ಮದ್ದೂರಿನಲ್ಲಿ ಶ್ರಮಿಕ ನಗರ (ಸ್ಲಂ) ನಿವಾಸಿಗಳು ವಾಸಿಸುತ್ತಿರುವ ಜಾಗವನ್ನು ಮಸೀದಿ ಆಡಳಿತ ಮಂಡಳಿ ಮತ್ತು ವರ್ಕ್ಫ್‌ಬೋರ್ಡ್ ಅನಧಿಕೃತವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿವೆ. ನಮ್ಮ ನೆಲೆಯಲ್ಲಿ ಕಸಿದುಕೊಳ್ಳಲು ಯತ್ನಿಸುತ್ತಿವೆ. ಮಂಡಳಿ ಮತ್ತು ವರ್ಕ್ಫ್‌ಬೋರ್ಡ್ ನಡೆಯನ್ನು ತಡೆದು, ಶ್ರಮಿಸಲು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕು ಮತ್ತು ಅಲ್ಲಿನ ನಿವೇಶನಗಳಲ್ಲಿ ಅಲ್ಲಿ ವಾಸಿಸುತ್ತಿರುವ ಶ್ರಮಿಕರ ಹೆಸರಿ ಮಾಡಿ, ಹಕ್ಕುಪತ್ರಗಳನ್ನು ನೀಡಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಒತ್ತಾಯಿಸಿದೆ.
ಮಂಡ್ಯದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಗೂ ಕರ್ನಾಟಕ ಜನಶಕ್ತಿಯ ಮುಖಂಡರು ಮತ್ತು ಸ್ಲಂ ನಿವಾಸಿಗಳು ಪ್ರತಿಭಟನೆ ನಡೆಸಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಸಿದ್ದರಾಜು, “ಮದ್ದೂರಿನಲ್ಲಿ ಸ್ಲಂ ನಿವಾಸಿಗಳು ವಾಸಿಸುತ್ತಿರುವ ಜಾಗ, ಅಲ್ಲಿನ ನಿವಾಸಿಗಳದ್ದೇ ಎಂದು ಈಗಾಗಲೇ ಅಧಿಕಾರಿಗಳು ಘೋಷಿಸಿದ್ದಾರೆ. ಸ್ಲಂ ನಿವಾಸಿಗಳು ವಾಸುತ್ತಿರುವ ಪ್ರದೇಶಕ್ಕೂ, ಮಸೀದಿ, ವರ್ಕ್ಫ್‌ಬೋರ್ಡ್ ಅಥವಾ ಶಾಲೆಗೂ ಯಾವುದೇ ಸಂಬಂಧವಾಗಲೀ, ಸಮಸ್ಯೆಯಾಗಲೀ ಇಲ್ಲ. ಎಲ್ಲ ಜಮೀನುಗಳೂ ಕೂಡ ಪ್ರತ್ಯೇಕವಾಗಿಯೇ ಗುರುತಿಸಲ್ಪಟ್ಟಿವೆ. ಇಲ್ಲಿನ ಜಮೀನುಗಳಿಗೆ ಒಂದಕ್ಕೊಂದು ಸಂಬಂಧವಿಲ್ಲ ಎಂಬುದನ್ನು ಮಂಡ್ಯದ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳು ಪದೇ-ಪದೇ ಸರ್ವೇ ನಡೆಸಿ, ಚೆಕ್‌ಬಂದಿಗಳನ್ನು ಗುರುತಿಸಿ ಖಚಿತಪಡಿಸಿದ್ದಾರೆ. ಆದರೂ, ಮಸೀದಿ ಮಂಡಳಿ ಅನಗತ್ಯವಾಗಿ ತೊಂದರೆ ಕೊಡುತ್ತಿದೆ” ಎಂದು ಆರೋಪಿಸಿದ್ದಾರೆ.

