ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಹಿತರಕ್ಷಣ ಸಮಿತಿ ನಗರದಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟ ಅವಧಿ ಧರಣಿ 50 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 24ರ ಮಂಗಳವಾರ ಹೋರಾಟಗಾರರು ಕರಾಳ ದಿನ ಆಚರಿಸಿದ್ದಾರೆ.
ಮಂಡ್ಯದ ಜೆಸಿ ವೃತ್ತದಿಂದ ಸರ್. ಎಂ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಕಪ್ಪು ಬಾವುಟ ಹಿಡಿದು ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ತೀವ್ರ ಬರ ಪರಿಸ್ಥಿತಿ ಕಾಡುತ್ತಿದೆ. ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತಮಿಳುನಾಡಿಗೆ ನೀರು ಬಿಟ್ಟು, ದಸರಾ ಆಚರಿಸುತ್ತಿದ್ದಾರೆ. ವಿಜಯದಶಮಿಯ ಈ ದಿನ ರೈತರಿಗೆ ಕರಾಳ ದಿನವಾಗಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಕಾವೇರಿ ಹೋರಾಟ 50ದಿನಗಳನ್ನು ಪೂರೈಸಿದರೂ ಸರ್ಕಾರವಾಗಲಿ ಅಧಿಕಾರಿಗಳಾಗಲಿ ಹೋರಾಟಗಾರರನ್ನು ಕರೆದು ಮಾತಾಡಿಲ್ಲ ಭೇಟಿಯೂ ಆಗಿಲ್ಲ. ರೈತರನ್ನು ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಹೋರಾಟಗಾರರು ಕಿಡಿಯಾಡಿದರು.