ರಾಜು ಎಂಬಾತನ ಕೊಲೆ ಆರೋಪದಡಿ 2015ರಂದು ಮಂಡ್ಯದ ಗೂಬೆ ಹಳ್ಳದ ಏಳು ಮಂದಿ ಯುವ ಪೌರ ಕಾರ್ಮಿಕರ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಾಬೀತುಪಡಿಸಲು ವಿಫಲವಾಗಿರುವುದಾಗಿ ತೀರ್ಪು ನೀಡಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಬ್ರಹ್ಮಣ್ಯ ಅವರು ಆರೋಪಿಗಳನ್ನು ಬಿಡುಗಡೆ ಮಾಡಿದರು.
2025ರ ಜುಲೈ 23ರಂದು ಪ್ರಕರಣದ ವಿಚಾರಣೆ ಕೈಗೊಂಡ ವೇಳೆ ಕೊಲೆ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ವಿಫಲವಾದ ಕಾರಣ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.
ಘಟನೆ ಹಿನ್ನೆಲೆ
ಮಂಡ್ಯದ ಗೂಬೆ ಹಳ್ಳದಲ್ಲಿ ನಡೆದ ರಾಜು ಎಂಬಾತನ ಕೊಲೆ ಆರೋಪದಡಿ 2015ರಂದು ಏಳು ಮಂದಿ ಯುವ ಪೌರ ಕಾರ್ಮಿಕರ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಒಂದನೇ ಆರೋಪಿ ರಘು ಎಂಬಾತ ಅಪ್ರಾಪ್ತನಾಗಿದ್ದ ಕಾರಣ ಆತನ ವಿರುದ್ಧದ ಪ್ರಕರಣ ಬಾಲ ನ್ಯಾಯಮಂಡಳಿಗೆ ವರ್ಗಾವಣೆಯಾಗಿತ್ತು. ಉಳಿದವರ ಪ್ರಕರಣ ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 10 ವರ್ಷಗಳಿಂದ ನಡೆಯಿತು.
2015ರ ಆಗಸ್ಟ್ 30ರ ರಾತ್ರಿ ಗಾಯಗೊಂಡಿದ್ದ ರಾಜು ಎಂಬಾತನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಯಿಂದ ಬೆಂಗಳೂರಿನ ನಿಮ್ಹಾನ್ಸ್ಗೆ ಕಳುಹಿಸಲಾಗಿತ್ತು. ಮರುದಿನ ಬೆಳಿಗ್ಗೆ 9ಕ್ಕೆ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ರಾಜು ಪೊಲೀಸರಿಗೆ ಹೇಳಿಕೆ ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಾಯಿತು. 20 ದಿನಗಳ ನಂತರ ರಾಜುವಿನ ಸಾವಿನ ಹೇಳಿಕೆ ದಾಖಲಾಯಿತು. ಆದರೆ, ರಾಜು ನಿಮ್ಹಾನ್ಸ್, ಅಪೋಲೋ ಮತ್ತು ಇಎಸ್ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಾಗ ರಘುವಿನ ಹೆಸರನ್ನು ಬಿಟ್ಟು ಇತರ ಆರೋಪಿಗಳ ಹೆಸರನ್ನು ಉಲ್ಲೇಖಿಸಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಕನ್ನಡ ತರ್ಜುಮೆ ತಂತ್ರಾಂಶ ʼಕನ್ನಡ ಕಸ್ತೂರಿʼ ಶೀಘ್ರದಲ್ಲೇ ಬಿಡುಗಡೆ
ಪೊಲೀಸರು ರಾಜು ಆಸ್ಪತ್ರೆಯಲ್ಲಿರಲಿಲ್ಲವೆಂದು ಹೇಳಿಕೆ ದಾಖಲಿಸಿದ ದಿನದಂದು ವೈದ್ಯರು, ʼರಾಜು ಕುಡಿದ ನಶೆಯಲ್ಲಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲʼವೆಂದು ತಿಳಿಸಿದರು. ಆರೋಪಿಗಳ ವಕೀಲರ ಪ್ರಶ್ನೆಯಲ್ಲಿ ವೈದ್ಯರು, ʼರಾಜು ಸಾವಿನ ಸ್ಥಿತಿಯಲ್ಲಿ ಇರಲಿಲ್ಲʼವೆಂಬುದನ್ನು ಒಪ್ಪಿಕೊಂಡರು. ಪ್ರಾಸಿಕ್ಯೂಷನ್ ರಾಜುವಿನ ಹೇಳಿಕೆಯ ಸಮಯ ಮತ್ತು ಸ್ಥಳವನ್ನು ಸ್ಪಷ್ಟವಾಗಿ ವಿವರಿಸಲು ವಿಫಲವಾಯಿತು.
ಹೀಗಾಗಿ, 2025ರ ಜುಲೈ 23ರಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಬ್ರಹ್ಮಣ್ಯ ಅವರು, ʼಕೊಲೆ ಪ್ರಕರಣ ಸಾಬೀತುಪಡಿಸಲು ವಿಫಲವಾಗಿದೆʼ ಎಂದು ತೀರ್ಪು ನೀಡಿ ಆರೋಪಿಗಳನ್ನು ಬಿಡುಗಡೆ ಮಾಡಿದರು. ಆರೋಪಿಗಳ ಪರವಾಗಿ ವಕೀಲ ಬಿ ಟಿ ವಿಶ್ವನಾಥ್ ವಾದ ಮಂಡಿಸಿದರು.