ಪ್ರಿಯಕರನ ನಂಬಿ ಮೋಸ ಹೋದ ದಲಿತ ಯುವತಿ; ಆರೋಪಿ ರಕ್ಷಣೆಗೆ ನಿಂತ್ರಾ ಪೊಲೀಸರು?

Date:

Advertisements
'ದೂರು ಕೊಟ್ಟು ನಾಲ್ಕು ತಿಂಗಳಾದರೂ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ. ದೂರು ಕೊಟ್ಟ ದಿನ ಎಫ್‌ಐಆರ್‌ ದಾಖಲಿಸದೆ, ಪೊಲೀಸರು ತಮಗಿಷ್ಟ ಬಂದ ದಿನ ಎಫ್‌ಐಆರ್‌ ದಾಖಲಿಸಬಹುದೆಂಬುದು ಯಾವ ಕಾನೂನಿನಲ್ಲಿದೆ?'

ಪ್ರೀತಿಸುವಾಗ ಮರುಳು ಮಾತನಾಡಿದ್ದ ಯುವಕ, ಮದುವೆಯಾದ ಮೇಲೆ ಕಿರಾತಕನಾಗಿದ್ದಾನೆ. ಹತ್ತು ತಿಂಗಳ ಮಗುವಿರುವ ಆಕೆಯನ್ನು ತವರು ಮನೆಯಲ್ಲಿ ಬಿಟ್ಟು ಆತ ಪರಾರಿಯಾಗಿದ್ದಾನೆ. ಮತ್ತೆ-ಮತ್ತೆ ಆತನನ್ನು ನಂಬಿ ಮೋಸ ಹೋದ ಯುವತಿ, ಈಗ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಪೊಲೀಸರ ನಿರ್ಲಕ್ಷ್ಯ ಧೋರಣೆಯಿಂದ ಮತ್ತಷ್ಟು ಬಳಲಿರುವ ಮಂಡ್ಯ ಜಿಲ್ಲೆಯ ಯುವತಿಯ ಅಳಲು ಇದು.

ಅವರಿಬ್ಬರದ್ದು ಅಂತರ್ಜಾತಿ ಪ್ರೀತಿ. ಒಂದೇ ಊರಿನವರು. ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯ ನಿವಾಸಿಗಳಾದ ಇಬ್ಬರೂ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಕ್ಕಲಿಗ ಸಮುದಾಯ ಅಶೋಕ, ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಹರ್ಷಿತಾಳನ್ನು ಪ್ರೀತಿಸಿದ್ದ. ಎಂದಿಗೂ ಕೈಬಿಡುವುದಿಲ್ಲವೆಂದು ನಂಬಿಸಿದ್ದ. ಇಬ್ಬರ ಕುಟುಂಬದವರಿಗೂ ಅವರ ಪ್ರೀತಿ ತಿಳಿದಿತ್ತು. ಪ್ರಬಲ ಜಾತಿಯ ಅಶೋಕನ ಕುಟುಂಬದವರು ಅಂತರ್ಜಾತಿ ವಿವಾಹಕ್ಕೆ ಒಪ್ಪುವುದಿಲ್ಲವೆಂದು ಹರ್ಷಿತಾ ಮನೆಯವರು ಆಕೆಗೆ ಬೇರೆಡೆ ವಿವಾಹ ನಿಶ್ಚಯಿಸಿದ್ದರು.

ಆದರೆ, ಅದನ್ನು ತಡೆದ ಅಶೋಕ ಮತ್ತು ಆತನ ತಾಯಿ ಅಕಿಲಾ ಹಾಗೂ ತಂಗಿ, ಅಶೋಕನಿಗೆ ಹರ್ಷಿತಾಳೊಂದಿಗೇ ಮದುವೆ ಮಾಡುತ್ತೇವೆಂದು ಭರವಸೆ ನೀಡಿದ್ದರು. ಎರಡು ವರ್ಷ ಸಮಯ ಕೊಡಿ, ಅಷ್ಟರಲ್ಲಿ ಒಂದಷ್ಟು ಹಣಕಾಸು ಮಾಡಿಕೊಂಡು ವಿವಾಹ ಮಾಡೋಣವೆಂದೂ ಹೇಳಿದ್ದರು.

