ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಚನ್ನಸಂದ್ರಕ್ಕೆ ಹೋಗುವ ಕೆಮ್ಮಣ್ಣುನಾಲೆ ರಸ್ತೆ ಮಳೆಯಿಂದಾಗಿ ಗುಂಡಿ ಬಿದ್ದು ವಾಹನಗಳು ಇರಲಿ, ಜನರು ಕೂಡ ಓಡಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಹದಗೆಟ್ಟ ರಸ್ತೆಯ ಪರಿಣಾಮ ಬೆಳೆದಿರುವ ಕಬ್ಬನ್ನು ಕಟಾವು ಮಾಡಿ ಕಾರ್ಖಾನೆಗೆ ಸಾಗಾಣಿಕೆ ಮಾಡಲು ಆಗುತ್ತಿಲ್ಲ ಎಂದು ರೈತರು ಹೈರಾಣಾಗಿದ್ದಾರೆ.
“ರಸ್ತೆ ಹದಗೆಟ್ಟಿರುವುದರಿಂದ ಕಬ್ಬು ಜಮೀನಿನಲ್ಲೇ ಒಣಗುತ್ತಿದೆ. ರೈತರಿಗಾಗಿರುವ ನಷ್ಟವನ್ನು ಭರಿಸುವವರು ಯಾರು” ಎಂದು ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಚನ್ನಸಂದ್ರ ಲಕ್ಷ್ಮಣ್ ಪ್ರಶ್ನಿಸಿದ್ದಾರೆ.

ಮದ್ದೂರು ಪಟ್ಟಣದಲ್ಲಿ ಹದಗೆಟ್ಟ ಕೆಮ್ಮಣ್ಣುನಾಲೆ ರಸ್ತೆಯನ್ನು ಸರಿಪಡಿಸಲು ಒತ್ತಾಯಿಸಿ ನಡೆದ ಸಾರ್ವಜನಿಕ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮೂರು, ನಾಲ್ಕು ವರ್ಷಗಳ ಹಿಂದೆ ಇಲ್ಲಿ ಪಟ್ಟಣದ ಮಿತಿಯಲ್ಲಿ ಡಾಂಬರು ರಸ್ತೆ ಮಾಡಿದ್ದರು. ಕಳಪೆ ಕಾಮಗಾರಿಯ ಕಾರಣ ರಸ್ತೆ ಕಾಣೆಯಾಗಿದೆ. ಇಲ್ಲಿ ರಸ್ತೆ ಇತ್ತೇ ಎಂದು ಈಗ ಭೂತಗನ್ನಡಿ ಹಾಕಿ ಹುಡುಕಬೇಕು. ರಸ್ತೆ ಎಲ್ಲಿ ಹೋಯ್ತು ಹುಡುಕಿಕೊಂಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಜೀಪ್ ಕೊಟ್ಟಿರೋದು ನಾಲೆ ಮೇಲೆ ಓಡಾಡಿಕೊಂಡು ಕೆಲಸ ಮಾಡೋದಕ್ಕೇ ಅಥವಾ ಮನೆಗೆ ಓಡಾಡುವುದಕ್ಕಾ? ಇಂಜಿನಿಯರ್‌ಗಳು ನಾಲೆ ಮೇಲೆ ಬಂದು ಎಷ್ಟು ತಿಂಗಳಾಯ್ತು? ಈ ಮಳೆಗಾಲದಲ್ಲಿ ನಾಲೆ, ರಸ್ತೆ ಕತೆ ಏನಾಗಿದೆ ಎಂದು ತಿರುಗಿಯೂ ನೋಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಗೊರವನಹಳ್ಳಿ, ಚನ್ನಸಂದ್ರ, ಮದ್ದೂರು ಗ್ರಾಮಗಳ ನೂರಾರು ರೈತರ ಕೃಷಿ ಚಟುವಟಿಕೆಗಳು ಹದಗೆಟ್ಟ ರಸ್ತೆಯಿಂದಾಗಿ ಸ್ಥಗಿತಗೊಂಡಂತಾಗಿದೆ. ಈ ಕೂಡಲೇ ಕಾವೇರಿ ನೀರಾವರಿ ಇಲಾಖೆಯ ರಸ್ತೆ ಸರಿಪಡಿಸಬೇಕು ಇಲ್ಲದಿದ್ದರೆ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ರಾಜ್ಯದ 2 ಜಿಲ್ಲೆಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಈ ಬಗ್ಗೆ ಹೇಳಿಕೆ ಪಡೆಯಲು ನೀರಾವರಿ ಇಲಾಖೆಯ ಎಇಇ ನಾಗರಾಜುರವರಿಗೆ ಕರೆ ಮಾಡಿದಾಗ, ಎಇ ಚೇತನ್ ಸಂಪರ್ಕಿಸಲು ತಿಳಿಸಿದರು. ಎಇಗೆ ಕರೆ ಮಾಡಿದಾಗ ಕೆಮ್ಮಣ್ಣು ನಾಲೆ ರಸ್ತೆ ಎಲ್ಲಿ ಬರುತ್ತದೆ ಎಂದು ವಿಳಾಸವನ್ನು ನಮ್ಮನ್ನೇ ಕೇಳಿದರು. ನಂತರ ಮೇಲಾಧಿಕಾರಿ ಜೊತೆಗೆ ಮಾತನಾಡಿ, ಶೀಘ್ರ ರಸ್ತೆ ಸರಿಪಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರವಿ, ಸಂದೀಪ್, ರಾಘವೇಂದ್ರ, ಜಗದೀಶ್ ಇನ್ನೂ ಹಲವರಿದ್ದರು.

