“ಸಮಾಜದಲ್ಲಿ ಇರುವ ಜನ ಸಮುದಾಯವನ್ನು ಸತ್ಪಥದಲ್ಲಿ ನಡೆಸುವ, ಸತ್ಯದ ನೆಲೆಯೆಡೆಗೆ ಕೊಂಡೊಯ್ಯುವ, ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಜೀವಪರ ಕಾವ್ಯದ ಸೃಷ್ಟಿಗೆ ಯುವ ಕವಿಗಳು ಮುಂದಾಗಬೇಕು” ಎಂದು ದಸರಾ ಯುವ ಕವಿಗೋಷ್ಠಿಯಲ್ಲಿ ಸಾಹಿತಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ‘ನಾಡಹಬ್ಬ ಶ್ರೀರಂಗಪಟ್ಟಣ ದಸರಾ ಮಹೋತ್ಸವ’ದ ಅಂಗವಾಗಿ ಪರಿವರ್ತನಾ ಕಾಲೇಜಿನಲ್ಲಿ ‘ದಸರಾ ಯುವ ಕವಿಗೋಷ್ಠಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯದ ವಿಕೃತ ಮನೋಭಾವ ಹೆಚ್ಚುತ್ತಿದೆ. ಇದರಿಂದ ಮಹಿಳೆಯರ ಮೇಲಿನ ದೌರ್ಜ್ಯನ ಮತ್ತು ಕೋಮು-ಗಲಭೆಗಳು ಹೆಚ್ಚಾಗುತ್ತವೆ. ಹಾಗಾಗಿ ಸಮಾಜದಲ್ಲಿ ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತಿದ್ದು, ಅಪಾಯಕಾರಿ ಬೆಳವಣಿಗೆ ಹೆಚ್ಚುತ್ತಿದೆ” ಎಂದರು.
“ಸಾಹಿತ್ಯದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯವಿದೆ. ಆದ್ದರಿಂದ ಕವಿಗಳು ಜವಾಬ್ದಾರಿಯಿಂದ ಕಾವ್ಯ ರಚಿಸಬೇಕು. ಜಾತಿ, ಮತ, ಪಂಥ, ಪಕ್ಷ, ವೈಯಕ್ತಿಕ ನೆಲೆಗಳನ್ನು ಮೀರಿ ವಿಶ್ವಾತ್ಮಕ ನೆಲೆಯಲ್ಲಿ ಕಾವ್ಯ ರಚಿಸಬೇಕು. ಆಗ ಉತ್ತಮವಾದ ಸಮಾಜಮುಖಿ ಮತ್ತು ಜೀವನ್ಮುಖಿಯಾದ ಕಾವ್ಯ ಸೃಷ್ಟಿಯಾಗುತ್ತದೆ. ಕವಿಗಳು ಸಾಹಿತ್ಯ ಪ್ರತಿಭೆಯ ಅಭಿವ್ಯಕ್ತಿಗೆ ಸಾಮಾಜಿಕ ಜಾಲತಾಣ ಮುಕ್ತ ವೇದಿಕೆಯನ್ನು ಕಲ್ಪಿಸಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡು ಸಹೃದಯರಿಗೆ ಸಾಹಿತ್ಯ ತಲುಪಿಸಬೇಕು. ಆದರೆ ಬರೆದುದ್ದೆಲ್ಲವನ್ನು ಪ್ರಕಟಿಸುವ ಮುನ್ನ ತಿದ್ದಿ ತೀಡಿ ಸಂಯಮದಿಂದ ಪರಿಷ್ಕರಿಸಬೇಕು. ಆಗ ಸಾಹಿತ್ಯಕ್ಕೆ ಗಟ್ಟಿತನ ಬರುತ್ತದೆ” ಎಂದು ಯುವ ಕವಿಗಳಿಗೆ ಸಜಗೌ ಅವರು ಸಲಹೆ ನೀಡಿದರು.
ಯುವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸಾ.ವೆ.ರಾ. ಸ್ವಾಮಿ ಮಾತನಾಡಿ, “ಕವಿಗಳು ತಮ್ಮ ಅನುಭವಗಳನ್ನು ಕಾವ್ಯದಲ್ಲಿ ತರಬೇಕು. ಬೇರೆಯವರ ನೋವುಗಳನ್ನು ತಮ್ಮದೆಂದು ಪರಿಭಾವಿಸಿ ಬರೆಯಬೇಕು. ಆಗ ಉತ್ತಮ ಕಾವ್ಯವಾಗುತ್ತದೆ ಎಂದರು.
ಯುವ ಕವಿಗೋಷ್ಠಿಯನ್ನು ಕಾಟಾಚಾರಕ್ಕೆ ಯೋಜಿಸಬಾರದು. ಇದನ್ನು ಕಾಲೇಜು ಸಭಾಂಗಣದಲ್ಲಿ ಆಯೋಜಿಸುವ ಬದಲು ಶ್ರೀರಂಗ ಮುಖ್ಯ ವೇದಿಕೆಯಲ್ಲಿ ವ್ಯವಸ್ಥೆ ಮಾಡಬೇಕಿತ್ತು. ಕವಿಗಳನ್ನು ಗೌರವಪೂರ್ವಕವಾಗಿ ಆಹ್ವಾನಿಸಬೇಕು. ಕವಿಗಳಿಗೆ ಸಕಾಲಕ್ಕೆ ಆಹ್ವಾನ ಪತ್ರಿಕೆಯನ್ನು ತಲುಪಿಸಬೇಕಿತ್ತು ಎಂದು ಸಾಹಿತಿ ಸಾ.ವೆ.ರಾ. ಸ್ವಾಮಿ ಆಯೋಜಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಗಿಡ ನೆಡುವ ಮೂಲಕ ಜಯಕರ್ನಾಟಕ ಜನಪರ…
ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಡಾ. ಹುಸ್ಕೂರು ಕೃಷ್ಣೇಗೌಡ, ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗು, ನಿಕಟಪೂರ್ವ ಅಧ್ಯಕ್ಷ ಎಂ.ಬಿ. ಕುಮಾರ್, ಪದಾಧಿಕಾರಿಗಳಾದ ಸಿ. ಸ್ವಾಮಿಗೌಡ, ಗಂಜಾಂ ಸುರೇಶ್, ಕೆ.ಬಿ. ಬಸವರಾಜ್ ಉಪಸ್ಥಿತರಿದ್ದರು. ಇಪ್ಪತ್ತಕೂ ಹೆಚ್ಚಿನ ಕವಿಗಳು ತಮ್ಮ ಕವನಗಳ ವಾಚಿಸಿ ಗಮನ ಸೆಳೆದರು.