Advertisements

ಅವರ ಮಾತನ್ನು ಹರ್ಷಿತಾ ಕುಟುಂಬದವರು ನಂಬಿದ್ದರು. ಹರ್ಷಿತಾ ರಾಮನಗರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಆಕೆಯನ್ನು ಅಶೋಕ್‌ ಆಗಾಗ್ಗೆ ಭೇಟಿ ಮಾಡುತ್ತಿದ್ದ. ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಪರಿಣಾಮ ಆಕೆ ಗರ್ಭಿಣಿಯಾಗಿದ್ದರು. ಅಶೋಕನ ತಾಯಿ-ತಂಗಿ ಸೇರಿ ಹರ್ಷಿತಾಗೆ ಗರ್ಭಪಾತ ಮಾಡಿಸಿದ್ದರು. ನಂತರವೂ, ಆಕೆಯನ್ನು ನಂಬಿಸಿದ್ದ ಅಶೋಕ ಆಕೆಯೊಂದಿಗೆ ದೈಹಿಕ ಸಂಬಂಧ ಮುಂದುವರೆಸಿದ್ದ, ಎರಡನೇ ಬಾರಿಗೆ ಗರ್ಭವತಿಯಾದ ಯುವತಿ, ಮದುವೆ ಮಾಡಿಕೊಳ್ಳುವಂತೆ ಅಶೋಕನಿಗೆ ಒತ್ತಾಯಿಸಿದ್ದರು.

ಆದರೆ, ಮತ್ತೆ ಅಡ್ಡ ಬಂದ ಅಶೋಕನ ತಾಯಿ-ಸಹೋದರಿ, ಮತ್ತೆ ಗರ್ಭಪಾತ ಮಾಡಿಸಿಕೊ, ಅಶೋಕನಿಗೆ ಬೇರೆ ಯುವತಿಯೊಂದಿಗೆ ಮದುವೆ ಮಾಡುತ್ತೇವೆಂದು ಹೇಳಿದ್ದರು. ವಿಚಲಿತಳಾದ ಹರ್ಷಿತಾ, ಆಶೋಕನೊಂದಿಗೆ ಮದುವೆ ಮಾಡಿಸುವಂತೆ ರಾಮನಗರ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾಗಿದ್ದರು.

ಮದುವೆ ಮಾಡಿಕೊಂಡು ಹರ್ಷಿತಾಳನ್ನು ಮನೆಗೆ ಕರೆದೊಯ್ದ ಅಶೋಕ, ಕ್ರೂರಿಯಾಗಿ ಬದಲಾಗಿದ್ದ. ಗರ್ಭಿಣಿಯಾಗಿದ್ದ ಆಕೆಗೆ ಪ್ರತಿನಿತ್ಯ ಅಶೋಕ, ಆತನ ಅಪ್ಪ, ಅಮ್ಮ, ಸಹೋದರಿ ಸೇರಿ ಹಿಂಸೆ ನೀಡಲಾರಂಭಿಸಿದ್ದರು. ಆಕೆಗೆ ಹೆರಿಗೆಯಾದ ಬಳಿಕ ಆರೈಕೆಗಾಗಿ ಹರ್ಷಿತಾಳನ್ನು ತವರು ಮನೆಗೆ ತಂದುಬಿಟ್ಟಿದ್ದ ಅಶೋಕ, ಅಪ್ಪ-ಅಮ್ಮರೊಂದಿಗೆ ಇರುವುದು ಬೇಡ. ಬೇರೊಂದು ಮನೆ ಮಾಡಿ ಕರೆದುಕೊಂಡು ಹೋಗುವುದಾಗಿ ನಂಬಿಸಿದ್ದ. ಆಕೆಯೂ ಅದನ್ನು ನಂಬಿದ್ದಳು.

