ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಿದ್ದ ಪತ್ನಿಯ ನಡತೆ ಮೇಲೆ ಅನುಮಾನಗೊಂಡಿದ್ದ ದುರುಳ ಪತ್ನಿಯೊಬ್ಬ ಆಕೆಯನ್ನು ಹತ್ಯೆಗೈರುವ ದುರ್ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯ ಕೃತ್ಯಕ್ಕೆ ಹತ್ಯೆಗೊಳಗಾದ ಯುವತಿಯ ತಂದೆಯೂ ಸಹಕಾರ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಒಂದೇ ಗ್ರಾಮದವರಾಗಿದ್ದ ಮೃತ ಪೂಜಾ ಮತ್ತು ಆಕೆಯ ಪತಿ, ಆರೋಪಿ ಶ್ರೀನಾಥ್ ಪರಸ್ಪರ ಪ್ರೀತಿಸಿ ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪೂಜಾ ಅವರು ಆಗ್ಗಾಗ್ಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇದರಿಂದ ಪೂಜಾಳ ನಡತೆ ಬಗ್ಗೆ ಶಂಕಿಸಿದ್ದ ಆರೋಪಿ ಶ್ರೀನಾಥ್, ಆಕೆ ವಿವಾಹೇತರ ಸಂಬಂಧ ಹೊಂದಿರಬಹುದು ಎಂದು ಅನುಮಾನ ಪಡುತ್ತಿದ್ದ. ಆಗಸ್ಟ್ 7ರಂದು ಗಲಾಟೆ ಮಾಡಿ, ಆಕೆಯ ದುಪ್ಪಟ್ಟದಿಂದ ಆಕೆಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಬಗ್ಗೆ ತನ್ನ ಮಾವ (ಪೂಜಾಳ ತಂದೆ) ದೊರೆಸ್ವಾಮಿಗೆ ತಿಳಿಸಿದ್ದಾನೆ.
ನಂತರ ಮಾರನೇ ದಿನ (ಆಗಸ್ಟ್ 8) ಆರೋಪಿ ಶ್ರೀನಾಥ್ ಮತ್ತು ಮಾವ ದೊರೆಸ್ವಾಮಿ ಇಬ್ಬರೂ ಸೇರಿ ತರಕಾರಿ ತುಂಬುವ ಬ್ಯಾಗ್ನಲ್ಲಿ ಪೂಜಾಳ ದೇಹವನ್ನು ತುಂಬಿಕೊಂಡು ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರೋ ಕಾವೇರಿ ನದಿಗೆ ಕೊಂಡೊಯ್ದಿದ್ದಾರೆ. ಅಲ್ಲಿ, ಮೃತದೇಹಕ್ಕೆ ಕಲ್ಲು ಕಟ್ಟಿ ನದಿಗೆ ಎಸೆದಿದ್ದಾರೆ. ಆ ಜಾಗದಲ್ಲಿ ಹೆಚ್ಚು ಮೊಸಳೆಗಳಿದ್ದು, ಮೊಸಳೆಗಳು ಮೃತದೇಹವನ್ನು ತಿಂದುಹಾಕುತ್ತವೆ ಎಂದು ದುರುಳರು ಭಾವಿಸಿದ್ದರು ಎಂದು ಹೇಳಲಾಗಿದೆ.
ಆದರೆ, ಬುಧವಾರ ಆಕೆಯ ಮೃತದೇಹ ನದಿ ದಡದಲ್ಲಿ ಕಂಡುಬಂದಿದೆ. ಮೃತದೇಹವನ್ನು ನೋಡಿದ ಫಾರೆಸ್ಟ್ ಗಾರ್ಡ್ ಒಬ್ಬರು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರನ್ನೂ ಬಂಧಿಸಿದ್ದಾರೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.