ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ, ಜನರ ಬಳಿ ಹೋಗಿ ಕುಂದುಕೊರತೆಗಳನ್ನು ಕೇಳಲು ಈ ಶ್ರೀರಂಗಪಟ್ಟಣ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ಆಯೋಜಿಸಿದ್ದೇವೆ. ನಮ್ಮ ಆಹ್ವಾನಕ್ಕೆ ಓಗೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೀವೆಲ್ಲರೂ ಬಂದಿರುವುದು ಸಂತೋಷದ ವಿಚಾರ. ಪೊಲೀಸ್ ಠಾಣಾಮಟ್ಟದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಇಲ್ಲಿ ಹೇಳಿಕೊಂಡು ಬಗೆಹರಿಸಿಕೊಳ್ಳಬಹುದು ಎಂದು ಡಿವೈಎಸ್‌ಪಿ ಮುರಳಿ ಎಲ್ಲರನ್ನೂ ಸ್ವಾಗತಿಸುತ್ತ ಮಾಹಿತಿ ತಿಳಿಸಿದರು.
ರಾಂಪುರದ ವಿಜಯೇಂದ್ರ ಕುಮಾರ್ ಮಾತನಾಡಿ, “ನಮ್ಮ ಗ್ರಾಮ ರಾಂಪುರದಲ್ಲಿ 25 ರಿಂದ 30 ಸೋಲಾರ್ ಬ್ಯಾಟರಿಗಳ ಕಳ್ಳತನವಾಗಿದೆ. ಶ್ರೀರಂಗಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದೂರು ನೀಡಿದಾಗ ಒಳ್ಳೆಯ ಗುಣಮಟ್ಟದ ಸಿಸಿ ಟಿವಿ ವಿಡಿಯೋ ಸಮೇತ ಮಾಹಿತಿ ಕೊಟ್ಟಿದ್ದರೂ ಕೂಡಾ ಕಳ್ಳರನ್ನು ಹಿಡಿಯುವ ಕೆಲಸವಾಗಿಲ್ಲ. ದಿನ ರಾತ್ರಿ ಗ್ರಾಮಕ್ಕೆ ಪೊಲೀಸರ ಗಸ್ತಿನ ಏರ್ಪಾಟು ಮಾಡಬೇಕು” ಎಂದು ಒತ್ತಾಯಿಸಿದರು.
ಪ್ರಿಯ ರಮೇಶ್ ಮಾತನಾಡಿ, “ಮಂಡ್ಯ ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಹೆಣ್ಣುಭ್ರೂಣ ಹತ್ಯೆ ಹೆಚ್ಚಾಗಿದೆ. ಎಲ್ಲ ಕಡೆ ನೀವು ಮಾಹಿತಿ ಪಡೆಯಲು ಸಾಧ್ಯವಿಲ್ಲ. ಇದನ್ನು ತಡೆಗಟ್ಟಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು. ಅವರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರೆ ಈ ಸಮಸ್ಯೆಗಳನ್ನು ಸುಲಭದಲ್ಲಿ ತಡೆಗಟ್ಟಬಹುದು” ಎಂದು ಸಲಹೆ ನೀಡಿದರು.