“ಮಸೀದಿ ಆಡಳಿತ ಮಂಡಳಿ ಮತ್ತು ಮದ್ದೂರಿನ ವರ್ಕ್ಫ್‌ಮಂಡಳಿ ಬಡ ವಸತಿ ಭೂಮಿ ವಂಚಿತ ಶ್ರಮಿಕ ನಗರ ನಿವಾಸಿಗಳಿಗೆ ತೊಂದರೆ ಕೊಡುತ್ತಿವೆ. ಬಲವಂತವಾಗಿ ಮತ್ತು ಅನಧಿಕೃತವಾಗಿ ಇಲ್ಲಿನ ಸ್ಲಿಂ ಜನರ ಭೂಮಿಯನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸುತ್ತಿವೆ. ಅದಕ್ಕಾಗಿ, ವಸತಿ ವಂಚಿತರಿಗೆ ಮನೆ ಕಟ್ಟಿಕೊಡಲು ಸ್ಲಂ ಬೋರ್ಡ್‌ಗೆ ಹಸ್ತಾಂತರ ಆಗಬೇಕಿದ್ದ ಭೂಮಿಯನ್ನು ಅಧಿಕಾರಿಗಳ ಆದೇಶಕ್ಕೆ ವಿರುದ್ಧವಾಗಿ ತಡೆಹಿಡಿದು, ಅಮಾಯಕ ಜನರಿಗೆ ಕುರುಕುಳ ನೀಡುತ್ತಿದ್ದಾರೆ. ಇದು, ಅನಗತ್ಯವಾದ ಸಂಘರ್ಷದ ವಾತಾವರಣಕ್ಕೆ ದಾರಿ ಮಾಡಿಕೊಡುತ್ತಿದೆ” ಎಂದು ಕಿಡಿಕಾರಿದ್ದಾರೆ.
“ಸ್ಲಂ ನಿವಾಸಿಗಳಿಗೆ ಮಸೀದಿ ಮಂಡಳಿಯೊಂದಿಗೆ ಸಂಘರ್ಷ ನಡೆಸುವ ಅಥವಾ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಸಮಸ್ಯೆಯನ್ನ ಮುಂದೊಯ್ಯಲು ಇಷ್ಟವಿಲ್ಲ. ಆದರೆ, ಮಸೀದಿ ಆಡಳಿತ ಮಂಡಳಿ ಮತ್ತು ವರ್ಕ್ಫ್‌ಮಂಡಳಿ ಈ ವಿಚಾರವನ್ನ ಅರ್ಥ ಮಾಡಿಕೊಳ್ಳದೆ, ತಮ್ಮದಲ್ಲದ ಭೂಮಿಯಲ್ಲಿ ಅನ್ಯಾಯಯುತವಾಗಿ ಒತ್ತುವರಿ ನಡೆಸುವ ಪ್ರಯತ್ನ ಮಾಡುತ್ತಿವೆ. ಇದರಿಂದ, ಮುಂದೆ ಅಶಾಂತಿಯ ವಾತಾವರಣ ಮದ್ದೂರು ಮತ್ತು ಮಂಡ್ಯದಲ್ಲಿ ಸೃಷ್ಠಿಯಾಗುವ ಸಾಧ್ಯತೆಗಳಿವೆ. ಅದನ್ನು ತಡೆಯಲು ಮಂಡ್ಯದ ಎಲ್ಲ ಸಂಘಟನೆಗಳ ಮುಖಂಡರು ಒಗ್ಗೂಡಿ ಮಸೀದಿ ಆಡಳಿತ ಮಂಡಳಿ ಮತ್ತು ವರ್ಕ್ಫ್‌ಮಂಡಳಿಗೆ ಸಮಸ್ಯೆಗಳ ಬಗ್ಗೆ ಅರ್ಥ ಮಾಡಿಸುವ ಅಗತ್ಯವಿದೆ. ಹೀಗಾಗಿ, ಎಲ್ಲ ಸಂಘಟನೆಗಳೂ ಸ್ಲಂ ಜನರ ನೆರವಿಗೆ ಬರಬೇಕು” ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿಯ ಪೂರ್ಣಿಮ, ನಗರಗೆರೆ ಜಗದೀಶ್ ಹಾಗೂ ಸ್ಲಿಂ ನಿವಾಸಿಗಳು ಇದ್ದರು.