ನಿವೇಶನರಹಿತರ ಭೂಮಿಗೆ ವಿನಾ ಕಾರಣ ವ್ಯಾಜ್ಯ ಮಾಡಿರುವ ಹಾಗೂ ಭೂಸ್ವಾಧೀನವಾಗಿರುವ ಭೂಮಿ ಹಸ್ತಾಂತರಿಸದೇ ಮೋಸ ಮಾಡಿದ್ದಾರೆಂದು ಆರೋಪಿಸಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ ಕೆ ಸತೀಶ ಹಾಗೂ ನಿವೇಶನರಹಿತರು ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಮಂಡ್ಯ ತಾಲೂಕಿನ ಬೂದನೂರು ನಿವೇಶನರಹಿತರಿಗೆ ಗ್ರಾಮದ 142/9A ನ 20 ಗುಂಟೆ ಭೂಮಿಯಲ್ಲಿ ನಿವೇಶನ ವಿತರಿಸಲು ಗ್ರಾಮಸಭೆ ನಡೆಸಿ, ಫಲಾನುಭವಿಗಳ ಆಯ್ಕೆಯಾಗಿ ತಾವು ಹಕ್ಕುಪತ್ರಕ್ಕೆ ಶಿಫಾರಸು ಮಾಡಿದ್ದೀರಿ. ಆದರೂ ಗ್ರಾಮದ ರಾಮು ಬಿನ್ ಕೆಂಪೇಗೌಡ ಎಂಬುವವರು ಹೈಕೋರ್ಟ್’ನಲ್ಲಿ ದಾವೆ ಹೂಡಿ ಅಡ್ಡಿಪಡಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಮು ಎಂಬಾತನಿಗೆ ಕಂದಾಯ ಅಧಿಕಾರಿಗಳು ಕುಮ್ಮಕ್ಕು ನೀಡಿ ದಾವೆ ಹೂಡಿರುವ ಬಗ್ಗೆ ಅನುಮಾನವಿದೆ. ಅಲ್ಲದೆ ಇದೇ ವ್ಯಕ್ತಿಯ ಹಾಗೂ ಇತರರ ಸರ್ವೆ ನಂ.144/1ರಲ್ಲಿ 19 ಗುಂಟೆಯಲ್ಲಿ 1 ಗುಂಟೆ ಖರಾಬು ಕಳೆದು ಉಳಿಕೆ 18 ಗುಂಟೆ ಭೂಸ್ವಾಧೀನ (ಜುಲೈ 24, 1976 ಗೆಜೆಟ್ ನೊಟೀಫಿಕೇಷನ್ ಅನುಕ್ರಮ ಸಂಖ್ಯೆ 7) ವಾಗಿದೆ. ಈ ಭೂಮಿಯು ಜಿಲ್ಲಾಧಿಕಾರಿ ನ್ಯಾಯಾಲಯದ ಪ್ರಕರಣ ಸಂಖ್ಯೆ 134/2015 ವಿಚಾರಣೆ ನಡೆದು 2020ರ ನವೆಂಬರ್ 24ರಂದು ಇತ್ಯರ್ಥವಾಗಿದ್ದು, 2021ರ ಏಪ್ರಿಲ್ 18ರಂದು ನಿವೇಶನರಹಿತರ ಹೆಸರಿಗೆ ಆರ್‌ಟಿಸಿ ಇಂಡೀಕರಣವಾಗಿದೆ” ಎಂದು ತಿಳಿಸಿದರು.
