ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರ ಜಾರಿಗೊಳಿಸಿರುವ ಎಲ್ಲ ಕಲ್ಯಾಣ ಯೋಜನೆಗಳು ಮತ್ತು ಸೌಲಭ್ಯಗಳು ಸಮರ್ಪಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ತಲುಪುವಂತೆ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಶಂಕರ ಅಂಕನಶೆಟ್ಟಿಪುರ ಸೂಚಿಸಿದರು.
ಮಂಡ್ಯ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಸ್ವಚ್ಛತಾ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಶ್ರಮಕ್ಕೆ ತಕ್ಕ ಗೌರವ, ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಆರೋಗ್ಯ, ಶಿಕ್ಷಣ, ವಸತಿ, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳು ಅರ್ಹ ಪ್ರತಿಯೊಬ್ಬ ಸ್ವಚ್ಛತಾ ಕಾರ್ಮಿಕರಿಗೂ ತಲುಪುವಂತೆ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರು ಹಾಗೂ ಅಧಿಕಾರಿಗಳಿಗೆ ಹಲವು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದರು. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರತಿ ಹಳ್ಳಿಗೂ ಕನಿಷ್ಠ ಒಬ್ಬ ಸ್ವಚ್ಛತಾ ಕಾರ್ಮಿಕರನ್ನು ಶಾಶ್ವತವಾಗಿ ನೇಮಕ ಮಾಡಬೇಕು. ನಿವೇಶನ ಹಾಗೂ ವಸತಿ ಸೌಲಭ್ಯದಿಂದ ವಂಚಿತರಾಗಿರುವ ಸ್ವಚ್ಛತಾ ಕಾರ್ಮಿಕರ ಕುಟುಂಬಗಳಿಗೆ ನಿವೇಶನ ಮತ್ತು ಮನೆಗಳನ್ನು ಒದಗಿಸಬೇಕು. ಅರ್ಹ ಕುಟುಂಬಗಳಿಗೆ ತಲಾ ಎರಡು ಎಕರೆ ಸರ್ಕಾರಿ ಭೂಮಿ ನೀಡುವ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಸ್ವಚ್ಛತಾ ಕಾರ್ಮಿಕರಿಗೆ ಪ್ರಸವದ ಸಂದರ್ಭದಲ್ಲಿ ಆರೂವರೆ ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು. ಅರುಂಧತಿಯಾರ್ ಮಹಾಸಭಾದ ರಾಜ್ಯಾಧ್ಯಕ್ಷ ಆರ್. ಕೃಷ್ಣ, ಜಿಲ್ಲಾಧ್ಯಕ್ಷೆ ನಾಗಮಣಿ, ಕುಮಾರ್ ಬನ್ನಾರಿ ಸೇರಿದಂತೆ ಹಲವು ಮುಖಂಡರು ಮಾತನಾಡಿ, ಸ್ವಚ್ಛತಾ ಕಾರ್ಮಿಕರ ಹಕ್ಕುಗಳು, ಸಾಮಾಜಿಕ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಈ ವಿಶೇಷ ವೀಡಿಯೊ ನೋಡಿ :https://youtu.be/thXOVUyNnoI?si=iff1RWgTAGsLR0GU

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಕಾರ್ಯನಿರ್ವಹಕ ತಾಲೂಕು ಅಧಿಕಾರಿ ಶ್ರೀನಿವಾಸ್ ಮೂರ್ತಿ, ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಜಿಲ್ಲಾ ನಗರಪಾಲಿಕೆ-ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಹೇಶ್, ಜಿಲ್ಲಾ ಮುಖಂಡ ವಿಜಯ್ ಕುಮಾರ್, ಕಾರ್ಮಿಕ ಮುಖಂಡ ಗಣೇಶ್, ಸಮುದಾಯದ ಮುಖಂಡರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತಾ ಕಾರ್ಮಿಕರು ಇದ್ದರು.






