ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಪ್ರಾಣಕ್ಕೆ ಕುತ್ತು ತರುವಂತಹ ಎನ್‍ಎಂಎಸ್ ರದ್ದುಗೊಳಿಸಿ, ಕಮಲಾಪುರದಲ್ಲಿ ಮೃತಪಟ್ಟ ನರೇಗಾ ಕಾರ್ಮಿಕ ಸಂತ್ರಸ್ತ ಕುಟುಂಬಕ್ಕೆ ಕೂಡಲೇ 2 ಲಕ್ಷ ರೂ. ಪರಿಹಾರ ನೀಡಿ, ದುಡಿಯುವ ಸ್ಥಳದಲ್ಲಿ ಜೀವರಕ್ಷಕ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ನೀಲಾ ಕೆ. ಆಗ್ರಹಿಸಿದರು.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಕಮಲಾಪುರ ತಾಲೂಕಿನ ವಿಕೆ ಸಲಗರ್ ಗ್ರಾಮದ ಚನ್ನಪ್ಪ ನಾಗಪ್ಪ ಎಂಬುವರು ಉದ್ಯೋಗ ಖಾತ್ರಿ ಕೆಲಸ ಮಾಡುವಾಗಲೇ ತಲೆಸುತ್ತು, ಎದೆನೋವು ಕಾಣಿಸಿಕೊಂಡು ಫೆ.21ರಂದು ಮಧ್ಯರಾತ್ರಿ ಮನೆಯಲ್ಲಿ ಮೃತಪಟ್ಟಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.
“ಚನ್ನಪ್ಪ ಉದ್ಯೋಗ ಖಾತ್ರಿ ಕೆಲಸವನ್ನು ಪೂರ್ಣವಾಗಿ ಮಾಡಿದ್ದಾನೆ. ಅಲ್ಲಿಯೇ ತಲೆ ಸುತ್ತು ಬಂದಿರುವ ಕುರಿತು ತನ್ನ ಸಹುದ್ಯೋಗಿಗಳ ಮುಂದೆ ಹೇಳಿಕೊಂಡಿದ್ದಾನೆ. ಉಳಿದೆಲ್ಲ ಕಾರ್ಮಿಕರು ಮನರೇಗಾದ ವರದಿ ಮಾಡಿದರೂ ಒಂದು ಗಂಟೆಗೆ ಕೆಲಸದ ಕಡೆಯ ಭಾವಚಿತ್ರ (ಎನ್‍ಎಂಎಂಎಸ್) ತೆಗೆದ ಮೇಲೆ ಮಧ್ಯಾಹ್ನ 2 ಗಂಟೆಗೆ ಮನೆಗೆ ಹೋಗಿದ್ದಾನೆ. ಕೆಲಸ ಮುಗಿದ ಮೇಲೂ ಭಾವಚಿತ್ರಕ್ಕಾಗಿ ಕಾಯ್ದು ಕುಳಿತಿದ್ದಾನೆ. ಕೊನೆಯ ಭಾವಚಿತ್ರ ತೆಗೆದುಕೊಳ್ಳದೇ ಇದ್ದರೆ ಕೆಲಸ ಮಾಡಿದ ಕೂಲಿ ಸಿಗುವುದಿಲ್ಲ ಕೆಲಸಕ್ಕೆ ಹೋಗುವಾಗಲೂ ತಲೆಸುತ್ತು ಎಂದು ನರಳಿದ್ದಾನೆ. ಅಂದು ಬಿಸಿಲು 40 ಡಿಗ್ರಿ ಸೆಲ್ಸಿಯಸ್ ಇದ್ದು, ಕೆಲಸದ ಸ್ಥಳದಲ್ಲಿ ಟೆಂಟ್ ಆಗಲಿ, ಕುಡಿಯುವ ನೀರಿನ ಟ್ಯಾಂಕ್ ಆಗಲಿ ಇಲ್ಲ. ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆಯೂ ಸಹ ಇರಲಿಲ್ಲ. ಹೀಗಾಗಿ ಆತನ ರಕ್ತದೊತ್ತಡ 195ರಷ್ಟು ಹೆಚ್ಚಳವಾಗಿ ಸಾವನಪ್ಪಿದ್ದಾನೆ” ಎಂದು ಆರೋಪಿಸಿದರು.
“ಮೃತ ಕೂಲಿಕಾರ ಚನ್ನಪ್ಪನವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಡಬೇಕು. ದುಡಿಯುವ ಸ್ಥಳದಲ್ಲಿ ಎಲ್ಲ ಜೀವರಕ್ಷಕ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ, ಮಾರ್ಚ್ 31ರವರೆಗೆ ಕೆಲಸ ಬಯಸುವ ಎಲ್ಲ ಕುಟುಂಬಗಳು ಈಗಾಗಲೇ ಇರುವ 100 ಮಾನವ ದಿನಗಳನ್ನು ಒದಗಿಸುವಂತೆ, ಬಾಕಿ ಇರುವ ಕೂಲಿಯ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ, ದಿನದ ಕೂಲಿಯನ್ನು 700ರೂ.ಗಳಿಗೆ ಹೆಚ್ಚಿಸಿ, ಮಾನವ ದಿನಗಳನ್ನೂ ಸಹ 200 ದಿನಗಳಿಗೆ ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರ ವಿರುದ್ಧ ʼರಾಷ್ಟ್ರೀಯ ಭದ್ರತಾ ಕಾಯ್ದೆʼ ಅಸ್ತ್ರ ಪ್ರಯೋಗ; ಪ್ರಜಾಪ್ರಭುತ್ವದ ಅಣಕ
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ಚಂದಮ್ಮ ಗೋಳಾ, ರಾಜ್ಯ ಸದಸ್ಯೆ ಪದ್ಮಿನಿ ಕಿರಣಗಿ ಉಪಸ್ಥಿತರಿದ್ದರು.