ರಾಜ್ಯ ಸರ್ಕಾರ ಕೊಟ್ಟ ಗೃಹಲಕ್ಷ್ಮಿ ಹಣದಿಂದ ಜತೆಗೆ, ತಾವೂ ಕೂಡಿಟ್ಟ ಸ್ವಲ್ಪ ಹಣವನ್ನು ಸೇರಿಸಿ ತಮ್ಮೂರಿನ ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್(ಕುಡಿಯುವ ನೀರು ಶುದ್ಧೀಕರಿಸುವ ಫಿಲ್ಟರ್) ಕೊಡುಗೆ ನೀಡಿರುವ ಗೃಹಿಣಿ ವಿಜಯಲಕ್ಷ್ಮಿಯವರು ತಮ್ಮ ಮಾನವೀಯತೆ, ಸಾಮಾಜಿಕ ಕಳಕಳಿಯಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ ಪ್ರತಿ ಮನೆಯ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹2000 ನೀಡುತ್ತಿರುವುದೂ ಒಂದು. ಕಳೆದ 15 ತಿಂಗಳಿಂದಲೂ ಈ ಹಣ ಮನೆಯ ಯಜಮಾನಿಯರ ಖಾತೆಗೆ ಬರುತ್ತಿದೆ. ಸರ್ಕಾರ ಈ ಹಣದಿಂದ ಸಾಕಷ್ಟು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯವೂ ಆಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯ ಕೊಪ್ಪಲು ಗ್ರಾಮದ ಗೃಹಿಣಿ ವಿಜಯಲಕ್ಷ್ಮಿಯವರು ಮಧ್ಯಮ ವರ್ಗ ಕುಟುಂಬದ ಮಹಿಳೆಯಾದರೂ ತಮ್ಮೂರಿನ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ತಮಗೆ ಗೃಹಲಕ್ಷ್ಮಿ ಯೋಜನೆಯಿಂದ ಬಂದಿದ್ದ ₹30,000ದ ಜತೆಗೆ ತಾವೂ ಕೂಡಿಟ್ಟಿದ್ದ ಸ್ವಲ್ಪ ಹಣವನ್ನು ಸೇರಿಸಿ ₹50,000 ಮೌಲ್ಯದ ಕುಡಿಯುವ ನೀರಿನ ವಾಟರ್ ಫಿಲ್ಟರ್ ಕೊಡಿಸಿ ಸಾಮಾಜಿಕ ಮೌಲ್ಯ ಮೆರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರೈತರಿಗೆ ಗುಣಮಟ್ಟ, ಸಮರ್ಪಕ ವಿದ್ಯುತ್ ಪೂರೈಸಬೇಕು: ರೈತ ಸಂಘ ಆಗ್ರಹ
ವಿಜಯಲಕ್ಷ್ಮಿ ಅವರ ಸಾಮಾಜಿಕ ಕಾರ್ಯದ ಹಿಂದೆ ಪತಿ ರಂಗನಾಥ್ ಅವರ ಪ್ರೋತ್ಸಾಹವೂ ಇದ್ದು, ಇವರು ಅದೇ ಗ್ರಾಮದ ಗುಂಜಾ ನರಸಿಂಹ ಸ್ವಾಮಿ ದೇಗುಲದ ಅರ್ಚಕಾಗಿದ್ದಾರೆ. ತಮ್ಮ ಪತ್ನಿಯ ಸಾಮಾಜಿಕ ಕಳಕಳಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಪತ್ನಿಯ ಗೃಹಲಕ್ಷ್ಮಿ ಹಣದ ಜತೆಗೆ, ತಮ್ಮ ಕುಟುಂಬ ನಿರ್ವಹಣೆಗೆಂದು ಇಟ್ಟಿದ್ದ ₹20,000ವನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಸರ್ಕಾರದ ಇಂತಹ ಜನಪರ ಯೋಜನೆಗಳು ಸಮಾಜಕ್ಕೆ ಸದ್ಬಳಕೆಯಾಗಲೆಂದು ಸರ್ಕಾರದ ಯೋಜನೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿನ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕುಡಿಯುವ ನೀರಿನ ಸಮಸ್ಯೆ ಅರಿತು, ಶಾಲೆಗೆ ವಾಟರ್ ಫಿಲ್ಟರ್‌ವೊಂದನ್ನು ಕೊಡುಗೆಯಾಗಿ ಕೊಟ್ಟ ದಂಪತಿಯ ಕಾರ್ಯಕ್ಕೆ ಶಾಲೆಯ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದ್ದಾರೆ.