“ಹೊಸ ರಸ್ತೆ ಮಾಡಿ ಇನ್ನೂ ವರ್ಷ ಪೂರ್ತಿ ಆಗಿಲ್ಲ. ಈಗಾಗಲೇ ರಸ್ತೆ ಕಿತ್ತು ವದರಿ ಹೋಗಿದೆ. ನಮ್ಮಲ್ಲಿ 14ರಿಂದ 15 ಟನ್ ಕಬ್ಬಿನ ಲಾರಿ, ಟ್ರ್ಯಾಕ್ಟರ್ ಓಡಾಡುತ್ತವೆ. ಸಾಮಾನ್ಯ ಜ್ಞಾನ ಇಲ್ಲದ ಇಂಜಿನಿಯರ್‌ಗಳು ಹೆಂಗೆ ಕೆಲಸ ಮಾಡಿಸಿದ್ದಾರೋ ನಾ ಕಾಣೆ. ಹಳೆ ರಸ್ತೇನೆ ಚೆನ್ನಾಗಿತ್ತು. 20 ವರ್ಷದಿಂದ ಅಲ್ಲಾಡಿರಲಿಲ್ಲ. ಕನಿಷ್ಠ 10 ವರ್ಷವಾದರೂ ಬಾಳಿಕೆ ಬರಬೇಕಾದ ಹೊಸ ರಸ್ತೆ ಇಷ್ಟು ಬೇಗ ಹಾಳಾದರೆ ಜನಗಳು, ಎತ್ತುಗಾಡಿಗಳು ಓಡಾಟ ಮಾಡುವುದು ಹೆಂಗೆ”…ಹೀಗಂತ ಪ್ರಶ್ನಿಸಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಂಕರಪುರ ಗ್ರಾಮದ ನಿವಾಸಿ ನಂದೀಶ್.
ಹೌದು. ಗ್ರಾಮದಲ್ಲಿದ್ದ ಹಳೆಯ ರಸ್ತೆಯನ್ನು ಕಿತ್ತು ಹಾಕಿ, ಕಳೆದ ವರ್ಷವಷ್ಟೇ ಹೊಸ ರಸ್ತೆ ಮಾಡಿ, ಡಾಂಬರೀಕರಣ ಮಾಡಲಾಗಿತ್ತು. ಅದು ವರ್ಷ ಪೂರ್ತಿಯಾಗುವ ಮುನ್ನವೇ ಕಿತ್ತು ಬರತೊಡಗಿದೆ. ಕಳಪೆ ಕಾಮಗಾರಿಯಿಂದಾಗಿ ಈ ಬೆಳವಣಿಗೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಚನ್ನಸಂದ್ರ ಲಕ್ಷ್ಮಣ್, ಎಂಎನ್ ರಸ್ತೆಯಿಂದ ಬೆಳತೂರು ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸುಮಾರು ಎರಡು ಕೋಟಿ ರೂಪಾಯಿಗಳಲ್ಲಿ ವಿಶೇಷ ಅನುದಾನದಡಿ ಮಾಡಿದ್ದಾರೆ. ಈ ರಸ್ತೆಯನ್ನು ನಿರ್ಮಿಸುವ ಮೇಲ್ವಿಚಾರಣೆಯನ್ನು ಮದ್ದೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದವರು ವಹಿಸಿಕೊಂಡಿದ್ದರು. ಇಲ್ಲಿಂದ ಅಳತೆ ಮಾಡಿ, ಎಂಬಿ ಬರೆದು ಬಿಲ್ ಮಾಡಿಸಲು ಮಂಡ್ಯ ವಿಭಾಗಕ್ಕೆ ಕಳುಹಿಸಿ ಶೇ 90% ಬಿಲ್ ಕೂಡ ಆಗಿದೆ. ಕಳಪೆ ಕೆಲಸದಿಂದಾಗಿ ರಸ್ತೆ ಕಿತ್ತು ಬಂದಿದೆ. ಇನ್ನೂ ಹೆಚ್ಚಿನ ದಾಖಲಾತಿಗಳನ್ನು ಸಂಗ್ರಹಿಸಿ ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸುತ್ತೇವೆ” ಎಂದು ತಿಳಿಸಿದ್ದಾರೆ.

