“ನಾನು ಅನಕ್ಷರಸ್ಥಳೆಂದು ಸಂಪೂರ್ಣವಾಗಿ ತಿಳಿದಿದ್ದ ಕೆ.ಆರ್.ಪೇಟೆ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನನ್ನ ಗಂಡನ ಕೊಲೆಯನ್ನು ಆತ್ಮಹತ್ಯೆ ಪ್ರಕರಣವನ್ನಾಗಿ ಪರಿವರ್ತಿಸಿದ್ದಾರೆ" ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಾದ ದಲಿತ ವ್ಯಕ್ತಿಯ ಅನುಮಾನಾಸ್ಪದ ಸಾವಿನಲ್ಲಿ ಕೆ.ಆರ್.ಪೇಟೆ ಪೊಲೀಸರು ಕರ್ತವ್ಯ ಲೋಪ ಎಸಗಿರುವ ಗಂಭೀರ ಆರೋಪ ಬಂದಿದೆ.
ದಲಿತ ವ್ಯಕ್ತಿ ಜಯಕುಮಾರ್ ಅನುಮಾನಾಸ್ಪದ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ನಮೂದಿಸಿದ್ದು, ಆದರೆ ಇದು ಕೊಲೆಯೆಂದು ಮೃತನ ಪತ್ನಿ ಲಕ್ಷ್ಮಿ ಕೆ.ಬಿ. ಅವರು ಮಂಡ್ಯ ಪೊಲೀಸ್ ಉಪ ಅಧೀಕ್ಷಕರಿಗೆ (ಡಿವೈಎಸ್‌ಪಿ) ದೂರು ಸಲ್ಲಿಸಿದ್ದಾರೆ.
ಅನಕ್ಷರಸ್ಥರಾದ ಲಕ್ಷ್ಮಿ ಅವರಿಗೆ ಪೊಲೀಸರು ಓದಿ ಹೇಳಿರುವುದೇ ಒಂದು, ಆದರೆ ದೂರಿನಲ್ಲಿ ಇರುವುದೇ ಮತ್ತೊಂದು ಎಂಬ ಸಂಗತಿ ಆಘಾತ ತಂದಿದೆ.
“ನಾನು ಅನಕ್ಷರಸ್ಥಳೆಂದು ಸಂಪೂರ್ಣವಾಗಿ ತಿಳಿದಿದ್ದ ಕೆ.ಆರ್.ಪೇಟೆ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನನ್ನ ಗಂಡನ ಕೊಲೆಯನ್ನು ಆತ್ಮಹತ್ಯೆ ಪ್ರಕರಣವನ್ನಾಗಿ ಪರಿವರ್ತಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ತಾವುಗಳು ನನ್ನ ಗಂಡನನ್ನು ಕೊಲೆಮಾಡಿರುವ ಅನಿಲ್ ಕುಮಾರ್‌ನ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ” ಎಂದು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.
ಲಕ್ಷ್ಮಿ ಅವರ ದೂರಿನಲ್ಲಿ ಏನಿದೆ?
ನಮ್ಮ ಗ್ರಾಮದ ಸರ್ವೆ ಸಂಖ್ಯೆ 5ರಲ್ಲಿ ಸುಮಾರು 1.20 ಎಕರೆ ವಿಸ್ತೀರ್ಣದ ಜಮೀನು ನಮ್ಮ ಕುಟಂಬದ ಹೆಸರಿನಲ್ಲಿದ್ದು, ಅದರಲ್ಲಿ ಜೀವನೋಪಾಯಕ್ಕಾಗಿ ವ್ಯವಸಾಯ ಮಾಡಿಕೊಂಡಿರುತ್ತೇವೆ. ನಮ್ಮ ಜಮೀನಿನ ಪಕ್ಕದಲ್ಲಿ ಗೋಮಾಳ ಭೂಮಿ ಇದೆ, ಇದು ಕಳೆದ 25 ರಿಂದ 30 ವರ್ಷಗಳಿಂದ ಕೃಷಿ ಉದ್ದೇಶಗಳಿಗಾಗಿ ನಮ್ಮ ನಿರಂತರ ಸ್ವಾಧೀನ ಮತ್ತು ಅನುಭವದಲ್ಲಿರುತ್ತದೆ. ಈ ಭೂಮಿಯು ನನ್ನ ಗಂಡನ ತಾಯಿ ಶ್ರೀಮತಿ ದೇವಮ್ಮ ಅವರ ಹೆಸರಿನಲ್ಲಿರುತ್ತದೆ. ಈ ಭೂಮಿಯನ್ನು ಸಮತಟ್ಟು ಮಾಡಿ ಕೃಷಿಯೋಗ್ಯವಾಗಿಸಲು, ನಾವು ಜೆಸಿಬಿ ಬಳಸಿ ಅಭಿವೃದ್ಧಿ ಮಾಡುತ್ತಿದ್ದೆವು.

