ಮಂಡ್ಯ ಜಿಲ್ಲೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಪರವಾನಗಿ ನೀಡಲು ಅಬಕಾರಿ ಅಧಿಕಾರಿಗಳು ₹40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಪುನೀತ್ ನೀಡಿದ ದೂರಿನಿಂದ ಈ ಪ್ರಕರಣ ತೀವ್ರತೆ ಪಡೆದುಕೊಂಡಿದೆ.
ಮದ್ದೂರು ತಾಲೂಕಿನ ಚಂದೂಪುರ ಗ್ರಾಮದ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತ ಪುನೀತ್ ತಮ್ಮ ತಾಯಿ ಲಕ್ಷ್ಮಮ್ಮನ ಹೆಸರಿನಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಪರವಾನಗಿಗಾಗಿ ಅಬಕಾರಿ ಇಲಾಖೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಇಲಾಖೆಯ ಅಧಿಕಾರಿಗಳು “ಅನುಮತಿ ಪಡೆದು ಅರ್ಜಿ ಸಲ್ಲಿಸಿಲ್ಲ” ಎಂಬ ಕಾರಣದೊಂದಿಗೆ ಅರ್ಜಿಯನ್ನು ತಿರಸ್ಕರಿಸಿದರು.
ಅರ್ಜಿಯನ್ನು ಮತ್ತೆ ಸ್ವೀಕರಿಸಬಹುದೆಂಬ ಆಶೆಯಿಂದ ಪುನೀತ್ ಖುದ್ದಾಗಿ ಅಬಕಾರಿ ಇಲಾಖೆಗೆ ತೆರಳಿ ತಮ್ಮ ಅರ್ಜಿಯನ್ನು ಪುನಃ ಸಲ್ಲಿಸಿದರು. ಆದರೆ ಈ ಬಾರಿ, ಅಬಕಾರಿ ಇಲಾಖೆಯ ಮಂಡ್ಯ ಜಿಲ್ಲಾಧಿಕಾರಿ ರವಿಶಂಕರ್ ಮತ್ತು ಇನ್‌ಸ್ಪೆಕ್ಟರ್ ಶಿವಶಂಕರ್ ₹40 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆಂದು ಪುನೀತ್ ಆರೋಪಿಸಿದರು.
“ಲಂಚವನ್ನು ನೀಡಲು ನಿರಾಕರಿಸಿದ ಬಳಿಕ ₹30 ಲಕ್ಷ, ಬಳಿಕ ₹20 ಲಕ್ಷ ರೂಪಾಯಿಗಳ ಲಂಚಕ್ಕಾಗಿ ಒತ್ತಡ ಹಾಕಲಾಗಿದೆʼ ಇಷ್ಟಕ್ಕೂ ಲಂಚ ನೀಡಲು ಒಪ್ಪದಿರುವ ಕಾರಣ, ನಮ್ಮ ಅರ್ಜಿಯನ್ನು ಮತ್ತೊಮ್ಮೆ ತಿರಸ್ಕರಿಸಲಾಗಿದೆ” ಎಂದು ಪುನೀತ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ಎಲ್ಲ ಸರ್ಕಾರದಿಂದ ರೈತರು, ಕಾರ್ಮಿಕರ ಶೋಷಣೆ: ರೈತ ಮುಖಂಡ ಕೆಂಪೂಗೌಡ
ಲಂಚದ ಬೇಡಿಕೆಯಿಂದ ಬೇಸತ್ತ ಪುನೀತ್, ಮಂಡ್ಯ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದರು. ಈ ವೇಳೆ, ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳನ್ನು ಕೂಡಾ ಲೋಕಾಯುಕ್ತ ಅಧಿಕಾರಿಗಳಿಗೆ ಒದಗಿಸಿದ್ದು, ತನಿಖೆ ಆರಂಭಿಸಲಾಗಿದೆ.
ಈ ಪ್ರಕರಣವು ಜಿಲ್ಲೆಯಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಸಾರ್ವಜನಿಕರಿಂದ ಲಂಚದ ಮೂಲಕ ಹಣ ಕೀಳಲು ಪ್ರಯತ್ನಿಸುತ್ತಿರುವುದು ಅಸಹ್ಯಕರ ಬೆಳವಣಿಗೆಯಾಗಿದೆ.
“ನಾನು ನನಗೆ ನ್ಯಾಯ ಸಿಗಲು ಕಾಯುತ್ತಿದ್ದೇನೆ. ರಾಜ್ಯದ ಎಲ್ಲ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ,” ಎಂದು ಪುನೀತ್ ತಿಳಿಸಿದ್ದಾರೆ. ಇದೀಗ ಅವರು ಲೋಕಾಯುಕ್ತದಿಂದ ಪೂರ್ಣವಾದ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಈಗ ತನಿಖೆ ಆರಂಭಿಸಿದ್ದು, ಆರೋಪಿಗಳಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಿದ್ದಾರೆ. ಸಾರ್ವಜನಿಕರಿಗೆ ಸತ್ಯತೆ ಬಯಲು ಮಾಡಲು ಲೋಕಾಯುಕ್ತರಿಂದ ತಕ್ಷಣವೇ ಸಂಪೂರ್ಣ ತನಿಖೆ ನಡೆಸಬೇಕೆಂಬುದು ದೂರುದಾರರ ನಿರೀಕ್ಷೆಯಾಗಿದೆ.