ಮಹಿಳೆಯರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಕೆಡಿಆರ್‌ಡಿಪಿ(ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ) ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಮಹಿಳಾ ಆಯೋಗ ನಿರ್ದೇಶನ ನೀಡಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದ ಮಹಾಲಕ್ಷ್ಮಿ ಎಂಬುವವರು ಧರ್ಮಸ್ಥಳದ ಸಂಘದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕುಟುಂಬವನ್ನು ಭೇಟಿ ಮಾಡಿದ ರಾಜ್ಯ ಮಾಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
“ಮಹಿಳೆಯ ಸಾವು ನೋವು ಸಂಭವಿಸುತ್ತಿದ್ದರು ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳು ಏನು ಮಾಡುತ್ತಿದ್ದೀರಿ. ಎಸ್‌ಕೆಡಿಆರ್‌ಡಿಪಿ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ವರದಿ ಕೊಡಿ. ನಿಮ್ಮ ಕೈಲಿ ಏನೂ ಮಾಡಲು ಆಗದಿದ್ದರೆ ಕನಿಷ್ಠ ಜನರಲ್ಲಿ ಅರಿವನ್ನಾದರು ಮೂಡಿಸಿ” ಎಂದು ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಖುದ್ದು ಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳನ್ನು ಭೇಟಿಯಾಗಿ ಇಲ್ಲಿನ ಪರಿಸ್ಥಿತಿಯನ್ನು ವಿವರಿಸಿ ತಮ್ಮ ಹೆಣ್ಣುಮಕ್ಕಳ ಪರವಾಗಿ ಮಾತನಾಡಿ ನ್ಯಾಯ ಕೊಡಿಸುತ್ತೇನೆ” ಎಂದು ಭರವಸೆ ನೀಡಿದ ಅವರು ನೊಂದ ಕುಟುಂಬವನ್ನು ಸಂತೈಸಿದರು.
ಮಹಿಳಾ ಮುನ್ನಡೆಯ ಪೂರ್ಣಿಮಾ, ಮಾಹಿಳಾ ಆಯೋಗದ ಅಧ್ಯಕ್ಷೆ 6 ಗಂಟೆ ತಡವಾಗಿ ಬಂದದ್ದನ್ನು ಗಮನಿಸಿ ತರಾಟೆಗೆ ತೆಗೆದುಕೊಂಡ ಅವರು, “ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಭೀಕರ ಬರ ಆವರಿಸಿರುವುದರಿಂದ ಕೂಲಿಯೂ ಇಲ್ಲದೆ ಬದುಕು ನಡೆದುವುದೇ ಕಷ್ಟಕರವಾಗಿರುವಾಗ ಎಲ್ಲಿಂದ ಹಣ ತಂದು ಕಟ್ಟುತ್ತಾರೆ. ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಹಿಂಸೆ ತಡೆಗಟ್ಟಿ, ಸಾಲ ಮನ್ನಾಮಾಡಿ ಋಣಮುಕ್ತರನ್ನಾಗಿ ಮಾಡಿಸಲು ಆಳಿಕೆಯನ್ನು ಒತ್ತಾಯಿಸಿ” ಎಂದು ಹಕ್ಕೊತ್ತಾಯ ಮಂಡಿಸಿದರು.
“ಜೊತೆಗೆ 50ಕ್ಕೂ ಹೆಚ್ಚು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಧರ್ಮಸ್ಥಳದಂತ ಮೈಕ್ರೋಫೈನಾನ್ಸ್ ಸಂಸ್ಥೆಗಳು ಅಧಿಕೃತವೋ ಇಲ್ಲವೇ ಅನಧಿಕೃತವೋ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳಿ. ಒಬ್ಬ ವ್ಯಕ್ತಿಗೆ ಒಂದು ಆದಾರ್ ಕಾರ್ಡ್ ಮೇಲೆ ನಿಗದಿಗಿಂತಲೂ ಹೆಚ್ಚು ಬಡ್ಡಿ ಹಾಕಿ ಸಂಸ್ಥೆ ಬೆಳೆಸುವ ಹುನ್ನಾರದಿಂದ ಮಿತಿಮೀರಿದ ಸಾಲ ನೀಡಿ. ವಸೂಲಿಗಾಗಿ ಗುಂಪಿನ ನಡುವೆಯೇ ಒಡಕುಂಟುಮಾಡಿ ಕಿರುಕುಳದ ದಾರಿ ಹಿಡಿದಿರುವ ಎಸ್‌ಕೆಡಿಆರ್‌ಡಿಪಿ ಮೇಲೆ ಕಡಿವಾಣ ಹಾಕಿ ಕ್ರಮ ಕೈಗೊಳ್ಳಬೇಕು” ಎಂದು ನಿರ್ದೇಶನ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ₹10,000 ಕೋಟಿ ಕಪ್ಪುಹಣ ಧರ್ಮಸ್ಥಳಕ್ಕೆ ರವಾನೆ: ಗಿರೀಶ್ ಮಟ್ಟಣ್ಣನವರ್
ಶಿವಕುಮಾರ್ ಮಾದಳ್ಳಿ ಮಾತನಾಡಿ, “ಧರ್ಮಸ್ಥಳದಂತಹ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಲೈಸೆನ್ಸ್‌ಗಳನ್ನು ತನಿಖೆಗೆ ಒಳಪಡಿಸಿ ಸಾಲವಸೂಲಾತಿಗೆ ಕಿರುಕುಳ ನೀಡದಂತೆ ಆಳಿಕೆ ಮತ್ತು ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಬೇಕಿದೆ” ಎಂದು ಆಗ್ರಹಿಸಿದರು.
ಮಹಿಳಾ ಆಯೋಗದ ಅಧ್ಯಕ್ಷೆ ಗ್ರಾಮಕ್ಕೆ ಭೇಟಿ ನೀಡಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪಂಚಾಯಿತಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಪಂಚಾಯಿತಿ ಸದಸ್ಯರು ಹಾಗೂ ಮಹಿಳಾ ಮುನ್ನಡೆಯ ಶಿಲ್ಪ, ಶಾಂತಮ್ಮ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕೌಶಲ್ಯ, ದಲಿತಪರ ಸಂಘಟನೆಗಳ ಮುಂದಾಳುಗಳು ಹಾಗೂ ಗ್ರಾಮಸ್ಥರು ಇದ್ದರು.