ಅದಾಗ್ಯೂ, ನಮ್ಮ ಗ್ರಾಮದ ನಿವಾಸಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಅನಿಲ್ ಕುಮಾರ್ ಬಿನ್ ನಿಂಗೇಗೌಡ ಅವರು ನಾವು ಸಾಗುವಳಿ ಮಾಡುತ್ತಿದ್ದ ಭೂಮಿಯಲ್ಲಿ ಅಕ್ರಮವಾಗಿ ಹುಲ್ಲಿನ ಮೆದೆಯನ್ನು ಹಾಕಿದ್ದರು. ಈ ಸಂಬಂಧ ದಿನಾಂಕ 15/05/2025ರಂದು, ನನ್ನ ಪತಿ ಭೂಮಿಯನ್ನು ಸಮತಟ್ಟು ಮಾಡಲು ಹುಲ್ಲಿನ ಮೆದೆಯನ್ನು ತೆಗೆದುಹಾಕುವಂತೆ ಕೇಳಿದಾಗ, ಅನಿಲ್ ಕುಮಾರ್ ಅವರನ್ನು ಅವ್ಯಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿ, “ಇಲ್ಲಿಯೇ ಮುಗಿಸಿ ಈ ಹುಲ್ಲಿನ ಮೆದೆಯಲ್ಲೇ ಸುಟ್ಟು ಹಾಕುತ್ತೇನೆ” ಎಂದು ಬೆದರಿಕೆ ಹಾಕಿದ್ದನು. ಈ ವಿಷಯವನ್ನು ನನ್ನ ಪತಿಯು ಅಂದೇ ನನಗೆ ತಿಳಿಸಿರುತ್ತಾರೆ. ಮಾರನೆಯ ದಿನ ದಿನಾಂಕ 16/05/2025ರಂದು ನನ್ನ ಪತಿಯು ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿಕೊಟ್ಟು ಅನಿಲ್ ಕುಮಾರ್‌ನ ವಿರುದ್ಧ ದೂರು ನೀಡಿರುತ್ತಾರೆ. ಆದರೆ ಪೊಲೀಸರು ದೂರು ದಾಖಲು ಮಾಡದೆ, ಅನಿಲ್ ಕುಮಾರ್‌ನನ್ನು ಕರೆದು ಬುದ್ದಿ ಹೇಳುವುದಾಗಿ ತಿಳಿಸಿ ಕಳುಹಿಸಿಕೊಟ್ಟಿರುತ್ತಾರೆ.
ಇದನ್ನೂ ಓದಿರಿ: ವೈರಸ್ ಇಂಜೆಕ್ಟ್ ಮಾಡಿ ಸಾಮೂಹಿಕ ಅತ್ಯಾಚಾರ; ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ಐಆರ್
ದಿನಾಂಕ 17/05/2025ರಂದು, ಮಧ್ಯಾಹ್ನ 3:30ರ ಸುಮಾರಿಗೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತಿಗೆ ಊಟವನ್ನು ಕೊಡಲು ನಾನು ಜಮೀನಿಗೆ ಹೋದೆ, ಅಲ್ಲಿ ಹುಲ್ಲಿನ ಮಧ್ಯೆ ಬೆಂಕಿಯಲ್ಲಿ ಉರಿಯುತ್ತಿರುವುದನ್ನು ನಾನು ನೋಡಿದೆ. ಹತ್ತಿರವಾಗಿ ನೋಡಿದಾಗ, ನನ್ನ ಪತಿ ಬೆಂಕಿಯಲ್ಲಿ ಸುಟ್ಟು ಹೋಗುತ್ತಿರುವುದು ಕಂಡುಬಂದಿತು. ತಕ್ಷಣಕ್ಕೆ ಕಿರುಚಿಕೊಂಡಾಗ ನಮ್ಮ ಗ್ರಾಮದಲ್ಲಿರುವ ಅಕ್ಕಪಕ್ಕದ ಮನೆಯ ಜನಗಳು ಓಡಿ ಬಂದರು, ಆಗ್ನಿ ಶಾಮಕದಳಕ್ಕೆ ಮಾಹಿತಿ ತಿಳಿಸಿದರು. ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದರು, ಆ ಕಾಲಕ್ಕೆ ಪೊಲೀಸರು ಸಹ ಸ್ಥಳಕ್ಕೆ ಬಂದರು. ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸಿ ನೋಡಿದಾಗ ನಮ್ಮ ಪತಿಯು ಮೃತಪಟ್ಟಿರುವುದು ತಿಳಿದುಬಂತು.
ದಿನಾಂಕ 15-5-2025 ರಂದು ಅನಿಲ್ ಕುಮಾರ್ ನನ್ನ ಪತಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದನು. ಆತನೇ ನನ್ನ ಗಂಡನನ್ನು ಕೊಲೆ ಮಾಡಿ ಜಮೀನಿನಲ್ಲಿದ್ದ ಹುಲ್ಲಿನ ಮದೆಗೆ ಬೆಂಕಿ ಹಾಕಿ ನನ್ನ ಗಂಡನ ದೇಹವನ್ನು ಸುಟ್ಟುಹಾಕಿ ಸಾಕ್ಷ್ಯ ನಾಶ ಮಾಡಲು ಪ್ರಯತ್ನ ಪಟ್ಟಿರುತ್ತಾನೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.
