ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬರದ ನಡುವೆಯೂ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ಅಮೆರಿಕಕ್ಕೆ ಹಾರಿದ್ದು, ಕ್ಷೇತ್ರದ ಜನರ ಸಮಸ್ಯೆ ಕೇಳುವವರಿಲ್ಲದಂತಾಗಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಅಮೆರಿಕಾದಲ್ಲಿನ ತಮ್ಮ ಕಂಪನಿ ಮಾರಿ ಹುಟ್ಟೂರಲ್ಲೇ ಇರುವುದಾಗಿ ಚುನಾವಣೆ ವೇಳೆ ಭರವಸೆ ನೀಡಿದ್ದರು. ಈ ಹಿಂದೆ ಹೋಗಿ ವಾಪಸ್ ಬಂದ ಬಳಿಕ ಕ್ಷೇತ್ರದ ಜನರ ಬಳಿ ಕ್ಷಮೆಯಾಚಿಸಿ ಮತ್ತೆ ವಿದೇಶಕ್ಕೆ ಹೋಗಲ್ಲ ಎಂದಿದ್ದರು. ಆದರೆ ಮತ್ತೆ ಕೆಲವೇ ದಿನಗಳಲ್ಲಿ ಅಮೆರಿಕಾಕ್ಕೆ ತೆರಳಿದ್ದಾರೆಂಬ ಆರೋಪ ವ್ಯಕ್ತವಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲೂ ವಿದೇಶಕ್ಕೆ ತೆರಳಿ ಸ್ವಾತಂತ್ರ್ಯ ದಿನಾಚರಣೆಗೆ ಗೈರಾಗಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಈಗ ಮತ್ತೆ ಒಂದು ವಾರದ ಹಿಂದೆ ಅಮೆರಿಕಾಕ್ಕೆ ಹೋಗಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕನ್ನಡ ರಾಜ್ಯೋತ್ಸವಕ್ಕೂ ಗೈರಾಗಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಾರವಾರ | ಶೈಕ್ಷಣಿಕ ಸಹಾಯಧ ಬಿಡುಗಡೆಗೆ ಒತ್ತಾಯಿಸಿ ಮಕ್ಕಳ ಪತ್ರ
“ಕಾವೇರಿ ಸಮಸ್ಯೆ, ಬರ, ವಿದ್ಯುತ್ ಸಮಸ್ಯೆ ಸೇರಿದಂತೆ ರೈತರು ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತ್ರ ಅವಕ್ಕೂ ತಮಗೂ ಸಂಬಂಧವಿಲ್ಲದಂತೆ ತಿರುಗುತ್ತಿದ್ದಾರೆ. ಒಮ್ಮೆ ವಿದೇಶಕ್ಕೆ ಹೋದರೆ ತಿಂಗಳುಗಟ್ಟಲೆ ಕ್ಷೇತ್ರಕ್ಕೆ ಬರುವುದಿಲ್ಲ. ಇಲ್ಲೇ ಇದ್ದು ಜನರ ಸಮಸ್ಯೆಗೆ ಸ್ಪಂದಿಸಲು ಅವರನ್ನು ಗೆಲ್ಲಿಸಿದ್ದೇವೆ. ಆದರೆ, ವೈಯಕ್ತಿಕ ಕಾರಣಗಳನ್ನು ನೀಡಿ ಶಾಸಕರು ಪದೇ ಪದೆ ವಿದೇಶಕ್ಕೆ ಹೋಗುತ್ತಿದ್ದಾರೆ. ಸಮಸ್ಯೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ರೈತರು ಕಂಗಾಲಾಗಿದ್ದಾರೆ. ಶಾಸಕರು ವಿದೇಶ ಮರೆತು ಕ್ಷೇತ್ರದಲ್ಲಿ ಉಳಿದುಕೊಂಡು ಜನಪರ ಕೆಲಸಗಳನ್ನು ಮಾಡಬೇಕು” ಎಂದು ಕ್ಷೇತ್ರದ ಜನರು ಪಟ್ಟುಹಿಡಿದಿದ್ದಾರೆ.