ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಮುಂಡೂರು ಗ್ರಾಮದ ಮುಲ್ಲಡ್ಕದಿಂದ ಪಾದೆಬೆಟ್ಟು, ಬೋಳ ಪದವು ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೊಂಡ ಗುಂಡಿಗಳ ನಡುವೆ ಎದ್ದುಬಿದ್ದು ಸಾಗಬೇಕಾಗಿದೆ. ಈ ರಸ್ತೆ ಅಭಿವೃದ್ಧಿಗೆ ಎರಡು ಬಾರಿ ಅನುದಾನ ಬಿಡುಗಡೆಯಾದರೂ ಜಾಗದ ತಕರಾರಿನಿಂದಾಗಿ ಅಭಿವೃದ್ಧಿ ಸಾಧ್ಯವಾಗಿಲ್ಲ.
ಮುಲ್ಲಡ್ಕ ಶಾಲೆಯ ವರೆಗೆ ಹಿಂದಿನಿಂದಲೇ ಡಾಮರು ಇತ್ತು. ಈ ರಸ್ತೆ ಹದಗೆಟ್ಟಾಗ ಕಾಮಗಾರಿ ನಡೆಸಲು ಮುಂದಾದರು. ಜನರ ಬೇಡಿಕೆಗೆ ಸ್ಪಂದಿಸಿದ ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್‌ರವರು ಎರಡು ಬಾರಿ 25 ಲಕ್ಷ ರೂ.ಗಳ ಅನುದಾನವನ್ನು ಮಂಜೂರು ಮಾಡಿಸಿದರು. ಆದರೆ, ಖಾಸಗಿ ಮಾಲಿಕರ ಜಟಾಜಟಿಯಿಂದ ರಸ್ತೆಗೆ ಡಾಮರು ಭಾಗ್ಯ ದೂರವಾಯಿತು. ಇದೀಗ ಖಾಸಗಿ ಮಾಲಿಕರು ಜಾಗದ ವಿಚಾರವಾಗಿ ಕೋರ್ಟು ಮೆಟ್ಟಿಲೇರಿದ್ದು ಗ್ರಾಮದ ಜನರಿಗೆ ರಸ್ತೆಯಿಲ್ಲದಂತಾಗಿದೆ.
ಮುಲ್ಲಡ್ಕದಿಂದ ಬೋಳ ಪದವು ಭಾಗವನ್ನು ಸಂಪರ್ಕಿಸುವ 6 ಕಿ.ಮೀ ಉದ್ದದ ರಸ್ತೆ ಇದಾಗಿದ್ದು. ಗ್ರಾಮಸ್ಥರು ಕಾಲು ನಡಿಗೆ, ಸ್ವಂತ ವಾಹನ, ಬಾಡಿಗೆ ವಾಹನಗಳಲ್ಲಿ ಸಾಗುತ್ತಾರೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ದೊಡ್ಡ ಗಾತ್ರದಲ್ಲಿ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ಸಂಚರಿಸಲು ಅಸಾಧ್ಯ ಎಂಬಂತಾಗಿದೆ. ರಸ್ತೆಯಲ್ಲಿಯೇ ದೊಡ್ಡಗಾತ್ರದ ಬಂಡೆಕಲ್ಲು ಎದ್ದು ಬಂದಿದ್ದು ದ್ವಿಚಕ್ರ ವಾಹನ ಸವಾರರು ಪ್ರಯಾಣಿಸಲು ಕಷ್ಟಕರವಾಗಿದೆ. ಈ ಭಾಗದ ರಸ್ತೆಯಲ್ಲಿ ಈಗ ಯಾವುದೇ ಬಾಡಿಗೆ ವಾಹನಗಳು ಬರಲು ಹಿಂದೇಟು ಹಾಕುವಂತಾಗಿದೆ.