17.05.2025 ರಂದು ಈ ಸಂಬಂಧ ನಾನು ದೂರನ್ನು ಕೆ.ಆರ್. ಪೇಟೆ ಪೊಲೀಸ್ ಠಾಣೆಗೆ ನೀಡಿದ್ದಾಗ, ಅದರಲ್ಲಿ ಲೋಪಗಳು ಇದ್ದಾವೆ ಎಂದು ತಿಳಿಸಿ ಅದನ್ನು ಪಡೆಯದೆ ನನ್ನನ್ನು ಪೊಲೀಸರು ಪೊಲೀಸ್ ಠಾಣೆಯ ಒಳಗೆ ಕರೆದುಕೊಂಡು ಹೋದರು. ಪತ್ರವೊಂದನ್ನು ತೋರಿಸಿ ನನ್ನ ಗಂಡನಿಗೆ ಮತ್ತು ನಮ್ಮ ಕುಟಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ವಿಶ್ವಾಸವನ್ನು ಮೂಡಿಸಿ ಹಾಗೂ ನನ್ನನ್ನು ನಂಬುವಂತೆ ಮಾಡಿ ನನ್ನ ಸಹಿಯನ್ನು ಪಡೆದಿರುತ್ತಾರೆ. ನಾನು ಅನಕ್ಷರಸ್ಥಳಾಗಿದ್ದೇನೆ, ಪೊಲೀಸರು ಆ ಪತ್ರದಲ್ಲಿ ಏನು ಬರೆದುಕೊಂಡಿದ್ದರು ಎಂಬುದನ್ನು ನನಗೆ ಓದಿ ತಿಳಿಸಲಿಲ್ಲ. ನಾನು ಸಹ ಮಾನಸಿಕವಾಗಿ ತುಂಬಾ ಆಘಾತಕ್ಕೊಳಗಾಗಿದ್ದರಿಂದ ಯಾರ ಬಳಿಯೂ ಪೊಲೀಸರು ಓದಿಸಿದ ಪತ್ರದಲ್ಲಿ ಏನಿದೆ ಎನ್ನುವುದನ್ನು ಓದಿಸಿ ತಿಳಿದುಕೊಳ್ಳುವುದಕ್ಕೆ ಆಗಲಿಲ್ಲ.
ಇದನ್ನೂ ಓದಿರಿ: ಎಂದಿಗೂ ಕನ್ನಡ ಮಾತಾಡಲ್ಲ, ಹಿಂದಿಯಲ್ಲೇ ಮಾತಾಡ್ತೀನಿ: ಎಸ್‌ಬಿಐ ಮ್ಯಾನೇಜರ್ ವಿಡಿಯೋ ವೈರಲ್, ತೀವ್ರ ಟೀಕೆ
ಆದರೆ ಎರಡು ದಿನಬಿಟ್ಟು, ಅಂದರೆ ದಿನಾಂಕ 19.05.2025 ರಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ನನ್ನ ಗಂಡನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದ್ದು, ಆ ವಿಷಯ ನನಗೆ ತಿಳಿದಾಗ ನಾನು ಮತ್ತಷ್ಟು ಮಾನಸಿಕವಾಗಿ ಆಘಾತವಾಗಿರುತ್ತೇನೆ. ನನಗೆ ಓದು ಬರಹ ಬರುವುದಿಲ್ಲ ಎಂಬುದನ್ನು ಅರಿತುಕೊಂಡ ಕೆ.ಆರ್.ಪೇಟೆ ಪೊಲೀಸರು, ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಮೂದಿಸಿ ದೂರು ದಾಖಲಿಸಿಕೊಂಡಿದ್ದಾರೆ.
ನಾನು ಅನಕ್ಷರಸ್ಥಳೆಂದು ಸಂಪೂರ್ಣವಾಗಿ ತಿಳಿದಿದ್ದ ಕೆ.ಆರ್.ಪೇಟೆ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನನ್ನ ಗಂಡನ ಕೊಲೆಯನ್ನು ಅತ್ಮಹತ್ಯೆ ಪ್ರಕರಣವನ್ನಾಗಿ ಪರಿವರ್ತಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ತಾವುಗಳು ನನ್ನ ಗಂಡನನ್ನು ಕೊಲೆಮಾಡಿರುವ ಅನಿಲ್ ಕುಮಾರ್‌ನ ವಿರುದ್ಧ ಸೂಕ್ತ ಕಾನೂನು ಕ್ರಮತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
- ಲಕ್ಷ್ಮಿ ಕೆ.ಬಿ.