ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಟೋಲ್ ಬಳಿ ಗುರುವಾರ ಬೆಳಗಿನ ಜಾವ ಲಾರಿ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿ, ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿಯ ಗುತ್ತಿಗೆದಾರ ಲಕ್ಷ್ಮಣ ವಡ್ಡರ, ಬೈಲಪ್ಪ ಬಿರಾದಾರ, ಕಾರು ಚಾಲಕ ಮೊಹಮ್ಮದ್ ರಫೀಕ್ ಗುಡ್ನಾಳ ಹಾಗೂ ಮುದ್ದೇಬಿಹಾಳ ಮೂಲದ ರಾಮಣ್ಣ ನಾಯಕ ಮಕ್ಕಳ ಮೃತಪಟ್ಟವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ನಜ್ಜುಗುಜ್ಜಾಗಿದ್ದರೆ, ಲಾರಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿ ಬಿದ್ದಿದೆ.
ಕಾರ್ಯ ನಿಮಿತ್ತ ಬಳ್ಳಾರಿ ಕಡೆಗೆ ತೆರಳಿ ಕೆಲಸ ಮುಗಿಸಿಕೊಂಡು ವಾಪಸ್ ಊರಿಗೆ ಮರಳುವಾಗ ಧನ್ನೂರು ಟೋಲ್ ಬಳಿ ಅಪಘಾತವಾಗಿದೆ. ಲಾರಿಯು ಮುದ್ದೇಬಿಹಾಳ ಕಡೆಯಿಂದ ಹುನಗುಂದ ಕಡೆಗೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟವರ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
