ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಡಗು ಜಿಲ್ಲೆ, ಮಡಿಕೇರಿ ನಗರದ ಗಾಂಧಿ ಭವನದಲ್ಲಿ ಗುರುವಾರ ಭಗವಾನ್ ಮಹಾವೀರರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಚಾಲನೆ ನೀಡಿ ‘ ಸಮಾಜದಲ್ಲಿ ಎಲ್ಲರೂ ಬದುಕಬೇಕು ಹಾಗೂ ಬದುಕಲು ಬಿಡಬೇಕು ‘ಎಂಬ ಭಗವಾನ್ ಮಹಾವೀರರ ಸಂದೇಶವನ್ನು ಅರಿತು ನಡೆಯಬೇಕು ಎಂದರು.
” ಭಗವಾನ್ ಮಹಾವೀರರು ಅಹಿಂಸಾ ಧರ್ಮದ ಪ್ರವರ್ತಕರಾಗಿದ್ದು, ಸನ್ಮತಿ, ವರ್ಧಮಾನ ಹಾಗೂ ವೀರ ಹೆಸರುಗಳಿಂದ ಮಹಾವೀರರನ್ನು ಕರೆಯುತ್ತಾರೆ. ಕ್ರಿ.ಪೂ.6 ನೇ ಶತಮಾನದಲ್ಲಿ ರಾಜಪುತ್ರನಾಗಿ ಜನಿಸಿದರೂ, ಜನ ಕಲ್ಯಾಣಕ್ಕಾಗಿ ರಾಜತ್ವವನ್ನೂ ತ್ಯಾಗಮಾಡಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜೀವನ ನಡೆಸಿದರು. ಸತ್ಯ, ಅಹಿಂಸೆ, ಅಪರಿಗ್ರಹ, ಅಸ್ತೇಯ ಮತ್ತು ಬ್ರಹ್ಮಚರ್ಯ ಈ ಪಂಚ ವ್ರತಗಳ ಅನುಷ್ಠಾನದ ಅಡಿಪಾಯ ಹಾಕಿದರು.
ಅಹಿಂಸೆಯೇ ಪರಮ ಧರ್ಮ ಎಂಬುದು ದಿವ್ಯ ಮಂತ್ರವಾಗಿ ಅಳವಡಿಸಿಕೊಂಡಿದ್ದ ಮಹಾವೀರರು ಅದರಂತೆ ನಡೆದುಕೊಂಡರು ಪ್ರತಿಯೊಂದು ಜೀವಿಯೂ ಸಂತೋಷವಾಗಿರಲು ಬಯಸುತ್ತದೆ. ಯಾವುದೇ ಜೀವಿಯು ನೋವನ್ನು ಬಯಸುವುದಿಲ್ಲ ಎಂಬುದನ್ನ ಭಗವಾನ್ ಮಹಾವೀರರು ಪ್ರತಿಪಾದಿಸಿದ್ದಾರೆ ” ಎಂದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಮೂರ್ತಿ ಅವರು ಮಾತನಾಡಿ ” ಪುಣ್ಯ ಭೂಮಿಯಲ್ಲಿ ಕಾಲದಿಂದ ಕಾಲಕ್ಕೆ ಅನೇಕ ಪುಣ್ಯರನ್ನು ಕಂಡ ಶ್ರೇಷ್ಠತೆ ಹೊಂದಿದೆ. ಇಂತಹ ನಾಡಿನಲ್ಲಿ ಆಗಿ ಹೋಗಿರುವ ಋಷಿ ಮುನಿಗಳು, ಶರಣರು, ಸಂತರು ಹಾಗೂ ಮಹನೀಯರ ಸಂದೇಶಗಳನ್ನು ಪಾಲನೆ ಮಾಡುವ ಮೂಲಕ ನಾಡನ್ನು ಇನ್ನಷ್ಟು ಪುಣ್ಯಮಯ ಗೊಳಿಸಬೇಕೆಂದು ಹೇಳಿದರು.
ಕ್ರಿ.ಪೂ.600 ರಲ್ಲಿ ಬೋಧಿಸಿದ ಮಹಾವೀರರ ತತ್ವಾದರ್ಶಗಳು ಹನ್ನೆರಡನೇ ಶತಮಾನದ ಸ್ಪೂರ್ತಿಯಾಗಿದ್ದರಿಂದಲೇ ಬಸವೇಶ್ವರರು ಕೂಡ ಶಾಂತಿ, ಸಮಾನತೆ ಹಾಗೂ ಅಹಿಂಸೆಯನ್ನೇ ಬೋಧಿಸಿದರು. ಉಸಿರಾಡುವಾಗ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ನಶಿಸಬಾರದು ಎಂದು ಬಾಯಿಗೆ ಬಟ್ಟೆ ಕಟ್ಟಿ ಉಸಿರಾಡಿದರು. ಸಂಪತ್ತಿನ ಕ್ರೋಢೀಕರಣ ವಿರೋಧಿಸಿದ ಜೈನ ಧರ್ಮೀಯರು, ಸತ್ಯಶೀಲವಾದ ಜೀವನಕ್ಕೆ ಆದ್ಯತೆ ಕೊಟ್ಟರು ” ಎಂದು ಹೇಳಿದರು.
ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಮಾತನಾಡಿ ‘ ಮನುಷ್ಯರ ಜೀವನ ಉತ್ತಮವಾಗಲು ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರೊತ್ರ್ಯಗಳನ್ನು ಪಾಲಿಸಬೇಕು ‘ ಎಂದು ಸಲಹೆ ನೀಡಿದರು.
ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಮಾತನಾಡಿ ‘ ಭಗವಾನ್ ಮಹಾವೀರರು ಮನುಷ್ಯನ ಸರಿಯಾದ ನಡವಳಿಕೆಗೆ ಹೆಚ್ಚು ಒತ್ತು ನೀಡಿದ್ದರು ‘ ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಿಲ್ಲೆಯ ಇಂದೂಧರ ಹೊನ್ನಾಪುರ, ಹರಿಹರ ಆನಂದ ಸ್ವಾಮಿ ಸೇರಿದಂತೆ 15 ಮಂದಿ ಸಾಧಕರಿಗೆ ‘ ಅಂಬೇಡ್ಕರ್ ಪ್ರಶಸ್ತಿ ‘
ಎಚ್.ಎಲ್. ದಿವಾಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಬಿ.ಸಿ.ಶಂಕರಯ್ಯ, ಮಣಜೂರು ಮಂಜುನಾಥ್ ಸೇರಿದಂತೆ ಇನ್ನಿತರರು ಇದ್ದರು.