ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಛಲವಾದಿ ಸಮಾಜ ಹಾಗೂ ಮುಖಂಡರ ಯಾರ ವಿರೋಧವೂ ಇಲ್ಲ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಸಹ ವಿರೋಧಿಸುತ್ತಿಲ್ಲ. ಕೆಲವರು ವೈಯಕ್ತಿಕವಾಗಿ ವಿರೋಧಿಸುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಛಲವಾದಿ ಮಹಾಸಭಾದ ಅಧ್ಯಕ್ಷ ಶಿವರಾಜ ಜಾನೇಕಲ್ ಹೇಳಿದರು.
ರಾಯಚೂರು ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಇತ್ತೀಚಿಗೆ ಮಾದಿಗ ಸಮಾಜದ ಮುಖಂಡರುಗಳು ಒಳಮೀಸಲಾತಿಗೆ ಮಲ್ಲಿಕಾರ್ಜುನ ಖರ್ಗೆಯವರು ಅಡ್ಡಿಯಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅವರೆಲ್ಲಿಯೂ ಒಳ ಮೀಸಲಾತಿ ವಿರೋಧಿಸಿ ಹೇಳಿಕೆ ನೀಡಿಲ್ಲ. ಅಲ್ಲದೇ, ಅಡ್ಡಿಯೂ ಆಗಿಲ್ಲ. ಪದೇ ಪದೇ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಸದಾಶಿವ ಆಯೋಗದ ವರದಿಯಲ್ಲಿ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಉಪ ಜಾತಿಗಳು, ಮಾದಿಗ ಮತ್ತು ಛಲವಾದಿ ಸಮಾಜಗಳಲ್ಲಿವೆ. ಉಪಜಾತಿ ಜನರನ್ನು ಯಾವ ಜಾತಿಗೆ ಸೇರಿಸಲಾಗುತ್ತದೆ ಎಂದು ಸ್ಪಷ್ಟನೆ ಕೋರಿ ಪತ್ರ ಬರೆಯಲಾಗಿದೆಯೇ ಹೊರತು ಒಳ ಮೀಸಲಾತಿಗೆ ವಿರೋಧಿಸಿಲ್ಲ. ಸುಪ್ರಿಂ ಕೋರ್ಟಿನ ತೀರ್ಪು ಜಾರಿಗೊಳಿಸುವುದು ರಾಜ್ಯ ಸರ್ಕಾರದ ನಿರ್ಧಾರವಾಗಿದೆ. ಮಲ್ಲಿಕಾರ್ಜುನ ಖರ್ಗೆಯವರವಾಗಲಿ, ಇತರೆ ಛಲವಾದಿ ಸಮಾಜದ ಮುಖಂಡರು ತಡೆಯುವ ಪ್ರಯತ್ನವೂ ಮಾಡಿಲ್ಲ. ಸುಳ್ಳು ಆರೋಪ ಮಾಡುವುದರಿಂದ ಸಮಾಜದಲ್ಲಿಯೇ ಬಿರುಕು ಮೂಡಿಸಲು ಕಾರಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾಸಭಾ ಮಾಜಿ ಅಧ್ಯಕ್ಷ ಜಗನ್ನಾಥ ಸುಂಕಾರಿ ಮಾತನಾಡಿ, ಕಳೆದ 3 ವರ್ಷಗಳಿಂದ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಮಾದಿಗ ಸಮುದಾಯದೊಂದಿಗೆ ಛಲವಾದಿ ಸಮಾಜವೂ ಒತ್ತಾಯಿಸುತ್ತಲೇ ಬಂದಿದೆ. ಜನಸಂಖ್ಯೆಯಲ್ಲಿ ಆಗುವ ವ್ಯತ್ಯಾಸ ಮೀಸಲಾತಿ ಹಂಚಿಕೆ ಮೇಲೂ ಆಗುವ ಆತಂಕದಿಂದ ಸ್ಪಷ್ಟನೆ ಕೋರಲಾಗಿದೆಯೇ ಹೊರತು ಒಳ ಮೀಸಲಾತಿ ಜಾರಿಗೆ ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮೀಸಲಾತಿ ಜಾರಿಗೆ ಬಗ್ಗೆ ಹೇಳಿಕೆ, ಇನ್ನಿತರ ಅಡ್ಡಿಯಾಗಿಲ್ಲ. ಮಾದಿಗ ಸಮಾಜದ ಜೊತೆಯಲ್ಲಿ ಛಲವಾದಿ ಸಮಾಜವು ರಾಜ್ಯದಲ್ಲಿ ಹೋರಾಟದೊಂದಿಗೆ ಬೆಂಬಲಿಸುತ್ತಾ, ನಿರಂತರ ಕೈ ಜೋಡಿಸಿ ಬೆಂಬಲವಾಗಿದ್ದೇವೆ ಎಂದರು.
ಸುಪ್ರಿಂ ಕೋರ್ಟ್ ತೀರ್ಮಾನದಂತೆಯೇ ಖಚಿತ ಜನಸಂಖ್ಯೆ ಮಾಹಿತಿಯ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಆಯೋಗದಲ್ಲಿರುವ ಗೊಂದಲ ನಿವಾರಿಸಲು ಕೇಳಲಾಗಿದೆ ಹೊರತು ಜಾರಿಗೆ ವಿರೋಧವಿಲ್ಲ. ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸವಾಗಬಾರದು ಎಂದು ಶಿವರಾಜ್ ಹೇಳಿದರು.
ಈ ಸಂದರ್ಭದಲ್ಲಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ವಕೀಲ, ಶಿವುಕಮಾರ ಜೆ.ಹನುಮಾಪುರು, ಮಧುಕಾಂತ, ಮಧುಕಾಂತ, ಸಚ್ಚಿದಾನಂದ, ನರಸಿಂಹ ಇನ್ನಿತರರು ಉಪಸ್ಥಿತರಿದ್ದರು.