ಆಗಾಗ್ಗೆ ಹರ್ಷಿತಾಳ ತವರು ಮನೆಗೆ ಅಶೋಕ ಬಂದು ಹೋಗುತ್ತಿದ್ದ. ಬಾಣಂತಿ ಎಂಬುದನ್ನೂ ನೋಡದೇ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಪರಿಣಾಮ, ಬಾಣಂತಿಯಾಗಿದ್ದಾಗಲೇ ಹರ್ಷಿತಾ ಮತ್ತೆ ಗರ್ಭಿಣಿಯಾದಳು. ಬಳಿಕ, ಆತ ‘ನನಗೆ ವಿಚ್ಛೇದನ ಕೊಡು, ನಾನು ಬೇರೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದೇನೆ. ಆಕೆಯೂ ಗರ್ಭಿಣಿಯಾಗಿದ್ದಾಳೆ. ನಾನು ಆಕೆಯನ್ನೇ ಮದುವೆಯಾಗುತ್ತೇನೆ’ ಎಂದು ಒತ್ತಾಯಿಸಿದ್ದ.

ವಿಚ್ಛೇದನ ನೀಡಲು ಹರ್ಷಿತಾ ಒಪ್ಪದಿದ್ದಾಗ, ಆಕೆ ಮೇಲೆ ಹಲ್ಲೆ ಮಾಡಿ, ದೌರ್ಜನ್ಯ ಎಸಗಲಾರಂಭಿಸಿದ್ದ. ಮನೆಯ ಕಿಟಕಿಗಳನ್ನೂ ಒಡೆದುಹಾಕಿದ್ದ. ಮಾತ್ರವಲ್ಲದೆ, ತವರು ಮನೆಗೆ ತಂದುಬಿಟ್ಟು 10 ತಿಂಗಳಾದರೂ ಆಕೆಯನ್ನು ಮರಳಿ ಮನೆಗೆ ಕರೆದುಕೊಂಡು ಹೋಗಿಲ್ಲ. ಪದೇ-ಪದೇ ಹರ್ಷಿತಾಗೆ ಕರೆ ಮಾಡುತ್ತಿದ್ದ ಅಶೋಕ, ವಿಚ್ಚೇದನ ನೀಡುವಂತೆ ಒತ್ತಾಯಿಸುತ್ತಿದ್ದ.

ಇದರಿಂದ ಬೇಸತ್ತ ಹರ್ಷಿತಾ ಮಂಡ್ಯದಲ್ಲಿ ಮಹಿಳಾ ಆಯೋಗ ಮತ್ತು ಮಹಿಳಾ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ್ದರು. ಅವರು ಆತನನ್ನು ಕರೆದು ಎಚ್ಚರಿಕೆ ನೀಡಿದ್ದರು. ಆಕೆಯನ್ನು ಬೇರೆ ಮನೆ ಮಾಡಿ ಕರೆದುಕೊಂಡು ಹೋಗುವುದಾಗಿ ಮುಚ್ಚಳಿಕೆ ಪತ್ರವನ್ನೂ ಅಶೋಕ ಬರೆದುಕೊಟ್ಟಿದ್ದ. ಆದರೆ, ಹರ್ಷಿತಾಳನ್ನು ಆತ ಕರೆದುಕೊಂಡು ಹೋಗಲಿಲ್ಲ.

ಅಲ್ಲದೆ, ಆಕೆಯನ್ನು ಸಾಯಿಸುವುದಾಗಿ ಕೆಲವು ವಿಡಿಯೋಗಳನ್ನು ಕಳಿಸಿ ಬೆದರಿಕೆ ಹಾಕುವುದು. ಹರ್ಷಿತಾ ಸತ್ತಿದ್ದಾಳೆ, ಮಗುವೂ ಸತ್ತಿದೆಯೆಂದು ಫೋಟೋ ಹಾಕಿ, ಅದರ ಮೇಲೆ ಆರ್‌ಐಪಿ (RIP) ಎಂದು ಹಾಕಿ ಮಾನಸಿಕ ಹಿಂಸೆ ನೀಡಿದ್ದಾನೆ. ಮಾತ್ರವಲ್ಲದೆ, ಹರ್ಷಿತಾ ತಾಯಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

