ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಅಟ್ಯಾಚ್ಮೆಂಟ್ ಕಾರ್ಖಾನೆಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಷ್ಟವನ್ನು ತೋರಿಸಿ ಅಕ್ರಮವಾಗಿ ಕಾರ್ಖಾನೆಯನ್ನು ಮುಚ್ಚಲು ಹೊರಟಿದ್ದಾರೆ. ಕೂಡಲೇ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಹೆಚ್ ಎನ್ ಗೋಪಾಲಗೌಡ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸುಮಾರು 20 ವರ್ಷದಿಂದ ಕಾರ್ಮಿಕರಾಗಿ ವರ್ಗಾ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಮಾಲೀಕ ವರ್ಗವು ಏಕಾಏಕಿ ಹೊರಹಾಕಲು ಮುಂದಾಗಿದೆ. ನಷ್ಟದ ನೆಪದಲ್ಲಿ ಕೈಗಾರಿಕೆ ಮುಚ್ಚಲು ಹೊರಟಿದ್ದಾರೆ. ಸುಮಾರು 81 ಖಾಯಂ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಲು ಮುಂದಾಗಿದ್ದು ಇದು ಕಾರ್ಮಿಕ ವಿರೋಧಿಯಾಗಿದೆ. ಕೂಡಲೇ ಕಾರ್ಖಾನೆಯನ್ನು ಮುಚ್ಚುವ ಆದೇಶವನ್ನು ವಾಪಸು ಪಡೆದು ಕಾರ್ಮಿಕರ ಹಿತ ಕಾಪಾಡುವಂತೆ ಸಂಬಂಧಿಸಿದವರು ಮಾಲೀಕರನ್ನು ಒತ್ತಾಯಿಸಬೇಕಾಗಿದೆ” ಎಂದರು.
ಈ ಕೈಗಾರಿಕೆಯಲ್ಲಿ ಬುಲ್ಡೋಜರ್ಗೆ ಬೇಕಾಗುವ ಬಿಡಿ ಭಾಗಗಳನ್ನು ತಯಾರಿಸಿ ವಿದೇಶಕ್ಕೆ ಕಳಸಲಾಗುತ್ತದೆ. ಇದರಿಂದ ಕಂಪನಿ ಲಾಭದಾಯಕವಾಗಿಯೇ ನಡೆಯುತ್ತಿದೆ. ಕಂಪನಿಯನ್ನು ಮೂರು ಹೆಸರಿನಲ್ಲಿ ವಿಂಗಡಿಸಲಾಗಿದೆ ವರ್ಗಾ, 1 ವರ್ಗಾ, 2 ವೀರ್ಯ ಎಂದು ನಾಮಕಾರಣ ಮಾಡಿಕೊಂಡು ಖಾಯಂ ಕಾರ್ಮಿಕರನ್ನು ಕೆಲಸಕ್ಕೆ ರಾಜೀನಾಮೆ ಕೊಡಿಸಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಹುನ್ನಾರಗಳಾಗಿವೆ. ಈ ಮೂರು ಕೈಗಾರಿಕೆಗಳ ಮಾಲೀಕರು ಒಂದೇ ಕುಟುಂಬದವರು ಪಾಲುದಾರಿಕೆಯಲ್ಲಿ ನಡೆಯುತ್ತಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ: ಕೋಲಾರ | ವ್ಯಸನಮುಕ್ತ ಸಮಾಜಕ್ಕೆ ಎಲ್ಲರೂ ಕೈ ಜೋಡಿಸಿ: ಜಿಲ್ಲಾಧಿಕಾರಿ ಎಂ ಆರ್ ರವಿ
“ಈಗಾಗಲೇ ಕಂಪನಿಯನ್ನು ಮುಚ್ಚದಂತೆ ಕ್ರಮ ವಹಿಸಿ ಕಾರ್ಮಿಕರ ರಕ್ಷಣೆ ಮಾಡುವಂತೆ ಮನವಿ ಹೋರಾಟಗಳನ್ನು ನಡೆಸಲಾಗಿದೆ. ಕೂಡಲೇ ಜಿಲ್ಲಾಧಿಕಾರಿ ಮಾಲೀಕ ವರ್ಗವನ್ನು ಕರೆಸಿ ವರ್ಗ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಖಾಯಂ ಕಾರ್ಮಿಕರಿಗೆ ಕೈಗಾರಿಕೆಯಲ್ಲಿ ಕೆಲಸದಲ್ಲಿ ಮುಂದುವರೆಸುವಂತೆ ಕ್ರಮ ವಹಿಸಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಯಲಿದೆ” ಎಂದು ಎಚ್ಚರಿಕೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕಾರ್ಖಾನೆಯ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಪ್ರಭಾಕರ್, ಶ್ರೀಧರ್ ರಾವ್, ಅಂಜನಪ್ಪ, ಹರೀಶ್ ಇದ್ದರು.