ಬೆಳತೂರು ಮಂಜುನಾಥ್ ಮಾತನಾಡಿ, “ಸ್ವೀಕೃತ ಮಾದರಿಯನ್ನು ಪರೀಕ್ಷಿಸಿದಂತೆ ಫಲಿತಾಂಶ ತೃಪ್ತಿಕರವಾಗಿದೆ ಎಂದು ಬೆಂಗಳೂರಿನ ಗುಣ ನಿಯಂತ್ರಣ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಗುಣಮಟ್ಟ ವರದಿಯನ್ನು ನೀಡಿದ್ದಾರೆ. ಆದರೆ ಇಲ್ಲಿ ರಸ್ತೆಯನ್ನು ವಾಸ್ತವದಲ್ಲಿ ನೋಡಿದಾಗ ಅದರ ತದ್ವಿರುದ್ಧವಾಗಿದೆ. ಇದಕ್ಕೆ ಹೊಣೆ ಯಾರು? ಇದನ್ನು ಸರಿ ಮಾಡಿಸುವವರು ಯಾರು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳತೂರು ನವೀನ್ ಮಾತನಾಡಿ, ಈ ದಾರಿಯಲ್ಲೇ ನಮ್ಮೂರಿನ ಹೊಲ, ಗದ್ದೆಗಳು ಇರೋದು. ಗಾಡಿ ಹೊಡೆಯಲು ತೊಂದರೆ ಆಗುತ್ತಿದೆ. ಶಾಸಕರಾದ ಕದಲೂರು ಉದಯ್ ಅಧಿಕಾರಿಗಳೊಡನೆ ಸ್ಥಳ ಪರಿಶೀಲನೆ ಮಾಡಬೇಕು. ತಪ್ಪು ಮಾಡಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಈ ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಅಂತ ಬೆಳತೂರು ಗ್ರಾಮಸ್ಥರು ಪರವಾಗಿ ಆಗ್ರಹಿಸಿದರು.
ಬೆಳತೂರು ಸುಧಾಕರ್ ಮಾತನಾಡಿ, ಕಾನಿಹಳ್ಳದ ಮೇಲೆ ಸರಿಯಾದ ಮಾನದಂಡಕ್ಕೆ ಅನುಗುಣವಾಗಿ ಡಾಂಬರು ಹಾಕದೆ ಜರುಗಿ ಕಿತ್ತು ಹೋಗಿದೆ. ಗುತ್ತಿಗೆದಾರರ ಆತುರಕ್ಕೆ ಕೆಲಸ ಮಾಡಿ ಹೋದರೆ ಆಗುತ್ತಾ. ಇದರಿಂದ ಓಡಾಡಲು ತುಂಬಾ ತೊಂದರೆ ಆಗಿದೆ. ಕಿತ್ತು ಬಂದಿರುವ ಕಡೆಯಲ್ಲೆಲ್ಲಾ ಈ ಕೂಡಲೇ ಅಧಿಕಾರಿಗಳು ಸರಿ ಮಾಡಿಸಬೇಕು. ರಸ್ತೆ ಚೆನ್ನಾಗಿದ್ದರೆ ಅಷ್ಟೇ ನಮ್ಮೂರಿನ ಜನಗಳಿಗೆ, ದನಕರುಗಳಿಗೆ ಅನುಕೂಲ. ಇಲ್ಲದಿದ್ದರೆ ತಲೆನೋವು ಎಂದರು.
ಪಿಆರ್‌ಇಡಿ ವಿಭಾಗದ ಇಇ ಶಿವಚಂದರ ಹೇಳಿಕೆ ಪಡೆಯಲು ಈ ದಿನ.ಕಾಮ್ ಕಡೆಯಿಂದ ಕರೆ ಮಾಡಲಾಯಿತಾದರೂ, ಕರೆ ಸ್ವೀಕರಿಸಲಿಲ್ಲ.

ಪಂಚಾಯತ್ ಉಪವಿಭಾಗದ ಎಇಇ ವಿದ್ಯಾಶ್ರೀ ಮಾತನಾಡಿ, ಸೇತುವೆ ಮೇಲೆ ಆಸ್ಪಾಲ್ಟ್ ದಪ್ಪವಾಗಿ ಎಳೆದಿದ್ದಾರೆ. ಆದ್ದರಿಂದ ಕಿತ್ತು ಬಂದಿದೆ. ಸರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಇನ್ನೂ ಕೊನೆಯ ಬಿಲ್ ಆಗಿಲ್ಲ. ಡಕ್ಕಿನ ಮೇಲೆ ಆ ರೀತಿ ದಪ್ಪವಾಗಿ ಹಾಕಬಾರದಿತ್ತು ಅಲ್ಲಿ ಮಾತ್ರ ಕಿತ್ತು ಬಂದಿರುತ್ತದೆ. ಇನ್ನೂ ಒಂದು ವರ್ಷದ ಅವಧಿಯವರೆಗೆ ಮೇನ್ಟೆನೆಂಸ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಏನೇ ರಿಪೇರಿ ಬಂದರೂ ಗುತ್ತಿಗೆದಾರರೇ ಸರಿ ಮಾಡಬೇಕು” ಎಂದು ತಿಳಿಸಿದರು.
“ಇಲ್ಲಿಯವರೆಗೆ 1.87 ಕೋಟಿ ಬಿಲ್ ಮಾತ್ರ ಆಗಿದೆ. ಸೈನ್ ಬೋರ್ಡ್ ಇನ್ನಿತರ ಕೆಲಸ ಬಾಕಿ ಇದ್ದಕಾರಣ ಕೊನೆಯ ಬಿಲ್ಲನ್ನು ಕೊಟ್ಟಿರಲಿಲ್ಲ. ಈಗ ರಿಪೇರಿ ಕೆಲಸ ಮಾಡಿದ ನಂತರವಷ್ಟೇ ಬಾಕಿ ಬಿಲ್, ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