“ಬಳಿಕ ಕಂದಾಯ ಅಧಿಕಾರಿಗಳು 19 ಗುಂಟೆ ಭೂಮಿಯನ್ನು 23.8 ಗುಂಟೆ ಎಂದು ಅಕ್ರಮ ಎಸಗಿ ಆಕಾರ ಬಂದ್ ತಾಳೆಯಾಗದಿದ್ದರೂ 4.08 ಗುಂಟೆ ಭೂಮಿಯನ್ನು 2022ರ ಫೆಬ್ರವರಿ 17ರಂದು ರಾಮು ಎಂಬಾತನ ಹೆಸರಿಗೆ ಅಕ್ರಮ ಖಾತೆ ಮಾಡಿದ್ದಾರೆ. ಅಲ್ಲದೆ ಭೂಸ್ವಾಧೀನದ ಅನುಕ್ರಮ ಸಂಖ್ಯೆ 17ರಲ್ಲಿನ 144/3ನ್ನು ಜಿಲ್ಲಾಧಿಕಾರಿ ನ್ಯಾಯಾಲಯದ ಪ್ರಕರಣದಿಂದ ದುರುದ್ದೇಶದಿಂದ ಕೈ ಬಿಟ್ಟಿದ್ದಾರೆ” ಎಂದು ಆರೋಪಿಸಿದರು.
“ಲೋಕಾಯುಕ್ತದಲ್ಲಿ 144/3ರ ಸಂಬಂಧ ದೂರು ದಾಖಲಾಗಿದ್ದು, ಇದರ ಕುರಿತಂತೆ ತಹಶೀಲ್ದಾರ್ ಅವರಿಗೆ ಕ್ರಮ ವಹಿಸಲು ಸೂಚಿಸಿದ್ದರೂ ಆ ಬಗ್ಗೆ ಯಾವುದೇ ಪ್ರಯತ್ನ ಮಾಡದೇ ನಿವೇಶನರಹಿತರಿಗೆ ಅನ್ಯಾಯ ಎಸಗಲು ಮುಂದಾಗಿದ್ದಾರೆ. ನಿವೇಶನರಹಿತರ ಭೂಮಿ ಖಾಲಿಯಿದ್ದರೂ ತಹಶೀಲ್ದಾರ್ ಹಾಗೂ ಅಧೀನ ಸಿಬ್ಬಂದಿ ಮತ್ತು ಭೂಮಾಪಕರು, ರಾಮು ಎಂಬಾತನು ಅಕ್ರಮ ಪ್ರವೇಶದಲ್ಲಿರುವ ಭೂಮಿ ಬಗ್ಗೆ ಮಾಹಿತಿ ನೀಡದೆ ಖಾಲಿ ಇರುವ ಜಾಗದ ಮಾಹಿತಿಯನ್ನು ಮರೆ ಮಾಚಿದ್ದಾರೆ. ಹಾಗಾಗಿ ನಿವೇಶನರಹಿತರಿಗೆ ತೀವ್ರ ಅನ್ಯಾಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಬಡವರಿಗೆ ಹಕ್ಕುಪತ್ರ ನೀಡಲು ಹಿಂದೇಟು; ಏಕಾಂಗಿ ಪ್ರತಿಭಟನೆಗಿಳಿದ ಗ್ರಾ.ಪಂ. ಉಪಾಧ್ಯಕ್ಷ
“ನಿವೇಶನರಹಿತರಿಗೆ ಭೂಸ್ವಾಧೀನವಾಗಿರುವ ಭೂಮಿಗಳಲ್ಲಿನ 9 ವ್ಯಾಜ್ಯಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು. ನಿವೇಶನರಹಿತರಿಗೆ 30+40 ಆಳತೆಯ ನಿವೇಶನ ನೀಡಲು ಕ್ರಮ ವಹಿಸಿ, ಹೋರಾಟಗಾರರಿಗೆ ಮೊದಲ ಆದ್ಯತೆ ನೀಡಿ, ಹಕ್ಕುಪತ್ರ ವಿತರಿಸಬೇಕು. ಬೂದನೂರು ಸರ್ಕಾರಿ ಭೂಮಿ ಕುರಿತು ಅಕ್ರಮ ಎಸಗಿರುವ ಕಂದಾಯ ಅಧಿಕಾರಿಗಳ ವಿರುದ್ಧ ವಿಚಾರಣೆ ಮಾಡಿ ಕಾನೂನು ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.
“ತಮ್ಮ ಹಕ್ಕೊತ್ತಾಯಗಳು ಈಡೇರುವವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಕಾರ್ಯಕರ್ತರು ಇದ್ದರು.