ರಾಜಕಾರಣವು ಹಿಂದೆ ಸೇವೆಯಾಗಿತ್ತು. ಈಗ ವೃತ್ತಿಯಾಗಿ ಮಾರ್ಪಟ್ಟಿದೆ. ಕೈತುಂಬ ಸಂಬಂಧ ಸಿಗುತ್ತದೆ. ಹಾಗಾಗಿ, ಜನರು ರಾಯಕೀಯಕ್ಕೆ ಬರುತ್ತಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ರಾಜಕಾರಣದಲ್ಲಿ ಹಣ ಅಧಿಕಾರವಿದೆ. ಕಾರಣಕ್ಕೆ ಜಡ್ಜ್ಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ರಾಜಕಾರಣಕ್ಕೆ ಬರುತ್ತಿದ್ದಾರೆ. ಅವರೆಲ್ಲರೂ ಜನರ ಸೇವೆ ಮಾಡಲು ಬರುತ್ತಿಲ್ಲ. ಸೌಲಭ್ಯಗಳಿಗಾಗಿ ಬರುತ್ತಿದ್ದಾರೆ” ಎಂದು ಆರೋಪಿಸಿದರು.
“ಜನಪ್ರತಿನಿಧಿಗಳಿಗೆ 12 ತಿಂಗಳು ಸಂಬಳ ಸಿಗುತ್ತದೆ. ಪೆನ್ಶನ್ ಸಿಗುತ್ತದೆ. ಆದರೆ, ಅವರಿಂದ ಜನರಿಗೆ ಯಾವ ಪ್ರಯೋಜನವಾಗುತ್ತಿದೆ. ಜನರು ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕು” ಎಂದು ಕರೆಕೊಟ್ಟರು.
ಕಾವೇರಿ ವಿವಾದದ ಬಗ್ಗೆ ಮಾತನಾಡಿದ ಅವರು, “ಕಾವೇರಿ ಕೊಳ್ಳದಲ್ಲಿ ಕಡಿಮೆ ನೀರಿದೆ. ಕಾವೇರಿ ನೀರಿನ ವಿಚಾರದಲ್ಲಿ ಕೋರ್ಟ್ನಿಂದ ಪರಿಹಾರ ಸಿಗುವುದಿಲ್ಲ. ಸ್ವತಂತ್ರ ಸಮಿತಿ ರಚಿಸಿ, ಜಲಾಶಯಗಳಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು. ತಮಿಳುನಾಡಿಗೆ ನೀರು ಹರಿಸಿ ನಮ್ಮವರನ್ನು ಕೊಲ್ಲಲು ಸಾಧ್ಯವಿಲ್ಲ” ಎಂದರು.