ಮುಲ್ಲಡ್ಕ ಪಾದೆ ಬೆಟ್ಟುವಿನಲ್ಲಿ ಧೂಮಾವತಿ ದೈವಸ್ಥಾನ, ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಇದ್ದು ಇಲ್ಲಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ವಿದ್ಯಾರ್ಥಿಗಳು, ಅವರನ್ನು ಶಾಲೆಗೆ ಕರೆತರುವ ಆಟೋ ರಿಕ್ಷಾಗಳು, ಶಾಲಾ ವಾಹನಗಳು ಸರ್ಕಸ್ ಮಾಡಿಕೊಂಡು ಸಾಗುವುದು ಮಾಮೂಲಾಗಿದೆ. ಮಳೆಗಾಲದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ವಾಹನ ಚಾಲನೆ ಮಾಡುವುದು ಕಷ್ಟಕರವಾಗಿದೆ. ಹಲವು ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ ಎನ್ನುತ್ತಾರೆ ಶಾಲಾ ವಾಹನ ಚಾಲಕ ಶೇಖರ್. ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಮಾಡಬೇಕಾಗಿದೆ.
ಈ ಬಗ್ಗೆ ಸ್ಥಳಿಯರಾದ ರಾಜೇಶ್ ಪ್ರತಿಕ್ರಿಯಿಸಿದ್ದು, ರಸ್ತೆಯ ಸಮಸ್ಯೆಯಿಂದ ದಿನ ನಿತ್ಯದ ಗೋಳು ತಪ್ಪಿದ್ದಿಲ್ಲ, ಜನಪ್ರತಿನಿಧಿಗಳು ಹೆಸರಿಗೆ ಮಾತ್ರ ಯಾವುದೇ ಉಪಕಾರಕ್ಕಿಲ್ಲ, ಸಮಸ್ಯೆ ಎಂದು ಬಂದಾಗ ಯಾರ ಬಳಿ ಹೋಗುವುದು ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಇದಕ್ಕೊಂದು ಪರಿಹಾರ ನೀಡಬೇಕು ಎಂದು ಹೇಳಿದರು.
ಈ ಬಗ್ಗೆ ಮುಂಡೂರು ಗ್ರಾ.ಪಂ ಸದಸ್ಯರಾದ ಲೋಕೇಶ್ ಪೂಜಾರಿ ಪ್ರತಿಕ್ರಿಯೆಸಿದ್ದು, ದುರವಸ್ಥೆಯಲ್ಲಿರುವ ಮುಲ್ಲಡ್ಕ ರಸ್ತೆಯ ಅಭಿವೃದ್ಧಿಗಾಗಿ ಶಾಸಕರು ಎರಡು ಬಾರಿ ಅನುದಾನ ಮಂಜೂರುಗೊಳಿಸಿದರೂ ಖಾಸಗಿ ಜಮೀನು ಮಾಲಿಕರ ಸಮಸ್ಯೆಯಿಂದ ಕಾಮಗಾರಿಗೆ ತೊಡಕಾಗಿದೆ. ಜಾಗದ ವಿಚಾರ ನ್ಯಾಯಾಲಯದಲ್ಲಿದ್ದು ಅಭಿವೃದ್ಧಿಗೆ ತೊಡಕಾಗಿದೆ. ರಸ್ತೆ ಡಾಮರೀಕರಣಕ್ಕೆ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದರು.
ಒಟ್ಟಿನ ಕೇವಲ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಿಗೆ ಮಾತ್ರವಲ್ಲದೆ ಗ್ರಾಮೀಣ ಪ್ರದೇಶ ಮೂಲೆ ಮೂಲೆಗೂ ಅತ್ಯುತ್ತಮ ರಸ್ತೆ ಸಂಪರ್ಕ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದಷ್ಟು ಬೇಗ ಮುಂಡೂರು ಗ್ರಾಮದ ಜನರಿಗೆ ರಸ್ತೆ ವ್ಯವಸ್ಥೆ ಮಾಡುವ ಮೂಲಕ ಗ್ರಾಮೀಣ ನಾಗರಿಕ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿದೆ.
