ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಮೈಸೂರು, ಬೆಂಗಳೂರು, ಮಂಡ್ಯ, ರಾಮನಗರ ಜಿಲ್ಲೆಗಳ ರೈತರಲ್ಲಿ ಆತಂಕ ಉಂಟುಮಾಡಿದೆ.
ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 74 ಅಡಿಗೆ ಕುಸಿದರೆ ಕುಡಿಯುವ ಉದ್ದೇಶಕ್ಕೆ ಮಾತ್ರ ನೀರು ಬಳಸಿಕೊಳ್ಳಲಾಗುವುದು ಎಂದು ಅಣೆಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ವೇಳೆಗೆ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗದಿದ್ದರೆ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ. ಗುರುವಾರ ಅಣೆಕಟ್ಟೆಯ ನೀರಿನ ಮಟ್ಟ 85.84 ಅಡಿ ಇತ್ತು. ಜಲಾಶಯಕ್ಕೆ 629 ಕ್ಯೂಸೆಕ್ ನೀರಿನ ಒಳಹರಿವು ಇದೆ. ಆದರೆ, ವಿಶ್ವೇಶ್ವರಯ್ಯ ನಾಲೆಗೆ 1,252 ಕ್ಯೂಸೆಕ್ ನೀರು ಸೇರಿದಂತೆ 2,336 ಕ್ಯೂಸೆಕ್ ಹೊರಹರಿವು ಇತ್ತು.
“ನೀರಿನ ಮಟ್ಟ 74 ಅಡಿಗೆ ಕುಸಿದ ನಂತರ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರನ್ನು ಬಳಸಲಾಗುತ್ತದೆ” ಎಂದು ಕೆಆರ್‌ಎಸ್ ಅಣೆಕಟ್ಟೆಯ ಅಧೀಕ್ಷಕ ಎಂಜಿನಿಯರ್ ಆನಂದ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ಮಾರ್ಚ್ 1 ಮತ್ತು ಮೇ 17 ರ ನಡುವೆ, ಕೊಡಗು ಸೇರಿದಂತೆ ಕಾವೇರಿಯ ಮುಖ್ಯ ಜಲಾನಯನ ಪ್ರದೇಶದಲ್ಲಿ 45% ನಷ್ಟು ಮಳೆಯಾಗಿದೆ. ಕಾವೇರಿಯ ಮುಖ್ಯ ಉಪನದಿ ಹೇಮಾವತಿ ಹುಟ್ಟುವ ಜಿಲ್ಲೆ ಚಿಕ್ಕಮಗಳೂರಿನಲ್ಲಿ 20% ಮಳೆ ಕೊರತೆ ಉಂಟಾಗಿದೆ.