ಗ್ರಾಮದಲ್ಲಿರುವ ಸರಕಾರಿ ಜಾಗವನ್ನು ನಿಯಮಬಾಹಿರವಾಗಿ ಖಾತೆ ಮಾಡಿಕೊಟ್ಟಿರುವುದನ್ನು ರದ್ದುಗೊಳಿಸಲು ಒತ್ತಾಯಿಸಿ ಮಂಡ್ಯ ಜಿಲ್ಲೆಯ ಮದ್ದೂರಿನ ನಾಗರಿಕರು ತಹಶೀಲ್ದಾರಿಗೆ ಹಾಗೂ ಪುರಸಭೆಯ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಮದ್ದೂರು ಪಟ್ಟಣದ ಹಳೆಯ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಸರ್ವೆ ನಂಬರ್ 864/5 ಮತ್ತು 6ನೇ ಜಮೀನಿನ ನಡುವೆ 5 ಗುಂಟೆ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿ ಎಮ್.ಟಿ.ಮಂಜುನಾಥ್ ಎಂಬುವರಿಗೆ, ಮದ್ದೂರು ಪುರಸಭೆ ಮುಖ್ಯಾಧಿಕಾರಿಗಳು ನಿಯಮ ಬಾಹಿರವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿದರು.
ಗ್ರಾಮ ಠಾಣಾ ಜಾಗವನ್ನು ವ್ಯಕ್ತಿಯೊಬ್ಬರಿಗೆ ಮಂಜೂರು ಮಾಡಿ, ಇ-ಖಾತೆ ಮಾಡುವ ಮುನ್ನ ನಿಯಮಗಳನ್ನು ಪಾಲಿಸಿಲ್ಲ. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಖಾತೆ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಆಡಳಿತಾಧಿಕಾರಿ ಹಾಗು ಉಪವಿಭಾಗಾಧಿಕಾರಿಗಳ ಮುಂದೆ ಕಡತ ಮಂಡಿಸಿಲ್ಲ, ಸರ್ಕಾರದ ನಿಯಾಮಾವಳಿಗಳನ್ನು ಪಾಲಿಸದೆ ಇ-ಖಾತೆ ಮಾಡಬೇಕಾದ ಕ್ರಮವನ್ನು ಗಾಳಿಗೆ ತೂರಿ ಗ್ರಾಮಠಾಣಾ ಜಾಗದ ಮೂಲ ದಾಖಲಾತಿ ಮತ್ತು ಇದರ ಸ್ಥಳ ಐತಿಹ್ಯ ಗಮನಿಸದೆ ಅಕ್ರಮವಾಗಿ ಮಂಜೂರು ಮಾಡಿರುತ್ತಾರೆ ಎಂದು ನಾಗರಿಕರು ದೂರಿದರು.

ಅಲಿನೇಷನ್ ನಕ್ಷೆಗೆ ಯೋಜನಾ ಪ್ರಾಧಿಕಾರದ ಒಪ್ಪಿಗೆ ಇಲ್ಲ. ಜಿಲ್ಲಾಧಿಕಾರಿಗಳಿಂದ ಅಲಿನೇಷನ್ ಆಗಿ ಬಂದಿಲ್ಲ. ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಕಿಮ್ಮತ್ತು ಪಡೆಯದೆ ಖಾತೆ ಮಾಡಿರುತ್ತಾರೆ. ಆದ್ದರಿಂದ ಈ ಪ್ರಕರಣದಲ್ಲಿ ಭಾಗಿಯಾಗಿರುವ ಪುರಸಭಾ ಅಧಿಕಾರಿಗಳು, ಸಿಬ್ಬಂದಿಯನ್ನು ಈ ಕೂಡಲೆ ಅಮಾನರು ಮಾಡಬೇಕು. ಅಕ್ರಮವಾಗಿ, ನಿಯಮಬಾಹಿರವಾಗಿ ಖಾತೆ ಮಾಡಿರುವ ಈ ಆಸ್ತಿಯ ಖಾತೆಯನ್ನು ರದ್ದುಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸದರಿ ಆಸ್ತಿಯನ್ನು ಪುರಸಭಾ ವಶಕ್ಕೆ ಪಡೆದು ಈ ಜಾಗದ ಪಕ್ಕದಲ್ಲೆ ಪುರಾತನ ಹೊಂಬಾಳಮ್ಮನ ದೇವಾಲಯದ ಜಾಗವಿದ್ದು, ಮುಂದಿನ ದಿನಗಳಲ್ಲಿ ಮದ್ದೂರು ತಾಲ್ಲೂಕಿನ ಗ್ರಾಮಸ್ಥರು ಗುಡಿಯ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿದ್ದು, ಗುಡಿಗೆ ಬರುವ ನಾಗರಿಕರ ಉಪಯೋಗಕ್ಕೆ ಈ ಆಸ್ತಿಯನ್ನು ಮೀಸಲಿಡುವಂತೆ ಮನವಿಯಲ್ಲಿ ತಿಳಿಸಿದರು.

