ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಶನಿವಾರ ಮಂಡ್ಯ ಅಕ್ಷರಶಃ ಸ್ತಬ್ಧವಾಗಿದ್ದು, ರೈತರು ಹಾಗೂ ನಾನಾ ಸಂಘಟನೆಗಳ ಘೋಷಣೆಗಳು ನಗರವನ್ನು ಆವರಿಸಿದೆ.
ಮಂಡ್ಯದಲ್ಲಿ ಅಂಗಡಿಗಳು, ಹೋಟೆಲ್‌ಗಳನ್ನು ಮುಚ್ಚಿ ವರ್ತಕರು ಬಂದ್‌ಗೆ ಬೆಂಬಲ ನೀಡಿದ್ದಾರೆ. ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು ಮುಚ್ಚಿವೆ. ಸಾರಿಗೆ, ಖಾಸಗಿ ಬಸ್‌ಗಳು, ಆಟೋಗಳು ರಸ್ತೆಗಿಳಿದಿಲ್ಲ. ಹೀಗಾಗಿ, ರಸ್ತೆಗಳು ಬಿಕೋ ಎನ್ನುತ್ತಿದ್ದರೆ, ಸಾರ್ವಜನಿಕರ ಓಡಾಟ ಕಡಿಮೆಯಾಗಿತ್ತು. ಪ್ರತಿಭಟನಾಕಾರರು ಬೈಕ್ ಜಾಥಾ ನಡೆಸಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಹೆಚ್ಚಿರುವ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಸಾರ್ವಜನಿಕರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದರೆ, ಪ್ರತಿಭಟನಾಕಾರರು ಸಹ ಅತ್ತ ಸುಳಿಯಲಿಲ್ಲ, ನ್ಯಾಯಾಲಯ ಎಂದಿನಂತೆ ಕಾರ್ಯ ಕಲಾಪ ಆರಂಭಿಸಿತ್ತಾದರೂ ವಕೀಲರು ಕಾರ್ಯಕಲಾಪ ಬಹಿಷ್ಕರಿಸಿದರು. ಕಾವೇರಿ ಹೋರಾಟದ ಮಂಡ್ಯ ಬಂದ್ ಗೆ ಜನಸಾಮಾನ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಮಂಡ್ಯ ಬಂದ್ ಹಿನ್ನೆಲೆಯಲ್ಲಿ ನಗರದಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸಂಜಯ ವೃತ್ತ, ಮಹಾವೀರ ವೃತ್ತ, ಫ್ಯಾಕ್ಟರಿ ಸರ್ಕಲ್, ಕರ್ನಾಟಕ ಬಾರ್ ಸರ್ಕಲ್, ಹೊಳಲು ಸರ್ಕಲ್ ಮುಂತಾದೆಡೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.