“ಬಳಿಕ, ಮಂಡ್ಯ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ, ಮಹಿಳಾ ಪೊಲೀಸ್‌ ಠಾಣೆ, ಕೆ.ಎಂ ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಮತ್ತೆ ದೂರು ದಾಖಲಿಸಿದ್ದೇನೆ. ಆ ಕಚೇರಿ ಈ ಕಚೇರಿಯೆಂದು ಅಲೆದಾಡುತ್ತಿದ್ದೇನೆ. ಆದರೆ, ಅಶೋಕನ ವಿರುದ್ಧ ಯಾವ ಠಾಣೆಯಲ್ಲಿಯೂ ಇದುವರೆಗೂ ಎಫ್ಐಆರ್‌ ಕೂಡ ದಾಖಲಾಗಿಲ್ಲ. ಆತನನ್ನು ಹುಡುಕಿತ್ತಿದ್ದೇವೆ ಎಂದು ದಿನಕ್ಕೊಂದು ಸಬೂಬು ಹೇಳಿ ಕೆ.ಎಂ ದೊಡ್ಡಿಯ ಎಸ್‌ಐ ಆನಂದ್ ವಾಪಸ್ ಕಳಿಸುತ್ತಾರೆ” ಎಂದು ಹರ್ಷಿತಾ ಆರೋಪಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನೂ ಭೇಟಿ ಮಾಡಿದ್ದ ಹರ್ಷಿತಾ, ತನಗಾಗಿರುವ ಅನ್ಯಾಯವನ್ನು ವಿವರಿಸಿದ್ದಾರೆ. ಎಸ್‌ಪಿ ಮತ್ತು ಡಿವೈಎಸ್‌ಪಿ, ಕೆ.ಎಂ ದೊಡ್ಡಿ ಠಾಣೆಯ ಎಸ್‌ಐ ಆನಂದ್‌ಗೆ ಕರೆ ಮಾಡಿ, ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದ್ದಾರೆ. ಆದರೂ, ಇದುವರೆಗೂ ಎಫ್‌ಐಆರ್‌ ದಾಖಲಾಗಿಲ್ಲ.

ಈ ಸುದ್ದಿ ಓದಿದ್ದೀರಾ?: ಉಜಿರೆಯ ಸೌಜನ್ಯ ಕೊಲೆಯಾಗಿ 11 ವರ್ಷ; ಆರೋಪಿ ಸಂತೋಷ್‌ ರಾವ್‌ ನಿರ್ದೋಷಿಯಾದರೆ, ದೋಷಿ ಯಾರು?

“ಹರ್ಷಿತಾ ಮತ್ತು ಹಲವು ಸಂಘಟನೆಗಳ ಮುಖಂಡರು ಕೆ.ಎಂ ದೊಡ್ಡಿ ಠಾಣೆಗೆ ತೆರಳಿ, ಅಶೋಕ ಮತ್ತು ಆತನ ಕುಟುಂಬಸ್ಥರ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಎಫ್‌ಐಆರ್‌ ದಾಖಲಿಸಲು ನಿರಾಕರಿಸಿರುವ ಎಸ್‌ಐ ಆನಂದ್, ‘ನನಗೆ ಏನು ಮಾಡಬೇಕೆಂದು ಗೊತ್ತಿದೆ. ಯಾರೂ ಬುದ್ದಿ ಹೇಳುವ ಅಗತ್ಯವಿಲ್ಲ. ಆತನನ್ನು ಹಿಡಿದು, ನಂತರ ಎಫ್‌ಐಆರ್‌ ದಾಖಲಿಸುತ್ತೇವೆ. ಆತನಿಗಾಗಿ ಶೋಧ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ನಂತರವೂ, ಪದೇ-ಪದೇ ಕುಂಟು ನೆಪ ಹೇಳುತ್ತಿದ್ದಾರೆ. ಪೊಲೀಸರ ನಡೆಯನ್ನು ಗಮನಿಸದರೆ, ಪೊಲೀಸರೇ ಆರೋಪಿಯ ರಕ್ಷಣೆಗೆ ನಿಂತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದ್ದೆ” ಎಂದು ‘ಮಹಿಳಾ ಮುನ್ನಡೆ’ ಸಂಘಟನೆಯ ಮುಖಂಡೆ ಪೂರ್ಣಿಮಾ ಆರೋಪಿಸಿದ್ದಾರೆ.

