ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಪುಟ್ಟ ಬಾಲಕಿಗೆ ಮನೆ ಪಾಠ ಹೇಳಿಕೊಡುವ ಶಿಕ್ಷಕನೇ ಅತ್ಯಾಚಾರವೆಸಗಿ ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಒಂದನೇ ತ್ವರಿತಗತಿಯ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳ ಇಟ್ಟಿಯವರು ಸಂತ್ರಸ್ತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಮತ್ತು ಅಪರಾಧಿ, ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ ಘೋಷಣೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ 2022ರ ಅಕ್ಟೋಬರ್ 10 ರಂದು 11 ವರ್ಷದ ಪುಟ್ಟ ಬಾಲಕಿಗೆ ಮನೆ ಪಾಠ ಹೇಳಿಕೊಡುತ್ತಿದ್ದ ಈತ ಆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಭೀಕರವಾಗಿ ಹತ್ಯೆ ಮಾಡಿದ್ದ. ಬಾಲಕಿ ಮೇಲೆ ನಡೆದ
ದೌರ್ಜನ್ಯಕ್ಕೆ ನಾಡಿನಾದ್ಯಂತ ವ್ಯಾಪಕ ಖಂಡನೆಯಾಗಿದ್ದು, ಆರೋಪಿಗೆ ಶಿಕ್ಷೆಯಾಗುವಂತೆ ಆಗ್ರಹ ವ್ಯಕ್ತವಾಗಿತ್ತು. ಮಂಡ್ಯ ಜಿಲ್ಲಾದ್ಯಂತ ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗಳ ಮೂಲಕ ನ್ಯಾಯಕ್ಕಾಗಿ ನಿರಂತರ ಹೋರಾಟ ಮಾಡಿದ್ದವು.
ಘನ ನ್ಯಾಯಾಲಯದಲ್ಲಿ ನಿರಂತರ ಎರಡು ವರ್ಷಗಳ ವಾದ ನಡೆದು 2024ರ ಅಕ್ಟೋಬರ್ 19ರಂದು ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಸರ್ಕಾರಿ ವಿಶೇಷ ಅಭಿಯೋಜಕರಾಗಿ ವೆಂಕಟರಮಣ ಸೀತಾರಾಮ ಭಟ್ ಅವರು ನೇಮಕಗೊಂಡು ಯಶಸ್ವಿಯಾಗಿ ವಾದ ಮಂಡಿಸಿ ಅಪರಾಧಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ಯಾಚಾರ ವಿರೋಧಿ ಆಂದೋಲನದ ತಂಡ ನೊಂದ ಕುಟುಂಬದ ಜತೆಗೆ ನಿಂತು, ಘನ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ನಿರಂತರವಾಗಿ ಹೋರಾಟ, ಮತ್ತು ಪ್ರಕರಣದ ಅನುಸರಣೆ(ಫಾಲೋಅಪ್) ಮಾಡಿ, ತಾರ್ಕಿಕ ಅಂತ್ಯ ಕಾಣುವಲ್ಲಿ ಯಶಸ್ವಿಯಾಗಿದೆ.
ಇದೇ ಸಂದರ್ಭದಲ್ಲಿ ಅತ್ಯಾಚಾರ ವಿರೋಧಿ ಆಂದೋಲನದ ತಂಡದಿಂದ ವಿ ಎಸ್ ಭಟ್ ಅವರಿಗೆ ಹಾರ ಹಾಕಿ ಸನ್ಮಾನಿಸಿ ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, “ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಕೊಲೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಅತ್ಯಾಚಾರಿಗಳು ಬಿಡುಗಡೆಯಾದಾಗ ಹಾರ, ತುರಾಯಿಯೊಂದಿಗೆ ಸ್ವಾಗತಿಸುತ್ತಿರುವ ವಿಕೃತಿ ಮೆರೆವ ಸಂದರ್ಭದಲ್ಲಿ ಮಂಡ್ಯ ನ್ಯಾಯಾಲಯದ ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅಭಿನಂದಿಸುತ್ತೇವೆ” ಎಂದು ಹರ್ಷ ವ್ಯಕ್ತಪಡಿಸಿದರು.
“ಸಂತ್ರಸ್ತ ಕುಟುಂಬಕ್ಕೆ ಒಂದು ರೀತಿ ಸಮಾಧಾನ ದೊರಕಿದೆ. ಆದರೆ ಅತ್ಯಾಚಾರಗಳು ನಡೆಯದಂತೆ ತಡೆಗಟ್ಟಲು ಕಠಿಣ ಕಾನೂನು ರೂಪಿಸಬೇಕು. ಅತ್ಯಾಚಾರಿಗಳಿಗೆ ಭಯ ಬರುವಂತಹ ಕಾನೂನುಗಳು ಜಾರಿಯಾಗಬೇಕು. ಆಗ ಮಾತ್ರ ನಿಜವಾದ ನ್ಯಾಯದಾನ ಪಡೆಯಲು ಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಶಿಕ್ಷಣದ ಉದ್ದೇಶ ಸಮಾಜದ ಔನ್ನತ್ಯಕ್ಕೆ ದಾರಿದೀಪವಾಗಬೇಕು: ಪ್ರೊ. ರಾಮ್ ರಾಮಸ್ವಾಮಿ
“ಪ್ರಸ್ತುತ ಸನ್ನಿವೇಶದಲ್ಲಿ ಮುನಿರತ್ನ ಪ್ರಕರಣ, ಪ್ರಜ್ವಲ್ ರೇವಣ್ಣ ಪ್ರಕರಣ, ಸೌಜನ್ಯ ಪ್ರಕರಣಗಳು ನಮಗೆ ಘಾಸಿಯುಂಟು ಮಾಡುತ್ತಿರುವ ಸಂದರ್ಭದಲ್ಲಿ ಈ ತೀರ್ಪು ಬಂದಿರುವುದು ಸ್ವಾಗತಾರ್ಹ. ನ್ಯಾಯಧೀಶರಿಗೆ ಮತ್ತು ವಾದ ಮಂಡಿಸಿ ಅಪರಾಧಿಗೆ ಶಿಕ್ಷೆ ಕೊಡಿಸಲು ಯಶಸ್ವಿಯಾದ ವಿ ಎಸ್ ಭಟ್ ಅವರಿಗೆ ಅಭಿಂದನೆಗಳನ್ನು ಸಲ್ಲಿಸುತ್ತೇವೆ” ಎಂದರು.
ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಅಖಿಲ ಭಾರತ ವಕೀಲರ ಸಂಘದ ಬಿ ಟಿ ವಿಶ್ವನಾಥ್, ಮಹಿಳಾ ಮುನ್ನಡೆಯ ಶಿಲ್ಪ, ಜ್ಯೋತಿ, ಸೌಮ್ಯ, ಅಂಜಲಿ, ಪತ್ರಕರ್ತ ಮೋಹನ್ ಮೈಸೂರು, ಅಸಾದುಲ್ಲಾ ಜಮಾತ್ ಸ್ಥಾನಿಕ ಉಪಾಧ್ಯಕ್ಷ ಹಾಗೂ ಅಬ್ದುಲ್ ವಾಹಿದ್ ಇದ್ದರು.
