ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ ಏಳು ಮಂದಿ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ 6 ರಿಂದ 8 ಲಕ್ಷ ರೂಪಾಯಿ ಲಂಚಕ್ಕೆ ಸಚಿವ ಚಲುವರಾಯಸ್ವಾಮಿ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಪತ್ರ ಬರೆಯಲಾಗಿದ್ದು, ಪತ್ರದಲ್ಲಿ ಮಂಡ್ಯ, ಮಳ್ಳವಳ್ಳಿ, ಕೆ ಆರ್ ಪೇಟೆ, ನಾಗಮಂಗಲ, ಮದ್ದೂರು, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಕೃಷಿ ಸಹಾಯಕ ಅಧಿಕಾರಿಗಳು ಸಹಿ ಹಾಕಿದ್ದಾರೆ. ಲಂಚಕ್ಕೆ ಕಡಿವಾಣ ಹಾಕದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಉಲ್ಲೇಖಿಸಿದ್ದಾರೆ.
ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ರಾಜ್ಯಪಾಲರು ಪತ್ರ ಬರೆದಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಜಗದೀಶ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದರು. ವರ್ಗಾವಣೆಗೆ ಸಚಿವರು ಒತ್ತಡ ಹೇರಿದ್ದಾರೆಂದು ಆರೋಪಿಸಿದ್ದ ಜಗದೀಶ್ ಡೆಟ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಅದೃಷ್ಟವಶಾತ್ ಅವರು ಸಾವಿನಿಂದ ಪಾರಾಗಿದ್ದರು.
ಈ ಪ್ರಕರಣ ಮಾಸುವ ಮುನ್ನವೇ ಚಲುವರಾಯಸ್ವಾಮಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ತಮ್ಮ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಚಲುವರಾಯಸ್ವಾಮಿ, “ಕೃಷಿ ಜಂಟಿ ನಿರ್ದೇಶಕರ ಜತೆ ಈಗಷ್ಟೇ ಮಾತನಾಡಿದ್ದೇನೆ. ಇದೊಂದು ಫೇಕ್ ಲೆಟರ್ ಎಂದು ಅವರು ಹೇಳಿದ್ದಾರೆ. ಕೆಲವರು ನಮ್ಮ ವಿರುದ್ಧ ಷಡ್ಯಂತ್ರ ಎಣೆಯಲು ಏನೇನೋ ಹುಡುಕುತ್ತಿದ್ದಾರೆ. ಜೆಡಿ ಅವರೂ ಯಾರ ಬಳಿಯೂ ಹಣ ಕೇಳಿಲ್ಲವೆಂದು ಹೇಳುತ್ತಿದ್ದಾರೆ. ಇಲಾಖೆಯಿಂದ ತನಿಖೆ ನಡೆಸುತ್ತೇವೆ” ಎಂದಿದ್ದಾರೆ.