ್ಯೂಸಿ ಸದಸ್ಯರು, ಸ್ರ್ತೀಶಕ್ತಿ ಬೆನ್ನೆಲುಬಾದ ಪ್ರಿಯಾಂಕಾ ಗಾಂಧಿಯವರು, ರಾಷ್ಟ್ರೀಯ ನಾಯಕರು, ಕರ್ನಾಟಕದ ಸೈದ್ಧಾತಿಕ ಮೇರು ವ್ಯಕ್ತಿತ್ವದ ಜನನಾಯಕರಾದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ಸಂಘಟನಾ ಚತುರರಾದ, ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಎಲ್ಲ ಸಚಿವ ಸಂಪುಟದ ಸದಸ್ಯರು, ಶಾಸಕರು, ಸಂಸದರು, ವಿಧಾನಪರಿಷತ್ತು- ರಾಜ್ಯಸಭಾ ಸದಸ್ಯರು, ರಾಷ್ಟ್ರೀಯ ಹಾಗೂ ರಾಜ್ಯ ಪದಾಧಿಕಾರಿಗಳು, ಸೇವಾದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಅಧಿವೇಶನದಲ್ಲಿ ಭಾಗಿಯಾದ ಎಲ್ಲರಿಗೂ ಶುಭಾಶಯಗಳು.
ವಿಶೇಷವಾಗಿ ತಮ್ಮಅಧ್ಯಕ್ಷತೆಯ ಅವಧಿಯಲ್ಲಿ ಮತ್ತೊಂದು ಐತಿಹಾಸಿಕ ದಿನಕ್ಕೆ ನಾಂದಿ ಹಾಡಿದ ಡಿ.ಕೆ. ಶಿವಕುಮಾರ್ ಅವರು ಮತ್ತೊಂದು ಇತಿಹಾಸ ನಿರ್ಮಾಣ ಮಾಡಿದ್ದಾರೆ. ಇದು ಅವರ ಬದುಕಿನ ಅತಿದೊಡ್ಡ ಮೈಲಿಗಲ್ಲು ಎಂದರೆ ತಪ್ಪಾಗಲಾರದು.
ಸ್ವಾತಂತ್ರ್ಯ ಭಾರತದ ನಂತರ ಈ ದೇಶಕ್ಕೆ “ಗಾಂಧಿ ಭಾರತ” ಎಂದು ಹೆಸರಿಡಬೇಕು ಎಂದು ಸಮಾಜವಾದಿ ಲೋಹಿಯಾ ಅವರ ಅಪೇಕ್ಷೆಯಾಗಿತ್ತು. ಈ ದೇಶ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿಸಿ ಸ್ವತಂತ್ರ ತಂದುಕೊಟ್ಟ ಗಾಂಧಿಯವರ ನೇತೃತ್ವದ ಸ್ವಾತಂತ್ರ್ಯ ಅದೆಷ್ಟು ಮುಖ್ಯವೋ, ಸ್ವಾತಂತ್ರ್ಯ ನಂತರದ ಭಾರತದ ಭವಿಷ್ಯಕ್ಕಾಗಿ ನಿರ್ಮಾಣವಾದ ಅಂಬೇಡ್ಕರ್ ನೇತೃತ್ವದ ಸಂವಿಧಾನ ಅಷ್ಟೇ ಮುಖ್ಯ. ಸ್ವಾತಂತ್ರ್ಯ ಮತ್ತು ಸಂವಿಧಾನ ಒಂದು ನಾಣ್ಯದ ಎರಡು ಮುಖಗಳಂತೆ.

“ಭಾರತದ ಸಂವಿಧಾನ ಈ ದೇಶದ ಉದ್ದಗಲಕ್ಕೂ ಹರಿಯುವ ಮಹಾನದಿಯಾದರೆ, ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಸಂವಿಧಾನಶಿಲ್ಪಿ ಅಂಬೇಡ್ಕರ್ ಎರಡು ದಡಗಳು. ಹೀಗಾಗಿ ಇಂದಿನ ರ್ಯಾಲಿಗೆ ” ಜೈ ಬಾಪೂ – ಜೈ ಭೀಮ್- ಜೈ ಸಂವಿಧಾನ್ ” ಹೆಸರು ಬಹಳ ಅರ್ಥಪೂರ್ಣವಾಗಿದೆ. ಮನುವಾದಿಗಳನ್ನು ನಿರ್ನಾಮ ಮಾಡಲು ಈ ಮೂರು ವಾಕ್ಯಗಳು ಕಾಂಗ್ರೆಸ್ ಪಕ್ಷದ ಮುಂದಿನ ಘೋಷಣೆಗಳಾಗಬೇಕು.
“ಗಾಂಧಿ, ಭಾರತದ ಆತ್ಮವಾದರೆ- ಅಂಬೇಡ್ಕರ್ ದೇಶವೆಂಬ ದೇಹದಲ್ಲಿ ಹರಿದಾಡುವ ರಕ್ತ”…ಇತಿಹಾಸದಲ್ಲಿ ಆದ ಹಲವು ಕಹಿ ಘಟನೆಗಳನ್ನು ಮರೆತು, ನಮ್ಮ ಮುಂದಿನ ಭವಿಷ್ಯದ ಬಹುತ್ವ ಭಾರತಕ್ಕಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಬ್ದಾರಿ ನಮ್ಮೆಲ್ಲರದು.
ಒಂದು ವರ್ಷದ ” ಗಾಂಧಿ ಭಾರತ” ದ ರೂಪುರೇಷೆಗಳು ವಿಭಿನ್ನವಾಗಿರಲಿ ಹಾಗೂ ಈ ಸುದಿನ ಅರ್ಥಪೂರ್ಣವಾಗಿ ಮುಂದಿನ ಭಾರತದ ನಿರ್ಮಾಣಕ್ಕೆ ಭದ್ರ ಭವಿಷ್ಯ ನಿರ್ಮಾಣ ಮಾಡುವ ಐತಿಹಾಸಿಕ ನಿರ್ಣಯಗಳು ಹೊರಹೊಮ್ಮಲಿ ಆಶಿಸುವ.
ಬರಹ: ಶೈಲಜಾ ಹಿರೇಮಠ್
