ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟದ ದಲಿತ ಯುವಕ ಜಯಕುಮಾರ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದೆ.
ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಡಿವೈಎಸ್ಪಿ ಚೆಲುವರಾಜು, ಸರ್ಕಲ್ ಇನ್ಸ್ಪೆಕ್ಟರ್ ಆನಂದೇಗೌಡ, ಪಿಎಸ್ಐ ಸುಬ್ಬಯ್ಯ, ದಬೇದಾರ್ ವೈರಮುಡಿಗೌಡ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿವಾಕರ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿದರು.
ಕಳೆದ ಮೇ 16ರಂದು ಜಯಕುಮಾರ್ ಅವರು ನೀಡಿದ್ದ ದೂರಿಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಮೇ 17ರಂದು ಜಯ ಕುಮಾರ್ ಅವರ ಸಾವು ಸಂಭವಿಸಿದೆ. ಸಾವಿನ ನಂತರ ಅವರ ಮಡದಿ ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದರೆ, ಅದನ್ನು ಆತ್ಮಹತ್ಯೆ ಎಂದು ಬದಲಾಯಿಸಿಕೊಂಡು ಪ್ರಕರಣದ ದಿಕ್ಕು ತಪ್ಪಿಸಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಠಿಣ ಕ್ರಮ ವಹಿಸಲು ಮಂಡ್ಯ ಜಿಲ್ಲಾಧಿಕಾರಿಯಾಗಿ ಮುಂದಾಗುತ್ತಿಲ್ಲ. ಆದ ಕಾರಣ ಡಿಎಜಿಪಿ ಅವರು ಸ್ಥಳಕ್ಕೆ ಆಗಮಿಸಬೇಕು. ಇದು ಅಲ್ಲಿಯೂ ಬಗೆಹರಿಯಲಿಲ್ಲ ಎಂದರೆ ರಾಜ್ಯಮಟ್ಟಕ್ಕೆ ಗೃಹ ಸಚಿವರಿಗೆ, ಮುಖ್ಯಮಂತ್ರಿಯವರಿಗೆ ಒತ್ತಡ ಹೇರುವುದಾಗಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.
ಧರಣಿಯಲ್ಲಿ ಕೆ ಎಸ್ ಎಸ್ ನ ಹೆಚ್ ಎನ್ ನರಸಿಂಹಮೂರ್ತಿ, ಡಿ ಎಸ್ ಎಸ್ ಕೃಷ್ಣ, ದ್ರಾವಿಡ ಕನ್ನಡಿಗರು ಅಭಿ ಒಕ್ಕಲಿಗ, ಎ ವಿ ಎಸ್ ಎಸ್ ಬಾಲರಾಜು, ಕರವೇ ಹೆಚ್.ಡಿ.ಜಯರಾಂ, ಕಣಿವೆ ಯೋಗೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.