ಅತಿಥಿ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘದಿಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಅಂಚೆ ಕಚೇರಿಯಲ್ಲಿ ಅಂಚೆ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರಗಳನ್ನು ಕಳುಹಿಸುತ್ತ ಪತ್ರಚಳವಳಿ ನಡೆಸಿದರು. ಇದೇ ವೇಳೆ ತಾಲೂಕು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಬಿ ಎಸ್ ಮಹೇಶ್ ಕುಮಾರ್ ಮಾತನಾಡಿ, “ಈ ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳಾಗುತ್ತಿದೆ. ಆದರೆ ಈವರೆಗೂ ಗೌರವ ಧನ ಬಿಡುಗಡೆ ಮಾಡಿಲ್ಲ. ಇದರಿಂದ ಅತಿಥಿ ಶಿಕ್ಷಕರ ಜೀವನ ತುಂಬಾ ಕಷ್ಟಕರವಾಗಿದೆ. ಗೌರವಧನ ಹೆಚ್ಚಿಸಲು ಆರ್ಥಿಕ ಇಲಾಖೆಗೆ ಕಡತವನ್ನು ಕಳುಹಿಸಲಾಗಿದೆ. ಆದರೆ ಈವರೆಗೂ ಗೌರವಧನ ಹೆಚ್ಚು ಮಾಡಲಿಲ್ಲ, ನೀಡಬೇಕಾಗಿದ್ದ ಹಣವನ್ನೂ ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಇಂದಿನ ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಸರ್ಕಾರ ನಡೆಸುತ್ತಿದ್ದರೂ ಸಹ ನುಡಿದಂತೆ ನಡೆದಿಲ್ಲ. ಈ ಎಲ್ಲ ಸಾಧಕ ಬಾಧಕಗಳನ್ನು ಗಮನಿಸಿ ರಾಜ್ಯದ ಸಮಸ್ತ ಅತಿಥಿ ಶಿಕ್ಷಕರಿಗೆ ನ್ಯಾಯ ದೊರಕಿಸಿ ಕೊಡಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಹಕ್ಕೊತ್ತಾಯಗಳು ಹಾಗೂ ಬೇಡಿಕೆಗಳು
ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸೇವಾ ಭದ್ರತೆ ನೀಡಬೇಕು. ಕನಿಷ್ಠ ವೇತನ ₹25,000 ನೀಡಬೇಕು. ವರ್ಷಕ್ಕೆ ಶೇ.5ರಷ್ಟು ಕೃಪಾಂಕ ನೀಡಿ ಸೇವಾ ದೃಢೀಕರಣ ಪತ್ರ ನೀಡಬೇಕು ಎಂದು ಆಗ್ರೆಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಚಿಟ್ ಫಂಡ್ ಕಂಪೆನಿ ವಂಚನೆ; ಸಂತ್ರಸ್ತ ಠೇವಣಿದಾರರ ಹೋರಾಟಕ್ಕೆ ಡಿಎಸ್ಎಸ್ ಬೆಂಬಲ
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಚುಂಚಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ಕೆಂಪರಾಜು, ಸಹಕಾರ್ಯದರ್ಶಿಗಳಾದ ವಿಷಕಂಠ ಮೂರ್ತಿ, ಖಜಾಂಚಿ ಪುಟ್ಟರಾಜು, ನಂಜುಂಡಸ್ವಾಮಿ, ಹನುಮಯ್ಯ, ಮಹದೇವ ಸ್ವಾಮಿ, ಮಹದೇವು ಮಹಿಳಾ ಶಿಕ್ಷಕಿಯರಾದ ಸುಮಿತ್ರ, ಸುಮ, ನಳಿನಿ ಸೇರಿದಂತೆ ಇತರರು ಇದ್ದರು.