“ಶ್ರೀರಂಗಪಟ್ಟಣ ಪ್ರವಾಸಿಗರ ತಾಣದಲ್ಲಿ ಟ್ರಾಫಿಕ್ ಪೊಲೀಸರ ಚಟುವಟಿಕೆ ಇಲ್ಲವೇ ಇಲ್ಲ ಎನ್ನುವಂತಿದೆ. ಸಂಚಾರ ವ್ಯವಸ್ಥೆ ಸರಿಯಾಗಬೇಕಿದೆ. ರಾತ್ರಿ ಹೊತ್ತು ಪೊಲೀಸ್ ಗಸ್ತು ಹೆಚ್ಚಿಸಬೇಕಿದೆ. ತಾಲೂಕಿನ ತುಂಬಾ ವಿಪರೀತ ಕಳ್ಳತನಗಳು ಹಾಗೂ ಅಪಘಾತಗಳು ಹೆಚ್ಚಾಗಿವೆ. ಇಸ್ಪೀಟ್ ಆಡುವವರ, ಮದ್ಯ, ಗಾಂಜಾ ಮುಂತಾದ ಅಮಲು ಪದಾರ್ಥಗಳನ್ನು ಮಾರುವವರ ಹಾಗೂ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಲೈಸೆನ್ಸ್, ಹೆಲ್ಮೆಟ್ ಹಾಗೂ ಇನ್ಷೂರೆನ್ಸ್ ಇಲ್ಲದ ವಾಹನ ಚಲಾಯಿಸುವವರ ಎಣಿಕೆ ಹೆಚ್ಚಾಗಿದೆ. ಕಾನೂನು ಉಲ್ಲಂಘಿಸುವವರ ಮೇಲೆ ದೂರು ದಾಖಲಾಗಿ, ಶಿಕ್ಷೆ ಕೊಡಿಸಬೇಕಿದೆ. ಇಲ್ಲದಿದ್ದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಹಾಳಾಗಲಿದೆ” ಎಂದು ಸಾರ್ವಜನಿಕರು ದೂರುಗಳ ಸುರುಮಳೆ ಸುರಿಸಿದರು.
ಜಿಲ್ಲಾ ಪೊಲೀಸ್ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, “ಪ್ರತಿ ಮೂರು ತಿಂಗಳಿಗೊಮ್ಮೆ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗುವುದು. ಪ್ರತಿ ಸಭೆಯಲ್ಲಿ ಹಿಂದಿನ ಸಭೆಯಲ್ಲಿ ಬಂದಂತಹ ದೂರುಗಳು, ಅವುಗಳಿಗೆ ಕೊಟ್ಟಂತ ಪರಿಹಾರದ ಮಾಹಿತಿ ತಿಳಿಸಲಾಗುವುದು. ನೀವುಗಳು ತಿಳಿಸಿದಂತೆ ಸಂಚಾರ ವ್ಯವಸ್ಥೆಯನ್ನು ಸುಗಮ ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ಕಳ್ಳತನ ತಪ್ಪಿಸಲು ಪೊಲೀಸ್ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗುವುದು. ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಓಡಾಡುವ ಆಟೋಗಳಿಗೆ ನಂಬರ್ ನೀಡಿ ಅನುಕೂಲ ಮಾಡಲಾಗುವುದು. ಶ್ರೀರಂಗಪಟ್ಟಣ ತಾಲೂಕಿನ ಸಂಚಾರ ವ್ಯವಸ್ಥೆ ಸುಗಮವಾಗಿಸಲು ಬೇಕಾದ ಕಡೆ ಅಂಡರ್ ಪಾಸ್, ಸಿಗ್ನಲ್ ಲೈಟುಗಳು, ರಸ್ತೆ ದುರಸ್ತಿ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸರಿಪಡಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಶಾಸಕ ರುದ್ರಪ್ಪ ಲಮಾಣಿ ಕಾಣೆಯೆಂದು ರೈಲು ಟಿಕೆಟ್ ಕಾಯ್ದಿರಿಸಿದ ಮತದಾರ
ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ತಾಲೂಕಿನ ಎಲ್ಲ ಠಾಣೆಯ ಪೊಲೀಸರು, ರಾಜ್ಯ ರೈತ ಸಂಘದ ಜಯರಾಮೇಗೌಡ, ಪಾಂಡು, ರವಿ, ವಕೀಲ ವೆಂಕಟೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಶಂಕರ್, ಚಿಕ್ಕತಿಮ್ಮೇಗೌಡ, ಡಿಎಸ್ಎಸ್ ಟಿಪ್ಪು ಚಂದ್ರು, ಗಂಜಾಂ ರವಿಚಂದ್ರ, ಪುಟ್ಟಸ್ವಾಮಿ, ನಂಜುಂಡ ಮೌರ್ಯ, ಪ್ರಿಯ ರಮೇಶ್, ಅಪ್ಸರ್ ಪಾಷ, ಪಾಂಡವಪುರದ ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.