“ಹರ್ಷಿತಾ ಮೇಲೆ ಹಲ್ಲೆ ನಡೆಸಿರುವುದಕ್ಕೆ ವೈದ್ಯಕೀಯ ದಾಖಲೆಗಳಿವೆ. ಆಕೆಗೆ ಗರ್ಭಪಾತವಾಗಿರುವ ಎಂಎಲ್‌ಸಿ ವರದಿಯಿದೆ. ಆದರೂ, ಆತನ ವಿರುದ್ಧ ಎಫ್‌ಐಆರ್‌ ದಾಖಲಾಗಿಲ್ಲ. ಅಲ್ಲದೆ, ಅಶೋಕನೇ ಹರ್ಷಿತಾಗೆ ಕರೆ ಮಾಡಿ, ‘ನೀನು ಪೊಲೀಸ್‌ ಕಂಪ್ಲೇಂಟ್‌ ನೀಡಿದರೂ ನಾನು ಹೆದರುವುದಿಲ್ಲ. ಪೊಲೀಸರಿಗೆ ದುಡ್ಡು ಕೊಟ್ಟಿದ್ದೇನೆ. ಇನ್ನೊಮ್ಮೆ ದೂರು ಕೊಡಲು ಹೋದರೆ, ನಿನ್ನನ್ನೇ ಸಾಯಿಸುತ್ತೇನೆ’ ಎಂದು ಬೆದರಿಕೆಯನ್ನೂ ಹಾಕಿದ್ದಾನೆ. ಪೊಲೀಸರು ನಿಜವಾಗಿಯೂ ಆತನಿಂದ ಹಣ ಪಡೆದು, ಯುವತಿಗೆ ಅನ್ಯಾಯ ಮಾಡುತ್ತಿದ್ದಾರೆಯೇ? ದೂರು ಕೊಟ್ಟು ನಾಲ್ಕು ತಿಂಗಳಾದರೂ ಎಫ್‌ಐಆರ್‌ ದಾಖಲಾಗಿಲ್ಲ. ದೂರು ಕೊಟ್ಟ ದಿನ ಎಫ್‌ಐಆರ್‌ ದಾಖಲಿಸದೆ, ಪೊಲೀಸರು ತಮಗಿಷ್ಟ ಬಂದ ದಿನ ಎಫ್‌ಐಆರ್‌ ದಾಖಲಿಸಬಹುದೆಂಬುದು ಯಾವ ಕಾನೂನಿನಲ್ಲಿದೆ” ಎಂದು ಪೂರ್ಣಿಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹರ್ಷಿತಾ ಮಾತ್ರವಲ್ಲದೆ, ಇನ್ನೂ ಕೆಲವು ಹೆಣ್ಣು ಮಕ್ಕಳನ್ನು ಪುಸಲಾಯಿಸಿ, ಅವರೊಂದಿಗೆ ಸುತ್ತಾಡಿದ್ದಾನೆ. ಆತಕ, ನಯವಂಚಕ ಬುದ್ದಿಗೆ ಹಲವು ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಆತನಿಂದ ಹೆಣ್ಣು ಮಕ್ಕಳ ಬದುಕು ಉಳಿಯಬೇಕೆಂದರೆ ಆತನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಅತ್ಯಾಚಾರಗಳು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಇಂತಹ ಆರೋಪಿಗಳನ್ನು ರಕ್ಷಿಸಿದರೆ, ಸಮಾಜಕ್ಕೆ ಕಂಟಕವಾಗುತ್ತಾರೆ. ಆತನನ್ನು ಕೂಡಲೇ ಬಂಧಿಸಬೇಕು. ಆತನ ವಿರುದ್ಧ ಎಫ್‌ಐಆರ್‌ ದಾಖಲಿಸದ, ಆತನನ್ನು ಬಂಧಿಸದ ಎಸ್‌ಐ ಆನಂದ್‌ ವಿರುದ್ಧ ಕ್ರಮ ಕೈಗೊಂಡು, ಸೇವೆಯಿಂದ ಅಮಾನತುಗೊಳಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X